Site icon Vistara News

ಲೋಕಸಭೆಗೆ ಇಲ್ಲದ ನಮಾಜ್‌ ಬ್ರೇಕ್‌ ರಾಜ್ಯಸಭೆಗೂ ಇಲ್ಲ: ರದ್ದು ಮಾಡಿದ ಸಭಾಧ್ಯಕ್ಷ ಜಗದೀಪ್ ಧನ್ಕರ್

Jagdeep Dhanka

ಹೊಸದಿಲ್ಲಿ: ನಿಯಮಾವಳಿಯಲ್ಲಿ ಇಲ್ಲದೇ ಇದ್ದರೂ ರಾಜ್ಯಸಭೆಯಲ್ಲಿ ರೂಢಿಯಾಗಿ ನಡೆದುಕೊಂಡು ಬಂದಿದ್ದ ಶುಕ್ರವಾರ ಮಧ್ಯಾಹ್ನದ ಅರ್ಧ ಗಂಟೆಯ ನಮಾಜ್‌ ಬ್ರೇಕ್‌ (Namaz break) ಅನ್ನು ಉಪರಾಷ್ಟ್ರಪತಿ (Vice President), ರಾಜ್ಯಸಭಾ (Rajya sabha Chairman) ಅಧ್ಯಕ್ಷ ಜಗದೀಪ್‌ ಧನ್ಕರ್‌ (jagdeep dhankhar) ರದ್ದುಪಡಿಸಿದ್ದಾರೆ.

ಜಗದೀಪ್ ಧನ್ಕರ್ ಅವರು ಡಿಸೆಂಬರ್ 8ರಂದು ಸದನಕ್ಕೆ ಈ ಬಗ್ಗೆ ಮಾಹಿತಿ ನೀಡಿದರು. ಶುಕ್ರವಾರದ ಸದನದ ಸಮಯವನ್ನು ಲೋಕಸಭೆಯ ಸಮಯಕ್ಕೆ ಹೊಂದಿಸುವಂತೆ ಬದಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಶುಕ್ರವಾರ ರಾಜ್ಯಸಭೆಯಲ್ಲಿ ಕಲಾಪ 2.30ಕ್ಕೆ ಆರಂಭವಾಗುತ್ತಿತ್ತು. ಆದರೆ, ಈ ಬಾರಿ 2 ಗಂಟೆಗೆ ನಿಗದಿ ಮಾಡಿರುವ ಬಗ್ಗೆ ಡಿಎಂಕೆ ಸಂಸದ ತಿರುಚಿ ಎನ್. ಶಿವ ಅವರು ಸದನದಲ್ಲಿ ಪ್ರಶ್ನೆ ಮಾಡಿದ್ದರು. ರಾಜ್ಯ ಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ಪ್ರಕಾರ, ಮುಸ್ಲಿಂ ರಾಜ್ಯಸಭಾ ಸದಸ್ಯರು ನಮಾಜ್‌ ಮಾಡಲು ಅನುವು ಮಾಡಿಕೊಡಲು ಶುಕ್ರವಾರದಂದು 30 ನಿಮಿಷಗಳ ಹೆಚ್ಚುವರಿ ಭೋಜನ ವಿರಾಮವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದರು.

