ನವ ದೆಹಲಿ : ಪೇಟಿಮ್, ಜಿಪೇ, ಫೋನ್‌ಪೇ ಮಾದರಿಯ ಯಾವುದೇ ಯುಪಿಐ ಆಧಾರಿತ ಪೇಮೆಂಟ್ (UPI Payment) ಮೇಲೆ ಶುಲ್ಕವನ್ನು ವಿಧಿಸುವುದಿಲ್ಲ. ಅಂಥ ಯೋಜನೆಯೂ ಇಲ್ಲ. ಹಿಂದಿನ ವರ್ಷದಂತೆ ಈ ಬಾರಿಯೂ ಡಿಜಿಟಲ್ ಪೇಮೆಂಟ್‌ಗೆ ಹಣಕಾಸಿನ ನೆರವು ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಭಾನುವಾರ ಪ್ರಕಟಿಸಿದೆ.
ಕೆಲವು ದಿನಗಳ ಹಿಂದೆ ಯುಪಿಐ ಹಣ ವರ್ಗಾವಣೆಗೆ ಶುಲ್ಕ ವಿಧಿಸಲು ಆರ್‌ಬಿಐ ಸಿದ್ಧವಾಗಿದೆ ಎಂಬುದಾಗಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ ಎರಡು ಟ್ವೀಟ್‌ಗಳನ್ನು ಮಾಡಿರುವ ಹಣಕಾಸು ಸಚಿವಾಲಯ, ಅಂಥ ಯೋಜನೆಗಳು ಇಲ್ಲ ಎಂದು ಹೇಳಿದೆ.
ನಾನಾ ರೀತಿಯ ಹಣ ವರ್ಗಾವಣೆಗೆ ದರ ವಿಧಿಸುವ ಸುದ್ದಿಯು ಸ್ವಲ್ಪ ಮಟ್ಟಿನ ಸಂಚಲನ ಉಂಟು ಮಾಡಿತ್ತು. ಹಾಗೇನಾದರೂ ಆರ್‌ಬಿಐ ಪ್ರಸ್ತಾಪವನ್ನು ಒಪ್ಪಿಕೊಂಡರೆ ಬಜ್ಜಿ- ಬೋಂಡ ಖರೀದಿಯಂತಹ ಸಣ್ಣ ವ್ಯವಹಾರ ಮಾಡುವಾಗಲೂ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಆತಂಕ ಎದುರಾಗಿತ್ತು. ಆದರೆ, ಹಣಕಾಸು ಸಚಿವಾಲಯ ಎಲ್ಲ ಊಹಾಪೂಹಗಳಿಗೆ ತೆರೆ ಎಳೆದಿದೆ.
ಟ್ವೀಟ್‌ನಲ್ಲಿ ಏನಿದೆ?
ಡಿಜಿಟಲ್ ಪೇಮೆಂಟ್ ಸಮಾಜ ಹಾಗೂ ಉತ್ಪಾದಕತೆಗೆ ಅನುಕೂಲಕರ ಹಾಗೂ ಆರ್ಥಿಕತೆಗೂ ನೆರವು ನೀಡುತ್ತದೆ. ಹೀಗಾಗಿ ಯುಪಿಐ ಪೇಮೆಂಟ್‌ಗೆ ಶುಲ್ಕ ವಿಧಿಸುವ ಯಾವುದೇ ಯೋಚನೆಗಳು ನಮ್ಮ ಮುಂದಿಲ್ಲ. ಸೇವಾದಾರರಿಗೆ ಆಗುವ ವೆಚ್ಚವನ್ನು ಭರಿಸಲು ಬೇರೆ ಮಾರ್ಗವನ್ನು ಹುಡುಕಲಾಗಿದೆ.
ಡಿಜಿಟಲ್ ಪಾವತಿಯ ವ್ಯವಸ್ಥೆಗೆ ಪ್ರೇರಣೆ ನೀಡಲು ಸರಕಾರ ಕಳೆದ ವರ್ಷವೂ ಅನುದಾನ ನೀಡಿತ್ತು. ಅದನ್ನು ಈ ವರ್ಷವೂ ಮುಂದುವರಿಸಲಾಗುವುದು ಹಾಗೂ ಇನ್ನಷ್ಟು ಡಿಜಿಟಲ್ ಪೇಮೆಂಟ್ ಮಾದರಿಯನ್ನು ಜಾರಿಗೆ ತರಲಾಗುವುದು. ಡಿಜಿಟಲ್ ನಗದು ಪಾವತಿ ವ್ಯವಸ್ಥೆ ಕಡಿಮೆ ವೆಚ್ಚದ್ದು ಹಾಗೂ ಬಳಕೆಗೂ ಸುಲಭ,” ಎಂದು ಹೇಳಿದೆ.
ಕೇಂದ್ರ ಸರಕಾರ ಡಿಜಿಟಲ್ ಪೇಮೆಂಟ್ ಮಾದರಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ನಾನಾ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಿದೆ. ಈ ನಡುವೆ ಸೇವಾದಾರರಿಗೆ ನಷ್ಟವಾಗುತ್ತಿದೆ ಎಂಬ ಧ್ವನಿ ಕೇಳಿ ಬಂದಿತ್ತು. ಈ ನಷ್ಟವನ್ನು ಸರಿ ತೂಗಿಸಲು ಆರ್‌ಬಿಐ ಪೇಮೆಂಟ್ ಮೇಲೆ ಶುಲ್ಕ ವಿಧಿಸಲು ಮುಂದಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ | Charges on payment | ಪೇಟಿಎಂ, ಫೋನ್‌ಪೇ, ಪೇಮೆಂಟ್ ಮೇಲೆ ಶುಲ್ಕ ವಿಧಿಸಲು ಹೊರಟ ಆರ್‌ಬಿಐ