Site icon Vistara News

No Confidence Motion: I.N.D.I.Aದಲ್ಲೂ N.D.A ಇದೆ, ಯುಪಿಎಗೆ ಶ್ರಾದ್ಧ ಮಾಡಲಾಗಿದೆ; ಸಂಸತ್ತಲ್ಲಿ ಮೋದಿ ಮಾತಿನೇಟು

Narendra Modi In Lok Sabha

Narendra Modi In Lok Sabha On No Confidence Motion

ನವದೆಹಲಿ: ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಕುರಿತು (No Confidence Motion) ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತ, ಪ್ರತಿಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ಗೆ ಚಾಟಿಯೇಟು ನೀಡಿದರು. “ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ 26 ಪಕ್ಷಗಳು ಸೇರಿ ಇಂಡಿಯಾ ಎಂಬ ಒಕ್ಕೂಟ ರಚಿಸಿದವು. ಆದರೆ, ಆ ಸಭೆಯಲ್ಲಿ ಯುಪಿಎಗೆ ಶ್ರಾದ್ಧ ಮಾಡಿದವು. ಅಷ್ಟಕ್ಕೂ, N.D.A ಎಂಬ ಪದಕ್ಕೆ ಎರಡು ಐ (I) ರಚಿಸಿದವು. ಒಂದು ಐ 26 ಪಕ್ಷಗಳ ಅಹಂಕಾರ (ಘಮಂಡ್) ಹಾಗೂ ಮತ್ತೊಂದು ಐ ಕುಟುಂಬದ ಅಹಂಕಾರ” ಎಂದು ನರೇಂದ್ರ ಮೋದಿ (Narendra Modi) ಹೇಳಿದರು.

ಮೋದಿ ಭಾಷಣದ ಲೈವ್‌

ಪ್ರತಿಪಕ್ಷಗಳ ಸೀಕ್ರೆಟ್‌ ಬಿಚ್ಚಿಟ್ಟ ಮೋದಿ

“ನನಗೆ ಪ್ರತಿಪಕ್ಷಗಳ ಸೀಕ್ರೆಟ್‌ ನನಗೆ ಗೊತ್ತಾಗಿದೆ. ಅವರು ಯಾರಿಗೇ ಎಷ್ಟು ಕೇಡು ಬಯಸಲಿ, ಕೇಡು ಬಯಸಿದವರಿಗೆ ಒಳ್ಳೆಯದೇ ಆಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ನಾನೇ. ನನಗೆ 20 ವರ್ಷದಿಂದ ಕೇಡು ಬಯಸಿದರು. ಆದರೆ, ನಾನು 20 ವರ್ಷದಿಂದಲೂ ಚೆನ್ನಾಗಿದ್ದೇನೆ ಹಾಗೂ ಜನರ ಬೆಂಬಲ ಪಡೆದು ಪ್ರಧಾನಿಯಾಗಿದ್ದೇನೆ. ಮೂರು ಉದಾಹರಣೆಗಳೊಂದಿಗೆ ಪ್ರತಿಪಕ್ಷಗಳ ಸೀಕ್ರೆಟ್‌ ನಿಮಗೆ ಹೇಳುತ್ತೇನೆ. ಮೊದಲನೆಯದಾಗಿ, ಬ್ಯಾಂಕಿಂಗ್‌ ಸೆಕ್ಟರ್‌ ಕುಸಿಯುತ್ತದೆ ಎಂದು ಹೇಳಿದರು. ವಿದೇಶದಿಂದ ತಜ್ಞರನ್ನು ಕರೆಸಿ ಹೇಳಿದರು. ಆದರೆ ದೇಶದ ಬ್ಯಾಂಕಿಂಗ್‌ ಸೆಕ್ಟರ್‌ ಬಲಿಷ್ಠವಾಗಿದೆ. ಅನುತ್ಪಾದಕ ಆಸ್ತಿಯೂ (Non Performing Asset) ಕುಸಿದಿದೆ” ಎಂದು ಹೇಳಿದರು.

ಇದನ್ನೂ ಓದಿ: No Confidence Motion: ಪ್ರತಿಪಕ್ಷಗಳಿಂದ ನೋ ಬಾಲ್‌, ನಮ್ಮಿಂದ ಸೆಂಚುರಿ ಮೇಲೆ ಸೆಂಚುರಿ; ಕುಟುಕಿದ ಮೋದಿ

