ನವದೆಹಲಿ: ನೂತನ ತೆರಿಗೆ ಪದ್ಧತಿಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಇಲ್ಲ, ಇದರಿಂದ ಮಧ್ಯಮ ವರ್ಗದವರು ಹೆಚ್ಚಿನ ತೆರಿಗೆ ಉಳಿಸಲು ಆಗುವುದಿಲ್ಲ ಎಂಬ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ಹೊಸ ತೆರಿಗೆ ಪದ್ಧತಿಯ (Income Tax) ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಾಹಿತಿ ನೀಡಿದ್ದಾರೆ. “ದೇಶದಲ್ಲಿ 7.27 ಲಕ್ಷ ರೂಪಾಯಿವರೆಗೆ ಆದಾಯ ಗಳಿಸುವವರು ಆದಾಯ ತೆರಿಗೆ ಪಾವತಿಸಬೇಕಿಲ್ಲ” ಎಂದು ತಿಳಿಸಿದ್ದಾರೆ.
ಹೊಸ ತೆರಿಗೆ ಪದ್ಧತಿ, ಆದಾಯ ತೆರಿಗೆ ಹಾಗೂ ಸ್ಟಾಡಂರ್ಡ್ ಡಿಡಕ್ಷನ್ ಸೇರಿ ಹಲವು ವಿಷಯಗಳ ಕುರಿತು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು. “ದೇಶದ ಜನ ಕಷ್ಟಪಟ್ಟು ದುಡಿದು ತೆರಿಗೆ ಕಟ್ಟುತ್ತಾರೆ. ಹಾಗಾಗಿ, ನಾವು ಒಂದು ತಂಡವಾಗಿ ಕುಳಿತು ಜನರ ಸಮಸ್ಯೆಗಳನ್ನು ಬಗೆಹರಿಸಲು ತೀರ್ಮಾನಿಸಿದ್ದೇವೆ. ಮೊದಲು ಸ್ಟಾಂಡರ್ಡ್ ಡಿಡಕ್ಷನ್ ಇರಲಿಲ್ಲ. ಈಗ 50 ಸಾವಿರ ರೂಪಾಯಿವರೆಗೆ ಸ್ಟಾಂಡರ್ಡ್ ಡಿಡಕ್ಷನ್ ನೀಡಲಾಗಿದೆ. ಅದರಂತೆ, ಹೊಸ ತೆರಿಗೆ ಪದ್ಧತಿಯಲ್ಲಿ ನೀವು 7.27 ಲಕ್ಷ ರೂಪಾಯಿವರೆಗೆ ತೆರಿಗೆ ಪಾವತಿಸುವಂತಿಲ್ಲ” ಎಂದು ತಿಳಿಸಿದರು.
ಕೇಂದ್ರ ಸರ್ಕಾರವು 2023-24ನೇ ಸಾಲಿನ ಬಜೆಟ್‌ನಲ್ಲಿ 7 ಲಕ್ಷ ರೂ.ವರೆಗೆ ಸ್ಟಾಂಡರ್ಡ್ ಡಿಡಕ್ಷನ್ ಇರುವುದಿಲ್ಲ ಎಂಬುದಾಗಿ ಘೋಷಿಸಿತ್ತು. ಆದರೆ, ಸ್ಟಾಂಡರ್ಡ್ ಡಿಡಕ್ಷನ್ ಇರುವುದಿಲ್ಲ ಎಂಬುದು ಸೇರಿ ಹಲವು ಗೊಂದಲಗಳು ಜನರಲ್ಲಿ ಮೂಡಿದ್ದವು. ಇದರಿಂದಾಗಿ ಹಳೆಯ ತೆರಿಗೆ ಪದ್ಧತಿಯೇ ವಾಸಿ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು. ಹಾಗಾಗಿ, ನಿರ್ಮಲಾ ಸೀತಾರಾಮನ್ ಅವರು ಹೊಸ ತೆರಿಗೆ ಪದ್ಧತಿಯಲ್ಲಿ ಕೆಲ ಬದಲಾವಣೆ ಮಾಡಿದ್ದಾರೆ. ಅಲ್ಲದೆ, ಸ್ಟಾಂಡರ್ಡ್ ಡಿಡಕ್ಷನ್‌ಅನ್ನು ಕೂಡ ಸೇರಿಸಿದ್ದಾರೆ.
ಇದನ್ನೂ ಓದಿ: HD Kumaraswamy : ದೇಶದಲ್ಲಿ GST ಇದ್ದಂತೆ, ರಾಜ್ಯದಲ್ಲೀಗ YST ಟ್ಯಾಕ್ಸ್: ಎಚ್.ಡಿ. ಕುಮಾರಸ್ವಾಮಿ
ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಕೂಡ ನಿರ್ಮಲಾ ಸೀತಾರಾಮನ್ ಮಾತನಾಡಿದರು. “ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 9 ವರ್ಷದಲ್ಲಿ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (MSME) ಏಳಿಗೆಗೆ ಹಲವು ರೀತಿಯಲ್ಲಿ ಶ್ರಮಿಸಿದೆ. ಇದರಿಂದ ಗುಡಿ ಕೈಗಾರಿಕೆಗಳ ಅಭಿವೃದ್ಧಿಯಾಗಿದೆ. 2023-24ನೇ ಸಾಲಿನಲ್ಲಿ ಎಂಎಸ್‌ಎಂಇಗೆ ಕಳೆದ ಸಾಲಿಗಿಂತ 3,185 ಕೋಟಿ ರೂಪಾಯಿಯನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಈ ಬಾರಿ ಒಟ್ಟು 22,138 ಕೋಟಿ ರೂಪಾಯಿಯನ್ನು ಎಂಎಸ್‌ಎಂಇಗೆ ಮೀಸಲಿಡಲಾಗಿದೆ” ಎಂದು ಹೇಳಿದರು.