Site icon Vistara News

No Confidence Motion: ಮಣಿಪುರಕ್ಕೆ ಮೋದಿ ಶಾಂತಿಯ ‘ಗ್ಯಾರಂಟಿ’; ಲೋಕಸಭೆಯಿಂದಲೇ ಎದ್ದು ಹೋದ ಪ್ರತಿಪಕ್ಷಗಳು

Narendra Modi Speech In Lok Sabha

Narendra Modi Speech In Lok Sabha On Manipur Violence And No Confidence Motion

ನವದೆಹಲಿ: ಸಂಸತ್ತಿನಲ್ಲಿ ಪ್ರತಿಪಕ್ಷಗಳ ಆಗ್ರಹ, ಆಕ್ರೋಶ, ಗಲಾಟೆ, ಪ್ರತಿಭಟನೆಯ ಮಧ್ಯೆಯೇ ನರೇಂದ್ರ ಮೋದಿ ಅವರು ಮಣಿಪುರ ಹಿಂಸಾಚಾರದ ಕುರಿತು ಮಾತನಾಡಿದರು. “ಮಣಿಪುರದಲ್ಲಿ ನಡೆದ ಹಿಂಸಾಚಾರದ ಕುರಿತು ನಮಗೆ ಕ್ರೋಧವಿದೆ, ಬೇಸರವಿದೆ. ಹೆಣ್ಣುಮಕ್ಕಳ ಗೌರವಕ್ಕೆ ಧಕ್ಕೆಯಾಗಿರುವುದಕ್ಕೆ ನೋವಾಗಿದೆ. ಆದರೆ, ಮಣಿಪುರದಲ್ಲಿ ಶಾಂತಿ ಸ್ಥಾಪನೆಯೇ ನಮ್ಮ ಗುರಿಯಾಗಿದೆ. ಮಣಿಪುರದಲ್ಲಿ ಶಾಂತಿ ಸ್ಥಾಪಿಸಲಾಗುವುದು ಎಂದು ದೇಶದ ಜನರಿಗೆ ಭರವಸೆ ನೀಡುತ್ತೇನೆ” ಎಂಬುದಾಗಿ ಮೋದಿ ಅವಿಶ್ವಾಸ ಗೊತ್ತುವಳಿ ಕುರಿತ ಚರ್ಚೆಯ ವೇಳೆ (No Confidence Motion) ಅಭಯ ನೀಡಿದರು.

ಎದ್ದು ಹೋದ ಪ್ರತಿಪಕ್ಷಗಳ ನಾಯಕರು

ನರೇಂದ್ರ ಮೋದಿ ಅವರು ಭ್ರಷ್ಟಾಚಾರ, ಕೌಟುಂಬಿಕ ರಾಜಕಾರಣ, ಒಂದೇ ಕುಟುಂಬದ ಪ್ರಾಬಲ್ಯ, ಕಾಂಗ್ರೆಸ್‌ ಗ್ಯಾರಂಟಿ ಸೇರಿ ಹಲವು ವಿಷಯಗಳನ್ನು ಉಲ್ಲೇಖಿಸಿ ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು. ಇದೇ ವೇಳೆ ಮಣಿಪುರ ಹಿಂಸಾಚಾರದ ಬಗ್ಗೆ ಮಾತನಾಡಿ ಎಂದು ಪ್ರತಿಪಕ್ಷಗಳು ಒತ್ತಾಯಿಸಿದವು. ಆದರೆ, ಮೋದಿ ಅವರು ಹೆಚ್ಚು ಟೀಕಿಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಹಲವು ನಾಯಕರು ಲೋಕಸಭೆಯಿಂದಲೇ ಎದ್ದು ಹೊರನಡೆದರು. ಆ ಮೂಲಕ ಮೋದಿ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು.

