ಹೈದರಾಬಾದ್: ಲೋಕಸಭೆ ಚುನಾವಣೆ (Lok Sabha Election 2024) ಕಾವು ಬೇಸಿಗೆಯ ಬಿಸಿಲಿಗಿಂತ ಜಾಸ್ತಿಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಹಿಡಿದು ಎಲ್ಲ ಪಕ್ಷಗಳ ನಾಯಕರು ಚುನಾವಣೆ ಪ್ರಚಾರ, ಅಭ್ಯರ್ಥಿಗಳ ಆಯ್ಕೆ ಸೇರಿ ಹಲವು ರಣತಂತ್ರ ರೂಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ತೆಲಂಗಾಣದಲ್ಲಿ (Telangana) ವ್ಯಕ್ತಿಯೊಬ್ಬರು ವಿಶಿಷ್ಟವಾಗಿ ಮೋದಿ ಪರ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಮಗನ ಮದುವೆ ಆಮಂತ್ರಣ ಪತ್ರಿಕೆಯಲ್ಲೂ (Wedding Card) ಮೋದಿಗೆ ಮತ ನೀಡಿ ಎಂಬುದಾಗಿ ಅವರು ಮನವಿ ಮಾಡಿರುವುದು ವಿಶೇಷವಾಗಿದೆ.
ಹೌದು, ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಇಂತಹದ್ದೊಂದು ಮನವಿ ಮೂಲಕ ಗಮನ ಸೆಳೆದಿದ್ದಾರೆ. “ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಮತ ನೀಡಿದರೆ, ಅದೇ ನೀವು ನಮಗೆ ನೀಡುವ ದೊಡ್ಡ ಉಡುಗೊರೆ” ಎಂಬುದಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ನಂದಿಕಾಂತಿ ನರಸಿಂಹುಲು ಹಾಗೂ ನಂದಿಕಾಂತಿ ನಿರ್ಮಲಾ ಎಂಬ ದಂಪತಿಯು ತಮ್ಮ ಮಗನ ಮದುವೆ ನಿಶ್ಚಯಿಸಿದ್ದು, ಆಮಂತ್ರಣ ಪತ್ರಿಕೆಯಲ್ಲಿ ಅವರು ಮೋದಿಗೆ ಮತ ನೀಡಿ ಎಂಬುದಾಗಿ ಮನವಿ ಮಾಡಿದ್ದಾರೆ.
ಸಂಗರೆಡ್ಡಿ ಜಿಲ್ಲೆಯ ಅರುಟ್ಲಾ ಎಂಬ ಗ್ರಾಮದಲ್ಲಿ ಏಪ್ರಿಲ್ 4ರಂದು ಮದುವೆ ನಡೆಯಲಿದೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನರೇಂದ್ರ ಮೋದಿ ಅವರ ಫೋಟೊವನ್ನು ಕೂಡ ಮುದ್ರಿಸಲಾಗಿದೆ. “ಮೊದಲು ಕುಟುಂಬಸ್ಥರ ಬಳಿ ಇಂತಹದ್ದೊಂದು ಪ್ರಸ್ತಾಪ ಇಟ್ಟೆ. ನರೇಂದ್ರ ಮೋದಿ ಪರವಾಗಿ ಪ್ರಚಾರ ಮಾಡಲು, ಆಮಂತ್ರಣ ಪತ್ರಿಕೆ ಮೂಲಕವೂ ಜನರ ಮನವೊಲಿಸಲು ನನ್ನ ಕುಟುಂಬಸ್ಥರು ಕೂಡ ಒಪ್ಪಿದರು. ಹಾಗಾಗಿ, ಮೋದಿ ಅವರಿಗೆ ಮತ ನೀಡಿ ಎಂಬುದಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದೆವು” ಎಂದು ನಂದಿಕಾಂತಿ ನರಸಿಂಹುಲು ತಿಳಿಸಿದ್ದಾರೆ.
ಇದನ್ನೂ ಓದಿ: Narendra Modi : ಭಾರತ- ಭೂತಾನ್ ನಡುವೆ ರೈಲು ಸೇವೆ; ಮೋದಿಯಿಂದ ಒಪ್ಪಂದ
ಸಾಯಿ ಕುಮಾರ್ ಹಾಗೂ ಮಹಿಮಾ ರಾಣಿ ಅವರು ಏಪ್ರಿಲ್ 4ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೋದಿ ಪರವಾಗಿ ಪ್ರಚಾರ ನಡೆಸಲು ಇವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ನಂದಿಕಾಂತಿ ನರಸಿಂಹುಲು ಅವರು ನರೇಂದ್ರ ಮೋದಿ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ. ಮೂಲತಃ ಉದ್ಯಮಿಯಾಗಿರುವ ಇವರು, ತಮ್ಮ ಇಬ್ಬರು ಪುತ್ರಿಯರ ಮದುವೆಯಲ್ಲಿ ಈ ರೀತಿಯ ಪ್ರಚಾರ ಕೈಗೊಂಡಿರಲಿಲ್ಲ. ಈಗ ಒಬ್ಬನೇ ಮಗನ ಮದುವೆಯು ಲೋಕಸಭೆ ಚುನಾವಣೆ ವೇಳೆಯೇ ನಡೆಯುತ್ತಿರುವುದರಿಂದ ಈ ರೀತಿಯ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