ನವ ದೆಹಲಿ: ಬ್ಯಾಂಕ್ಗಳಿಂದ ನಗದು ಹಿಂತೆಗೆತಕ್ಕೆ ಯಾವುದೇ ಜಿಎಸ್ಟಿ ಇರುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಯಲ್ಲಿ ತಿಳಿಸಿದರು.
ಬೆಲೆ ಏರಿಕೆಗೆ ಸಂಬಂಧಿಸಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವೇಳೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ಉತ್ತರಿಸಿದ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕತೆಯ ಬುನಾದಿ ಸುಭದ್ರವಾಗಿದೆ ಎಂದರು. ಹಲವು ವಸ್ತುಗಳು ಮತ್ತು ಸೇವೆಗಳಿಗೆ ಜಿಎಸ್ಟಿ ಅನ್ವಯವಾಗುತ್ತಿಲ್ಲ ಎಂದು ಅವರು ತಿಳಿಸಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾಷಣದ ಮುಖ್ಯಾಂಶಗಳು:
- ಬ್ಯಾಂಕ್ಗಳಿಂದ ಮತ್ತು ಎಟಿಎಂಗಳಿಂದ ನಗದು ಹಿಂಪಡೆಯುವುದಕ್ಕೆ ಜಿಎಸ್ಟಿ ಇಲ್ಲ.
- ಬ್ಯಾಂಕ್ ಚೆಕ್ ಬುಕ್ ಖರೀದಿಗೆ ಮಾತ್ರ ಜಿಎಸ್ಟಿ. ಕಸ್ಟಮರ್ ಚೆಕ್ಗೆ ಜಿಎಸ್ಟಿ ಇರುವುದಿಲ್ಲ.
- ಆಸ್ಪತ್ರೆಯ ಬೆಡ್ ಅಥವಾ ಐಸಿಯು ಮೇಲೆ ಜಿಎಸ್ಟಿ ಇರುವುದಿಲ್ಲ, ದಿನಕ್ಕೆ ೫,೦೦೦ ರೂ. ಬಾಡಿಗೆ ಇರುವ ಕೊಠಡಿಗೆ ಮಾತ್ರ ಜಿಎಸ್ಟಿ ಅನ್ವಯಿಸುತ್ತದೆ.
- ಸ್ಮಶಾನಕ್ಕೆ ಜಿಎಸ್ಟಿ ಇಲ್ಲ. ಹೊಸ ಸ್ಮಶಾನ ನಿರ್ಮಿಸುವುದಕ್ಕೆ ಮಾತ್ರ ತೆರಿಗೆ.
- ದಿನಬಳಕೆಯ ಅಗತ್ಯ ತರಕಾರಿಗಳಾದ ಟೊಮೆಟೊ, ಈರುಳ್ಳಿ, ಆಲೂಗಡ್ಡೆಯ ದರವನ್ನು ನಾವು ತಗ್ಗಿಸಿದ್ದೇವೆ.
- ಸರ್ಕಾರ ಮತ್ತು ಆರ್ ಬಿಐ ಹಣದುಬ್ಬರವನ್ನು ೭%ಕ್ಕಿಂತ ಕೆಳಕ್ಕೆ ನಿಯಂತ್ರಿಸಲು ಯತ್ನಿಸುತ್ತಿವೆ.
- ಜಿಎಸ್ಟಿ ಮಂಡಳಿಯು ಅಗತ್ಯ ವಸ್ತುಗಳ ಮೇಲೆ ಯಾವುದೇ ಹೊಸ ತೆರಿಗೆ ವಿಧಿಸಿಲ್ಲ.
- ಬಡವರು ಬಳಸುವ ಯಾವುದೇ ಆಹಾರ ವಸ್ತುವಿಗೆ ತೆರಿಗೆ ವಿಧಿಸಿಲ್ಲ. ಮೊದಲೇ ಪ್ಯಾಕ್ ಮಾಡಿರುವ, ಲೇಬಲ್ ಇರುವ ಆಹಾರ ವಸ್ತುವಿಗೆ ಮಾತ್ರ ಜಿಎಸ್ಟಿ. ಚಿಲ್ಲರೆ ಮಾರಾಟಕ್ಕೆ (Loose sale) ಜಿಎಸ್ಟಿ ಇರುವುದಿಲ್ಲ.