ಜೈಪುರ: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ (Gehlot VS Pilot) ನಡುವಿನ ಬಿಕ್ಕಟ್ಟು ತಾರಕಕ್ಕೇರಿದೆ. “ಸಚಿನ್ ಪೈಲಟ್ ಒಬ್ಬ ವಿಶ್ವಾಸಘಾತುಕ. ಅವರನ್ನು ಪಕ್ಷದ ಹೈಕಮಾಂಡ್ ಎಂದಿಗೂ ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ” ಎಂದು ಗೆಹ್ಲೋಟ್ ಹೇಳಿಕೆಗೆ ಪೈಲಟ್ ತಿರುಗೇಟು ನೀಡಿದ್ದು, “ರಾಜಸ್ಥಾನದಲ್ಲಿ ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ಬಿಜೆಪಿ ಸೋತು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು” ಎಂದು ಹೇಳಿದ್ದಾರೆ. ಆ ಮೂಲಕ ನನ್ನಿಂದಾಗಿ ಪಕ್ಷ ಅಧಿಕಾರಕ್ಕೆ ಬಂದಿತು ಎಂದು ಪರೋಕ್ಷವಾಗಿ ಹೇಳಿದ್ದಾರೆ.
“ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ರಾಜ್ಯದಲ್ಲಿ ಅಧಿಕಾರ ಸಿಕ್ಕಿತು. ಕಳೆದ ಚುನಾವಣೆಯಲ್ಲಿ ಬಿಜೆಪಿಯು ಹೀನಾಯವಾಗಿ ಸೋತಿತು. ಆದರೂ, ಪಕ್ಷವು ಗೆಹ್ಲೋಟ್ ಅವರು ಮುಖ್ಯಮಂತ್ರಿಯಾಗಲು ಅವಕಾಶ ನೀಡಿತು. ಈಗ ಯಾವ ರೀತಿಯ ಗೆಲುವು ನಮ್ಮದಾಗುತ್ತದೆ, ಯಾರಿಂದ ಗೆಲುವು ಸಾಧಿಸುತ್ತೇವೆ ಎಂಬುದನ್ನು ಗಮನಿಸಿ ಆದ್ಯತೆ ನೀಡಬೇಕು. ನನ್ನ ಕುರಿತು ಗೆಹ್ಲೋಟ್ ನೀಡಿದ ಪ್ರತಿಯೊಂದು ಹೇಳಿಕೆಯೂ ಸತ್ಯಕ್ಕೆ ದೂರವಾಗಿದೆ. ಇಷ್ಟೆಲ್ಲ ಸುಳ್ಳು ಹೇಳುವ ಅವಶ್ಯಕತೆ ಇಲ್ಲ” ಎಂದು ಹೇಳಿದ್ದಾರೆ.
ಪರಿಸ್ಥಿತಿ ತಿಳಿಗೊಳಿಸಲು ಮುಂದಾದ ಹೈಕಮಾಂಡ್
ಗೆಹ್ಲೋಟ್ ಹಾಗೂ ಪೈಲಟ್ ನಡುವಿನ ಆರೋಪ, ಪ್ರತ್ಯಾರೋಪ ಹೆಚ್ಚಾದ ಕಾರಣ ಬಿಕ್ಕಟ್ಟು ಶಮನಗೊಳಿಸಲು ಹೈಕಮಾಂಡ್ ಮುಂದಾಗಿದೆ. “ಅಶೋಕ್ ಗೆಹ್ಲೋಟ್ ಅವರು ಒಬ್ಬ ಹಿರಿಯ ಹಾಗೂ ಅನುಭವಿ ರಾಜಕಾರಣಿಯಾಗಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು. ಎಲ್ಲರೂ ಭಾರತ್ ಜೋಡೋ ಯಾತ್ರೆಯನ್ನು ಉತ್ತರ ಭಾರತದಲ್ಲಿ ಮತ್ತಷ್ಟು ಯಶಸ್ವಿಗೊಳಿಸುವತ್ತ ಮಾತ್ರ ಗಮನ ಹರಿಸಬೇಕು” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
“ಸಚಿನ್ ಪೈಲಟ್ ಅವರ ಹಿಂದೆ 10 ಶಾಸಕರು ಕೂಡ ಇಲ್ಲ. ಅವರು ಇದಕ್ಕೂ ಮೊದಲು ಬಂಡಾಯವೇಳಲು ಅಮಿತ್ ಶಾ ಅವರು ಕಾರಣರಾಗಿದ್ದಾರೆ. ಪ್ರತಿಯೊಬ್ಬರ ಶಾಸಕರಿಗೆ ಬಿಜೆಪಿ 10 ಕೋಟಿ ರೂಪಾಯಿ ನೀಡಿದೆ” ಎಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗೆಹ್ಲೋಟ್ ಆರೋಪಿಸಿದ್ದರು.
ಇದನ್ನೂ ಓದಿ | Gehlot VS Pilot | ʼಸಚಿನ್ʼ ಬಂಡಾಯಕ್ಕೆ ಅಮಿತ್ ಶಾ ʼಪೈಲಟ್ʼ, ಗಂಭೀರ ಆರೋಪ ಮಾಡಿದ ಸಿಎಂ ಗೆಹ್ಲೋಟ್