Site icon Vistara News

Air India: ಇರಲು ರೂಮಿಲ್ಲ, ತಿನ್ನಲು ಆಹಾರವಿಲ್ಲ; ರಷ್ಯಾದಲ್ಲಿ 232 ಭಾರತೀಯರಿಗೇಕೆ ಇಂಥ ದುಸ್ಥಿತಿ?

Air India Passengers Stranded In Russia

No Room To Stay, No Food To Eat: Air India Passengers Stranded In Russia

ನವದೆಹಲಿ/ಮಾಸ್ಕೊ: ದೆಹಲಿಯಿಂದ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನದ (Air India) ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ರಷ್ಯಾದ ಮಗದನ್‌ ನಗರದ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಆದರೆ, ಏರ್‌ ಇಂಡಿಯಾ ವಿಮಾನದಲ್ಲಿದ್ದ 230ಕ್ಕೂ ಅಧಿಕ ಭಾರತೀಯರು ಸಂಕಷ್ಟ ಮಗದನ್‌ ನಗರದಲ್ಲಿ ಪರದಾಡುವಂತಾಗಿದೆ.

ದೆಹಲಿಯಿಂದ ಮಂಗಳವಾರ ಏರ್‌ ಇಂಡಿಯಾ ವಿಮಾನವು ಸ್ಯಾನ್‌ ಫ್ರಾನ್ಸಿಸ್ಕೋಗೆ ಹಾರಾಟ ನಡೆಸಿತು. ಆದರೆ, ಮಾರ್ಗ ಮಧ್ಯೆ, ಏರ್‌ ಇಂಡಿಯಾದ ಬೋಯಿಂಗ್‌ 777 ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ರಷ್ಯಾದ ಮಗದನ್‌ ನಗರದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ಇದರಿಂದಾಗಿ ಭಾರತೀಯರು ರಷ್ಯಾದಲ್ಲಿ ಪರದಾಡುವಂತಾಗಿದೆ.

ಇರಲು ರೂಮ್‌ ಇಲ್ಲ, ಊಟಕ್ಕೂ ಪರದಾಟ

ರಷ್ಯಾದ ಮಗದನ್‌ ನಗರದಲ್ಲಿ ವಿಮಾನ ಲ್ಯಾಂಡ್‌ ಆದ ಬಳಿಕ ಭಾರತೀಯರಿಗೆ ಮತ್ತಷ್ಟು ತೊಂದರೆ ಎದುರಾಗಿವೆ. 216 ಪ್ರಯಾಣಿಕರು ಹಾಗೂ ವಿಮಾನದ 16 ಸಿಬ್ಬಂದಿ ಸೇರಿ 232 ಜನ ಮಗದನ್‌ ನಗರದಲ್ಲಿ ಮಂಗಳವಾರ ರಾತ್ರಿ ಇನ್ನಿಲ್ಲದ ಕಷ್ಟ ಅನುಭವಿಸಿದ್ದಾರೆ. ಇರಲು ಸರಿಯಾದ ರೂಮ್‌ ಇಲ್ಲ, ತಿನ್ನಲು ಊಟ ಕೂಡ ಸಿಕ್ಕಿಲ್ಲ. ಶಾಲೆಗಳಲ್ಲಿ ಭಾರತೀಯರಿಗೆ ಮಲಗಲು ಅವಕಾಶ ಮಾಡಿಕೊಟ್ಟರೂ, ಒಂದೇ ಚಾಪೆ ಮೇಲೆ ಮಲಗುವ ಅನಿವಾರ್ಯ ಎದುರಾಗಿದೆ. ಹಿರಿಯರು, ಮಕ್ಕಳಂತೂ ತುಂಬ ತೊಂದರೆ ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೂ, ರಷ್ಯಾ ಅಧಿಕಾರಿಗಳು ಭಾರತೀಯರು ತಂಗಲು ತಕ್ಕಮಟ್ಟಿಗೆ ನೆರವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತೀಯರ ರಕ್ಷಣೆಗೆ ಹೊರಟ ಮತ್ತೊಂದು ವಿಮಾನ

ಸ್ಯಾನ್‌ಫ್ರಾನ್ಸಿಸ್ಕೋಗೆ ಹೊರಟು, ವಿಮಾನದ ತಾಂತ್ರಿಕ ದೋಷದಿಂದ ರಷ್ಯಾದಲ್ಲಿ ಸಿಲುಕಿದ ಭಾರತೀಯರನ್ನು ರಕ್ಷಿಸಲು ಏರ್‌ ಇಂಡಿಯಾದ ಮತ್ತೊಂದು ವಿಮಾನ ರಷ್ಯಾದ ಮಗದನ್‌ಗೆ ಹಾರಾಟ ನಡೆಸಿದೆ. ರಷ್ಯಾದ ಮಗದನ್‌ಗೆ ತೆರಳಿ ಎಲ್ಲ ಭಾರತೀಯರನ್ನು ರಕ್ಷಿಸಲು ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲಿಯೇ ಎಲ್ಲರನ್ನು ರಕ್ಷಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಎಲ್ಲರನ್ನೂ ಮಗದನ್‌ನಿಂದ ಸ್ಯಾನ್‌ಫ್ರಾನ್ಸಿಸ್ಕೋಗೆ ಕರೆದುಕೊಂಡು ಹೋಗಲಾಗುತ್ತದೆ ಎಂದು ಏರ್‌ ಇಂಡಿಯಾ ಮಾಹಿತಿ ನೀಡಿದೆ.

ಇದನ್ನೂ ಓದಿ: Operation Kaveri: ಸುಡಾನ್​​ನಿಂದ 1400 ಭಾರತೀಯರ ರಕ್ಷಣೆ; ಕೊಚ್ಚಿ ತಲುಪಿದ 186 ಜನ

Exit mobile version