Site icon Vistara News

No Confidence Motion: ಇಂದಿನಿಂದ ಅವಿಶ್ವಾಸ ನಿರ್ಣಯ ಚರ್ಚೆ, ರಾಹುಲ್‌ ಗಾಂಧಿಯಿಂದಲೇ ಆರಂಭ

rahul gandhi

ಹೊಸದಿಲ್ಲಿ: ಲೋಕಸಭೆಯಲ್ಲಿ (lok sabha) ಇಂದಿನಿಂದ ಮೂರು ದಿನಗಳ ಕಾಲ ಅವಿಶ್ವಾಸ‌ ನಿರ್ಣಯದ (No Confidence Motion) ಮೇಲೆ ಚರ್ಚೆ ನಡೆಯಲಿದೆ. ಸಂಸತ್ತಿಗೆ ಮರಳಿ ಬಂದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul gandhi) ಅವರೇ ಎನ್‌ಡಿಎ ಸರ್ಕಾರದ ಮೇಲಿನ ವಾಗ್ದಾಳಿಯ ನಾಯಕತ್ವ ವಹಿಸಲಿದ್ದಾರೆ ಎಂದು ಹೇಳಲಾಗಿದೆ.

ರಾಹುಲ್‌ ಅವರೇ ಪಿಎಂ ನರೇಂದ್ರ ಮೋದಿ (PM Narendra Modi) ಸರ್ಕಾರದ ವಿರುದ್ಧ ಕೆಳಮನೆಯಲ್ಲಿ ಅವಿಶ್ವಾಸ ಚರ್ಚೆಯನ್ನು ಪ್ರಾರಂಭಿಸಲಿದ್ದಾರೆ ಎಂದು ಸಂಸತ್ತಿನ ಮೂಲಗಳು ತಿಳಿಸಿವೆ. “ರಾಹುಲ್ ಗಾಂಧಿ ಖಂಡಿತವಾಗಿಯೂ ಮಾತನಾಡುತ್ತಾರೆ” ಎಂದು ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (mallikarjun kharge) ಅವರು ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಸಹೋದ್ಯೋಗಿಗಳಾದ ಗೌರವ್ ಗೊಗೊಯ್ ಮತ್ತು ಮನೀಶ್ ತಿವಾರಿ ಅವರು ಕಾಂಗ್ರೆಸ್‌ನ ಇತರ ಸ್ಪೀಕರ್‌ಗಳಾಗಲಿದ್ದಾರೆ.

ಮೋದಿ ಉಪನಾಮ ನಿಂದನೆ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರ ಮೇಲೆ ವಿಧಿಸಲಾಗಿದ್ದ ಕ್ರಿಮಿನಲ್ ಮಾನನಷ್ಟ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ (supreme court) ಅಮಾನತುಗೊಳಿಸಿದ ಮೂರು ದಿನಗಳ ನಂತರ, ಸೋಮವಾರ ಲೋಕಸಭೆಯ ಸಂಸದರಾಗಿ ರಾಹುಲ್‌ ಮರಳಿದ್ದಾರೆ. ಅವರನ್ನು ಮಾರ್ಚ್‌ನಲ್ಲಿ ಗುಜರಾತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿತ್ತು. ಸಂಸತ್‌ ಸದಸ್ಯತ್ವಕ್ಕೆ ಅವರು ಅನರ್ಹತೆಗೆ ಒಳಗಾಗಿದ್ದರು. ಸುಪ್ರೀಂ ಕೋರ್ಟ್ ಶುಕ್ರವಾರ ಅವರ ಮೇಲ್ಮನವಿಯನ್ನು ಪರಿಗಣಿಸಿ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದೆ.

ಮಣಿಪುರದ ಗಲಭೆ ವಿಚಾರದಲ್ಲಿ ವಿಪಕ್ಷಗಳು ಸೇರಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಅನುಪಸ್ಥಿತಿಯಲ್ಲಿ ಇಂದಿನಿಂದ ಚರ್ಚೆ ಆರಂಭವಾಗಲಿದೆ. ನಾಳೆ ಅಥವಾ ನಾಡಿದ್ದು ಸರ್ಕಾರದಿಂದ ಉತ್ತರ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಧಾನಿ ಮೋದಿ ಆಗಸ್ಟ್ 10ರಂದು ಉತ್ತರ ನೀಡಲಿದ್ದಾರೆ.

2019ರಲ್ಲೂ ಮೋದಿ ಸರ್ಕಾರದ ವಿರುದ್ಧ ಮೊದಲ ಬಾರಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿತ್ತು. ಆಗ ಸರ್ಕಾರ ಬಹುಮತ ಸಾಬೀತುಪಡಿಸಿತ್ತು. ಆಗಲೇ ಮೋದಿಯವರು, ನನ್ನ ಎರಡನೆ ಅವಧಿಯಲ್ಲೂ ವಿಪಕ್ಷ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿದೆ ಎಂದು ಸಂಸತ್ತಿನಲ್ಲೇ ಹೇಳಿಕೆ ನೀಡಿದ್ದರು. I.N.D.I.A ಬ್ಲಾಕ್‌ನ ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕಳೆದ ವಾರ ಅಂಗೀಕರಿಸಿದ್ದರು. ಅವಿಶ್ವಾಸ ನಿರ್ಣಯದ ಚರ್ಚೆಗೂ ಮುನ್ನ ಭಾರತೀಯ ಜನತಾ ಪಕ್ಷ ಮಂಗಳವಾರ ತನ್ನ ಸಂಸದೀಯ ಪಕ್ಷದ ಸಭೆಯನ್ನು ಕರೆದಿದೆ.

ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ 12 ಗಂಟೆ ಸಮಯ ನಿಗದಿ ಮಾಡಲಾಗಿದೆ. ಇದರಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸುಮಾರು 6 ಗಂಟೆ 41 ನಿಮಿಷಗಳು, ಕಾಂಗ್ರೆಸ್ ಪಕ್ಷಕ್ಕೆ ಸುಮಾರು ಒಂದು ಗಂಟೆ 15 ನಿಮಿಷ, ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ), ಶಿವಸೇನೆ, ಜನತಾ ದಳ -ಯುನೈಟೆಡ್ (ಜೆಡಿಯು), ಬಿಜು ಜನತಾ ದಳ (ಬಿಜೆಡಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮತ್ತು ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ)ಗೆ ಒಟ್ಟು 2 ಗಂಟೆಗಳು, ಇತರ ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಸಂಸದರಿಗೆ 1 ಗಂಟೆ 10 ನಿಮಿಷಗಳ ಕಾಲಾವಕಾಶ ನೀಡಲಾಗಿದೆ.

ಇದನ್ನೂ ಓದಿ: no confidence motion: ನಾಳೆಯಿಂದ ಸಂಸತ್ತಿನಲ್ಲಿ ‘ಅವಿಶ್ವಾಸ’ ಕದನ; ಕಾವೇರಿದ ಚರ್ಚೆಗೆ ಸಾಕ್ಷಿಯಾಗಲಿದೆ ಲೋಕಸಭೆ

Exit mobile version