Site icon Vistara News

No confidence motion: ಆ.8ರಿಂದ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆ, 10ರಂದು ಮೋದಿ ಉತ್ತರ

PM Modi

ಹೊಸದಿಲ್ಲಿ: ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಮತ ನಿರ್ಣಯ (No confidence motion) ಕುರಿತ ಚರ್ಚೆಯನ್ನು ಲೋಕಸಭೆ (Loksabha session) ಆಗಸ್ಟ್ 8ರಿಂದ 10ರ ನಡುವೆ ಕೈಗೆತ್ತಿಕೊಳ್ಳಲಿದೆ. ಕೊನೆಯ ದಿನ ಪ್ರತಿಪಕ್ಷಗಳ ಈ ಪ್ರಾಯೋಜಿತ ನಡೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಉತ್ತರಿಸುವ ಸಾಧ್ಯತೆಯಿದೆ.

ಲೋಕಸಭೆಯ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದನ್ನು ವಿಪಕ್ಷ ಒಕ್ಕೂಡ I.N.D.I.A ತಳ್ಳಿಹಾಕಿದೆ. ಸದನವು ತಕ್ಷಣವೇ ಈ ಪ್ರಸ್ತಾಪವನ್ನು ಕೈಗೆತ್ತಿಕೊಳ್ಳಬೇಕು ಎಂದು ಒಕ್ಕೂಟ ಒತ್ತಾಯಿಸಿದೆ. ಸದನವು ಅವಿಶ್ವಾಸ ನಿರ್ಣಯವನ್ನು ತಕ್ಷಣವೇ ಕೈಗೆತ್ತಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಯಾವುದೇ ನಿಯಮಗಳು ಇಲ್ಲ ಎಂದು ಸರ್ಕಾರ ಹೇಳಿದೆ.

ಮಣಿಪುರದಲ್ಲಿ ಮೇ ತಿಂಗಳಲ್ಲಿ ಬಹುಸಂಖ್ಯಾತ ಮೈತಿ ಗುಂಪು ಮತ್ತು ಬುಡಕಟ್ಟು ಕುಕಿ ಅಲ್ಪಸಂಖ್ಯಾತರ ನಡುವೆ ನಡೆದ ಜನಾಂಗೀಯ ಘರ್ಷಣೆಯ (Manipur violence) ಕುರಿತು ಮೋದಿ ಸಂಸತ್ತಿನಲ್ಲಿ ಭಾಷಣ ಮಾಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಈ ಕುರಿತು ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯವನ್ನು ಮಂಡಿಸಿತ್ತು. ಹಿಂಸಾಚಾರದಲ್ಲಿ ಕನಿಷ್ಠ 150 ಜನ ಸಾವನ್ನಪ್ಪಿದ್ದಾರೆ. ಹತ್ತಾರು ಸಾವಿರ ಜನರು ಸ್ಥಳಾಂತರಗೊಂಡಿದ್ದಾರೆ.

ಜುಲೈ 26ರಂದು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ಅವರು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದರು. ನಿಯಮದಂತೆ ಇದಕ್ಕೆ 50ಕ್ಕೂ ಹೆಚ್ಚು ಸಂಸದರ ಬೆಂಬಲ ಅಗತ್ಯವಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಡಿಎಂಕೆಯ ಟಿಆರ್ ಬಾಲು, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಸೇರಿದಂತೆ ಹಲವರು ಎಣಿಕೆಗೆ ನಿಂತಿದ್ದರು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಿಪಿಐ, ಸಿಪಿಐ(ಎಂ), ಶಿವಸೇನೆ (ಉದ್ಧವ್ ಠಾಕ್ರೆ ಬಣ), ಜೆಡಿಯು ಮತ್ತು ಎಎಪಿ ಸೇರಿದಂತೆ 13 ವಿರೋಧ ಪಕ್ಷದ ಸಂಸದರು ತಲೆ ಎಣಿಕೆಗೆ ನಿಂತಿದ್ದರು.

ಮೋದಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಎರಡನೇ ಬಾರಿಗೆ ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿದೆ. ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಮೊದಲ ಅವಿಶ್ವಾಸ ನಿರ್ಣಯವನ್ನು ಜುಲೈ 20, 2018ರಂದು ಮಂಡಿಸಲಾಗಿತ್ತು. ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್‌ನ (ಎನ್‌ಡಿಎ) 325 ಸಂಸದರು ಈ ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದರು; ಕೇವಲ 126 ಮಂದಿ ಮಾತ್ರ ಅವಿಶ್ವಾಸ ಬೆಂಬಲಿಸಿದ್ದರು. ಅದು ಬಿದ್ದುಹೋಗಿತ್ತು.

Exit mobile version