ಗಾಂಧಿನಗರ: ಜೈನ ದೇವಾಲಯಗಳು (Jain Temples) ಹಾಗೂ ಜೈನ ಯಾತ್ರಿಕರಿಗೆ ಪ್ರಸಿದ್ಧಿ ಪಡೆದಿರುವ ಗುಜರಾತ್‌ನ ಭಾವ್‌ನಗರ ಜಿಲ್ಲೆಯ ಪಾಲಿತಾನಾ (Palitana City) ಪಟ್ಟಣದಲ್ಲಿ ಮಾಂಸಾಹಾರವನ್ನು (Non Veg Ban) ನಿಷೇಧಿಸಲಾಗಿದೆ. ಮಾಂಸ ಮಾರಾಟ, ಮಾಂಸ ಮಾರಾಟ ಕುರಿತು ಬೋರ್ಡ್ ಅಳವಡಿಸುವುದು, ಮಾಂಸ ಸೇವಿಸುವುದನ್ನು ಈ ಪಟ್ಟಣದಲ್ಲಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಆ ಮೂಲಕ ಜಗತ್ತಿನಲ್ಲೇ ಮಾಂಸಾಹಾರವನ್ನು ನಿಷೇಧಿಸಿದ ಮೊದಲ ಪಟ್ಟಣ ಅಥವಾ ನಗರ ಎಂಬ ಖ್ಯಾತಿಗೆ ಪಾಲಿತಾನಾ ಪಾತ್ರವಾಗಿದೆ.
ಜೈನರು ಹಾಗೂ ಜೈನ ಸನ್ಯಾಸಿಗಳಿಗೆ ಹೆಸರುವಾಸಿಯಾಗಿರುವ ಪಟ್ಟಣದಲ್ಲಿ ಸುಮಾರು 250 ಮಾಂಸದಂಗಡಿಗಳಿವೆ ಎಂಬುದಾಗಿ 200 ಜೈನ ಸನ್ಯಾಸಿಗಳು ಪ್ರತಿಭಟನೆ ನಡೆಸಿದ್ದರು. ಪವಿತ್ರ ಯಾತ್ರಾ ಸ್ಥಳಗಳಲ್ಲಿ ಮಾಂಸ ಮಾರಾಟ ನಿಷೇಧಿಸಬೇಕು ಎಂಬುದಾಗಿ ಅವರು ಪಟ್ಟು ಹಿಡಿದಿದ್ದರು. ಹಾಗಾಗಿ, ಪಟ್ಟಣದಲ್ಲಿ ಮಾಂಸ ಮಾರಾಟ, ಸೇವನೆಯನ್ನು ಕಾನೂನುಬಾಹಿರ ಎಂಬುದಾಗಿ ಘೋಷಿಸಲಾಗಿದೆ. ಇದರ ಕುರಿತು ಈಗ ಪರ-ವಿರೋಧ ಚರ್ಚೆಗಳು ಶುರುವಾಗಿವೆ.
ಪಾಲಿತಾನಾ ನಗರದ ಐತಿಹ್ಯವೇನು?
ಗುಜರಾತ್‌ನ ಪಾಲಿತಾನಾ ಪಟ್ಟಣವು ಜೈನ ದೇವಾಲಯಗಳಿಗೆ ಹೆಸರಾಗಿದೆ. ಶತ್ರುಂಜಯ ಗುಡ್ಡಗಾಡು ಪ್ರದೇಶಗಳಲ್ಲಿರುವ ನಗರವು ಜೈನ ದೇವಾಲಯಗಳ ನಗರ ಎಂದೇ ಖ್ಯಾತಿಯಾಗಿದೆ. ಈ ಪಟ್ಟಣದಲ್ಲಿ ಸುಮಾರು 800 ದೇವಾಲಯಗಳಿವೆ. ತುಂಬ ಖ್ಯಾತಿ ಪಡೆದಿರುವ ಆದಿನಾಥ ದೇವಾಲಯವೂ ಇದೆ. ಜೈನರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಪಾಲಿತಾನಾ ನಗರಕ್ಕೆ 5ನೇ ಶತಮಾನದ ಇತಿಹಾಸವಿದೆ. ಜೈನ ಧರ್ಮೀಯರು ಮಾಂಸಾಹಾರ ಸೇವಿಸುವುದಿಲ್ಲ ಹಾಗೂ ಅದನ್ನು ಜೀವನ ಪೂರ್ತಿ ಪಾಲಿಸುತ್ತಾರೆ. ದೇಶ-ವಿದೇಶಗಳಿಂದ ಜೈನರು ಇಲ್ಲಿಗೆ ಆಗಮಿಸುತ್ತಾರೆ. ಪಾಲಿತಾನಾ ನಗರಕ್ಕೆ ಆಗಮಿಸಿ, ಆದಿನಾಥ ದೇವಾಲಯಕ್ಕೆ ಭೇಟಿ ನೀಡಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಜೈನ ಸಮುದಾಯದವರಲ್ಲಿದೆ.
ಗುಜರಾತ್‌ನಲ್ಲಿ ಸಸ್ಯಾಹಾರಕ್ಕೆ ಆದ್ಯತೆ
ಮಹಾತ್ಮ ಗಾಂಧೀಜಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಅವರ ಕೋಟ್ಯಂತರ ಅನುಯಾಯಿಗಳು ಮಾಂಸವನ್ನು ಸೇವಿಸುವುದಿಲ್ಲ. “ನಾನು ಶಾಲಾ ದಿನಗಳಲ್ಲಿ ಮಾಂಸಾಹಾರ ಸೇವಿಸಿದ್ದೆ” ಎಂಬುದಾಗಿ ಗಾಂಧೀಜಿಯವರು ಹೇಳಿದ್ದರೂ, ಬಳಿಕ ಅವರು ಜೀವನಪೂರ್ತಿ ಸಸ್ಯಾಹಾರಿಯಾಗಿದ್ದರು. ವಡೋದರಾ, ಜುನಾಗಢ ಹಾಗೂ ಅಹಮದಾಬಾದ್‌ನಲ್ಲೂ ಇದಕ್ಕೂ ಮೊದಲು ಮಾಂಸ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು.
ಇದನ್ನೂ ಓದಿ: Viral Video: ಊಟದಲ್ಲಿ ಮೀನು-ಮಾಂಸ ಮಿಸ್ಸಿಂಗ್; ನೋಡ ನೋಡ್ತಿದ್ದಂತೆ ಮದುವೆ ಮನೆ ರಣರಂಗ-ಇಲ್ಲಿದೆ ನೋಡಿ ವಿಡಿಯೋ