ಮೋದಿ ಅವರು ಎರಡನೇ ಉದಾಹರಣೆಯನ್ನೂ ನೀಡಿದರು. “ಎಚ್‌ಎಎಲ್‌ ಬಗ್ಗೆಯೂ ಪ್ರತಿಪಕ್ಷಗಳು ಆರೋಪ ಮಾಡಿದರು. ಎಚ್‌ಎಎಲ್‌ ಮುಚ್ಚುತ್ತದೆ ಎಂದು ಹುಯಿಲೆಬ್ಬಿಸಿದರು. ಆದರೆ, ಎಚ್‌ಎಎಲ್‌ ಈಗ ಹೆಮ್ಮೆಯ ಸಂಸ್ಥೆಯಾಗಿದೆ. ದೇಶದ ರಕ್ಷಣಾ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದೆ” ಎಂದರು. “ಮೂರನೆಯದಾಗಿ ಹೇಳುವುದಾದರೆ, ಎಲ್‌ಐಸಿ ಬಗ್ಗೆ ಅಪಪ್ರಚಾರ ಮಾಡಿದರು. ಅದು ಮುಚ್ಚುತ್ತದೆ ಎಂದರು. ಆದರೆ, ಎಲ್‌ಐಸಿಯೂ ಏಳಿಗೆ ಹೊಂದುತ್ತದೆ. ಪ್ರತಿಪಕ್ಷಗಳಿಗೆ ಭಾರತದ ಏಳಿಗೆ, ದೇಶ ಬಗ್ಗೆ ಹೆಮ್ಮೆ, ವಿಶ್ವಾಸ ಇಲ್ಲ. ಒಂದು ಗಮನದಲ್ಲಿರಲಿ, ದೇಶವು ಮೂರನೇ ಬಲಿಷ್ಠ ಆರ್ಥಿಕತೆ ಹೊಂದಿದ ದೇಶ ಎನಿಸಲಿದೆ” ಎಂದು ತಿಳಿಸಿದರು.

ಕಾಂಗ್ರೆಸ್‌ಗೆ ನೇತಾ ಇಲ್ಲ, ನಿಯತ್ತೂ ಇಲ್ಲ

ಲೋಕಸಭೆಯಲ್ಲಿ ಮೋದಿ ಅವರು ಕಾಂಗ್ರೆಸ್‌ಗೆ ಮಾತಲ್ಲೇ ಚಾಟಿ ಬೀಸಿದರು. “ಕಾಂಗ್ರೆಸ್‌ಗೆ ದೇಶದ ಬಗ್ಗೆ ಗೌರವ ಇಲ್ಲ. ಆ ಪಕ್ಷದಲ್ಲಿ ನಾಯಕ ಇಲ್ಲ, ನಿಯತ್ತಂತೂ ಇಲ್ಲವೇ ಇಲ್ಲ. ಇನ್ನು, ದೂರದೃಷ್ಟಿಯ ಬಗ್ಗೆ ಕೇಳುವುದೇ ಬೇಡ” ಎಂದರು. “1991ರಲ್ಲಿ ಕಾಂಗ್ರೆಸ್‌ ಅವಧಿಯಲ್ಲಿ ದೇಶದ ಆರ್ಥಿಕತೆ ಬುಡಮೇಲಾಗಿತ್ತು. ಆದರೆ, 2014ರಿಂದ ಇದುವರೆಗೆ ಭಾರತವು ವಿಶ್ವ ಐದನೇ ಆರ್ಥಿಕ ಬಲಿಷ್ಠ ರಾಷ್ಟ್ರವಾಗಿದೆ” ಎಂದು ಹೇಳಿದರು.

2028ರಲ್ಲಿ ಮತ್ತೆ ಅವಿಶ್ವಾಸ ಗೊತ್ತುವಳಿ ಮಂಡಿಸಿ

“2028ರಲ್ಲೂ ಕಾಂಗ್ರೆಸ್‌ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲಿ. ಏಕೆಂದರೆ, ಪ್ರತಿಪಕ್ಷಗಳಿಗೆ ತಮ್ಮ ಮೇಲೆಯೇ ತಮಗೆ ವಿಶ್ವಾಸ ಇಲ್ಲ. ನಾವು ಜನಧನ್‌ ಖಾತೆ ತೆರೆಯಲು ಮುಂದಾದಾಗ, ಇವರು ಆಗಲೂ ನಕಾರಾತ್ಮಕವಾಗಿ ಮಾತನಾಡಿದರು. ನಾವು ಯೋಗ, ಆಯುರ್ವೇದ, ಸ್ಟಾರ್ಟಪ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ ಎಂದೆವು. ಆಗೆಲ್ಲ, ಪ್ರತಿಪಕ್ಷಗಳು ನಕಾರಾತ್ಮಕವಾಗಿ ಮಾತನಾಡಿದರು. ಆದರೆ, ಇಂದು ಡಿಜಿಟಲ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ ಸೇರಿ ಎಲ್ಲ ಯೋಜನೆಗಳು ಯಶಸ್ವಿಯಾದವು” ಎಂದು ಕುಟುಕಿದರು.

Exit mobile version