ರಾಜ್ಯಸಭೆಯ ಕಲಾಪಗಳು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ನಡೆಯುತ್ತದೆ. ಮಧ್ಯಾಹ್ನ 1ರಿಂದ 2ರವರೆಗೆ ಭೋಜನ ವಿರಾಮವಿರುತ್ತದೆ. ಆದರೆ, ಶುಕ್ರವಾರ ಮಾತ್ರ 2
ಗಂಟೆಯ ಬದಲಾಗಿ 2.30ಕ್ಕೆ ಕಲಾಪ ಆರಂಭವಾಗುತ್ತಿತ್ತು. ಈ ಬಗ್ಗೆ ಎಲ್ಲೂ ಉಲ್ಲೇಖವಿಲ್ಲದಿದ್ದರೂ, ಶುಕ್ರವಾರದ ನಮಾಜ್‌ಗಾಗಿ 30 ನಿಮಿಷಗಳ ಹೆಚ್ಚುವರಿ ಭೋಜನ ವಿರಾಮವನ್ನು ನೀಡಲಾಗುತ್ತಿತ್ತು. ಈ ವಿಚಾರವನ್ನು ಡಿಎಂಕೆ ಸಂಸದ ಶುಕ್ರವಾರದ ರಾಜ್ಯಸಭೆಯ ಶೂನ್ಯ ವೇಳೆಯ ವೇಳೆ ಪ್ರಶ್ನೆ ಮಾಡಿದ್ದರು. ಪಾಯಿಂಟ್ ಆಫ್ ಆರ್ಡರ್‌ನಲ್ಲಿ ರಾಜ್ಯ ಸಭೆಯ ಕಲಾಪ 2 ಗಂಟೆಗೆ ಆರಂಭವಾಗಿದ್ದರ ಬಗ್ಗೆ ಪ್ರಶ್ನೆ ಎತ್ತಿದ್ದರು.

ಇದಕ್ಕೆ ಉತ್ತರ ನೀಡಿದ ಧನ್ಕರ್, ಇದು ಈ ಶುಕ್ರವಾರ ಪ್ರಾರಂಭವಾದುದಲ್ಲ. ಮತ್ತು ಇದು ಕೆಲವು ಸಮಯದಿಂದ ಆಚರಣೆಯಲ್ಲಿದೆ. ಮತ್ತು ಕಾರಣವನ್ನು ನೀಡಲಾಗಿದೆ ಎಂದಿದ್ದಾರೆ. “ಶುಕ್ರವಾರದ ಸಮಯವನ್ನು ಲೋಕಸಭೆಯ ಸಮಯದೊಂದಿಗೆ ಮರುಹೊಂದಿಸಲಾಗಿದೆ. ಲೋಕಸಭೆಯಲ್ಲಿ ನಮಾಜ್ ಬ್ರೇಕ್‌ ಶುಕ್ರವಾರ ಇಲ್ಲ. ಇದು ರಾಜ್ಯಸಭೆಯಲ್ಲಿ ಇದ್ದ ಅಭ್ಯಾಸ ಮಾತ್ರವೇ ಆಗಿತ್ತು. ಲೋಕಸಭೆ ಎಲ್ಲಾ ದಿನಗಳಲ್ಲೂ ಮಧ್ಯಾಹ್ನ 2 ಗಂಟೆಗೆ ಆರಂಭವಾಗುತ್ತದೆ. ಲೋಕಸಭೆ ಹಾಗೂ ರಾಜ್ಯ ಸಭೆ ಎರಡೂ ಸಂಸತ್ತಿನ ಪ್ರಮುಖ ಭಾಗಗಳು. ಇಲ್ಲಿನ ಸಮಯ ಹಾಗೂ ನಿಮಯಗಳಿಗೆ ಎರಡೂ ಅನುಗುಣವಾಗಿರಬೇಕು. ನಾನೇ ಈ ಮೊದಲು ಹೇಳಿದಂತೆ ಶುಕ್ರವಾರವೂ ಮಧ್ಯಾಹ್ನ 2 ಗಂಟೆಗೆ ಕಲಾಪ ಆರಂಭವಾಗುತ್ತದೆ. ಇದು ಇಂದಿನದಲ್ಲ” ಎಂದು ತಿಳಿಸಿದರು.