ಮೋದಿ ಭಾಷಣದ ಲೈವ್‌

ಹೇಡಿತನ ಎಂದು ಕುಟುಕಿದ ಮೋದಿ

ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಕುರಿತು ಚರ್ಚಿಸದೆ, ಪ್ರತಿಭಟಿಸಿ ಎದ್ದು ಹೋಗಿದ್ದನ್ನು ಕೂಡ ಮೋದಿ ಟೀಕಿಸಿದರು. “ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳಿಗೆ ಚರ್ಚೆ, ತಾಳ್ಮೆ, ಮಾತುಕತೆಯಲ್ಲಿ ನಂಬಿಕೆ ಇಲ್ಲ. ಹಾಗಾಗಿಯೇ, ಸಂಸತ್ತಿನ ಕಲಾಪವನ್ನು ಧಿಕ್ಕರಿಸಿ ಎದ್ದು ಹೋಗುವ ಮೂಲಕ ಹೇಡಿತನ ಪ್ರದರ್ಶಿಸಿವೆ” ಎಂದು ಹೇಳಿದರು.

ಇದನ್ನೂ ಓದಿ: No Confidence Motion: I.N.D.I.Aದಲ್ಲೂ N.D.A ಇದೆ, ಯುಪಿಎಗೆ ಶ್ರಾದ್ಧ ಮಾಡಲಾಗಿದೆ; ಸಂಸತ್ತಲ್ಲಿ ಮೋದಿ ಮಾತಿನೇಟು

ಮಣಿಪುರ ಹಿಂಸೆಗೆ ಕಾಂಗ್ರೆಸ್‌ ಕಾರಣ

“ಮಣಿಪುರ ಹಿಂಸಾಚಾರದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಮಣಿಪುರ ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಮಣಿಪುರ ಹಿಂಸಾಚಾರಕ್ಕೆ ಕಾಂಗ್ರೆಸ್ಸೇ ಮೂಲ ತಾಯಿಯಾಗಿದೆ. ಮಣಿಪುರದಲ್ಲಿ ಬಂಡುಕೋರರ ಮರ್ಜಿಯಂತೆ ಸರ್ಕಾರ ನಡೆಯುತ್ತಿತ್ತು. ಆಗ ಕಾಂಗ್ರೆಸ್‌ ಆಡಳಿತ ಇತ್ತು. ಮಣಿಪುರದಲ್ಲಿ ಮಹಾತ್ಮ ಗಾಂಧೀಜಿಯವರ ಭಾವ ಚಿತ್ರ ಇಡಲು ನಕಾರ ಇತ್ತು. ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಫೋಟೊ ಬಳಿ ಬಾಂಬ್‌ ಸ್ಫೋಟವಾಗುತ್ತಿತ್ತು. ಮಣಿಪುರದಲ್ಲಿ 4 ಗಂಟೆ ಬಳಿಕ ಪೂಜೆ ಮಾಡಲು ಆಗುತ್ತಿರಲಿಲ್ಲ. ಮಣಿಪುರದ ಲೈಬ್ರರಿಗಳಲ್ಲಿರುವ ಪುಸ್ತಕಗಳನ್ನು ಸುಡಲಾಗುತ್ತಿತ್ತು. ಆಗೆಲ್ಲ ಅಧಿಕಾರದಲ್ಲಿ ಇದ್ದಿದ್ದು ಕಾಂಗ್ರೆಸ್”‌ ಎಂದು ಪ್ರಧಾನಿ ಟೀಕಿಸಿದರು.

ರಾಹುಲ್‌ ಗಾಂಧಿ ಹೇಳಿಕೆಗೆ ಬೇಸರ

“ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ” ಎಂದು ಸಂಸತ್ತಿನಲ್ಲಿ ರಾಹುಲ್‌ ಗಾಂಧಿ ನೀಡಿದ ಹೇಳಿಕೆಗೆ ರಾಹುಲ್‌ ಗಾಂಧಿ ಬೇಸರ ವ್ಯಕ್ತಪಡಿಸಿದರು. “ಭಾರತ ಮಾತೆಯ ಬಗ್ಗೆ ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ. ತಾಯಿ ಭಾರತಿಯ ಬಗ್ಗೆ ಏನೇನೋ ಪದಗಳನ್ನು ಬಳಸಲಾಗುತ್ತಿದೆ. ಆದರೆ, ತಾಯಿ ಭಾರತಿಯ ಬಗ್ಗೆ ಹೀಗೆ ಮಾತನಾಡುವುದು ಖಂಡನೀಯ. ರಾಜಕೀಯ ಕಾರಣಕ್ಕಾಗಿ ದೇಶವನ್ನು ದೂರುವುದು, ಅವಹೇಳನ ಮಾಡುವುದು ವಿಷಾದನೀಯ” ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.

Exit mobile version