ಡಿಎಂಕೆಯ ಮತ್ತೊಬ್ಬ ಸಂಸದ ಎಂ.ಮೊಹಮದ್ ಅಬ್ದುಲ್ಲಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. “ಇದು ಬಹಳ ವರ್ಷಗಳಿಂದ ಇರುವ ಅಭ್ಯಾಸವಾಗಿದೆ. 60-70 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಶುಕ್ರವಾರದ ಜುಮ್ಮಾ ಕಾರಣಕ್ಕಾಗಿ ಮುಸ್ಲಿಂ ಸಂಸದರ ಸಲುವಾಗಿ ಇದನ್ನು ಫಿಕ್ಸ್ ಮಾಡಲಾಗಿತ್ತು. ಇದು ಮೊದಲಿನಿಂದಲೂ ಇದ್ದ ಅಭ್ಯಾಸ” ಎಂದು ಹೇಳಿದ್ದಾರೆ.

ಸಂಸತ್ತಿನಲ್ಲಿ ಎಲ್ಲಾ ಸಮುದಾಯಗಳ ಸದಸ್ಯರಿದ್ದಾರೆ ಮತ್ತು ಮುಸ್ಲಿಂ ಸಂಸದರಿಗೆ ಮಾತ್ರ ನಿರ್ದಿಷ್ಟ ವಿನಾಯಿತಿ ಇರಬಾರದು ಎಂದು ಧನ್ಕರ್ ತಿಳಿಸಿದ್ದಾರೆ. “ಲೋಕಸಭೆ ಮತ್ತು ರಾಜ್ಯ ಸಭೆ ಎರಡರಲ್ಲೂ ಸಮಾಜದ ಎಲ್ಲಾ ವರ್ಗಗಳ ಸದಸ್ಯರು ಇರುತ್ತಾರೆ. ಲೋಕಸಭೆಯು ಮಧ್ಯಾಹ್ನ 2 ಗಂಟೆಗೆ ಇರುತ್ತದೆ. ಪ್ರತಿ ವಿಭಾಗದಿಂದ ಸದಸ್ಯರಿದ್ದಾರೆ. ಪ್ರಜ್ಞಾಪೂರ್ವಕವಾಗಿ, ಸೂಕ್ತ ಚರ್ಚೆಯ ನಂತರ, ನಾನು ಅದನ್ನು ಜಾರಿಗೆ ತಂದಿದ್ದೇನೆ, ಸದನಕ್ಕೆ ಸೂಚಿಸಿದ್ದೇನೆ ಮತ್ತು ಇದು ಕಳೆದ ಅಧಿವೇಶನದಲ್ಲೇ ಜಾರಿಯಲ್ಲಿತ್ತು. ಮಧ್ಯಾಹ್ನ 2 ಗಂಟೆಗೆ ಊಟದ ನಂತರ ಸದನ ಸೇರಲಿದೆ ಎಂದು ತಿಳಿಸಲಾಗಿದೆ. ಲೋಕಸಭೆಯು ಸೂಚಿಸಿದ ಕಾಲಾವಧಿಗೆ ನಾವೂ ಅನುಗುಣವಾಗಿರಬೇಕು” ಎಂದು ತಿಳಿಸಿದ್ದಾರೆ. ಈ ಸಮಯ ಬದಲಾವಣೆಯನ್ನು ಕಳೆದ ಅಧಿವೇಶನದಲ್ಲಿ ಜಾರಿಗೆ ತರಲಾಗಿದ್ದು, ಈಗಾಗಲೇ ಸದಸ್ಯರಿಗೆ ವಿವರಿಸಲಾಗಿದೆ ಎಂದು ಸಭಾಪತಿ ಪುನರುಚ್ಚರಿಸಿದ ನಂತರ ಸದಸ್ಯರಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.

ಇದನ್ನೂ ಓದಿ: Mohammed Shami : ಮೈದಾನದಲ್ಲೇ ನಮಾಜ್ ಮಾಡಲು ಹೋಗಿ ಅರ್ಧಕ್ಕೆ ನಿಲ್ಲಿಸಿದರೇ ಶಮಿ?

Exit mobile version