ನವ ದೆಹಲಿ: ನಿಮ್ಮ ಜೀವನದಲ್ಲಿ ಒಂದೇ ಒಂದು ಸಿಗರೇಟು ಸೇದದಿದ್ದರೂ, ಧೂಮಪಾನಿಗಳಿಗೆ ಬರಬಹುದಾದ ಹೃದ್ರೋಗ, ಉಸಿರಾಟದ ತೊಂದರೆಯಂತಹ ಅನೇಕ ಕಾಯಿಲೆಗಳು ನಿಮಗೂ ಉಂಟಾಗಬಹುದು! ಹೇಗೆ ಎನ್ನುವಿರಾ? ನೀವು ಅನೇಕ ವಿಷಕಾರಿ ಮತ್ತು ಕ್ಯಾನ್ಸರ್ ಕಾರಕ ಪದಾರ್ಥಗಳನ್ನು ಹೊಂದಿರುವ ಸೆಕೆಂಡ್ ಹ್ಯಾಂಡ್ ಹೊಗೆಯನ್ನು, ಇತರರು ಸೇದಿಬಿಟ್ಟ ಹೊಗೆಯನ್ನು ಉಸಿರಾಡಿದರೂ ಸಾಕು, ಈ ಅಪಾಯಗಳು ತಪ್ಪಿದ್ದಲ್ಲ.
ದಾರಿಹೋಕನಿಂದ ಹಿಡಿದು ಕುಟುಂಬದ ಸದಸ್ಯರವರೆಗೆ, ಧೂಮಪಾನಿಗಳ ಸುತ್ತಲೂ ಇರುವ ಯಾರಾದರೂ ಸೇದಿಬಿಟ್ಟ ಹೊಗೆಯನ್ನು ನೀವು ಉಸಿರಾಡುವ ಸನ್ನಿವೇಶ ಇರಬಹುದು. ಇಂತಹ ಸೆಕೆಂಡ್ ಹ್ಯಾಂಡ್ ಹೊಗೆಗೆ ಒಡ್ಡಿಕೊಂಡರೂ ಕೆಮ್ಮು, ತಲೆನೋವು, ನೋಯುತ್ತಿರುವ ಗಂಟಲು ಮತ್ತು ಕಣ್ಣು – ಮೂಗಿನ ಕಿರಿಕಿರಿಯಂತಹ ಸಮಸ್ಯೆಗಳು ತಲೆದೋರಬಹುದು. ಇವುಗಳು ಪ್ಯಾಸಿವ್ ಸ್ಮೋಕಿಂಗ್‌ನ ಕೆಲವು ಅಲ್ಪಾವಧಿಯ ಪರಿಣಾಮಗಳಾಗಿವೆ.
ಆದರೆ ದೀರ್ಘಕಾಲೀನ ಪರಿಣಾಮಗಳು ಹೆಚ್ಚು ಮಾರಕವಾಗಿವೆ. ಪರೋಕ್ಷ ಧೂಮಪಾನಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್, ಹೃದ್ರೋಗ, ಪಾರ್ಶ್ವವಾಯುವಿನಂತಹ ಅನೇಕ ಮಾರಣಾಂತಿಕ ಕಾಯಿಲೆಗಳ ಅಪಾಯ ನಿಮಗೂ ತಟ್ಟಬಹುದು.
ಪರೋಕ್ಷ ಧೂಮಪಾನ ಎಂದರೆ ಬೇರೆಯವರು ಸೇದಿಬಿಟ್ಟ ತಂಬಾಕು ಹೊಗೆಯನ್ನು ಉಸಿರಾಡುವುದು. ಯಾರಾದರೂ ಸಿಗರೇಟ್ ಸೇದಿದಾಗ, ಅವರು ಬಿಟ್ಟ ಹೆಚ್ಚಿನ ಹೊಗೆಯನ್ನು ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಅಲ್ಲಿ ಹತ್ತಿರದ ಯಾರಾದರೂ ಅದನ್ನು ಉಸಿರಾಡಬಹುದು. ಇಂತಹ ಸೆಕೆಂಡ್ ಹ್ಯಾಂಡ್ ಹೊಗೆಯು 7,000ಕ್ಕೂ ಹೆಚ್ಚು ರಾಸಾಯನಿಕಗಳನ್ನು ಹೊಂದಿರುತ್ತದೆ, ಅವುಗಳಲ್ಲಿ ನೂರಾರು ವಿಷಕಾರಿ ಮತ್ತು ಕಾರ್ಸಿನೋಜೆನಿಕ್ ಅಂಶಗಳಿರುತ್ತವೆ.
ಸೆಕೆಂಡ್ ಹ್ಯಾಂಡ್ ಧೂಮಪಾನದ ಅಪಾಯ ಯಾರಿಗೆ ಹೆಚ್ಚು?
ಆರೋಗ್ಯ ಪರಿಣತರ ಪ್ರಕಾರ: “ಅನೇಕ ಜನರು ಸೆಕೆಂಡ್ ಹ್ಯಾಂಡ್ ಧೂಮಪಾನದ ಅಪಾಯಗಳಿಗೆ ಗುರಿಯಾಗುತ್ತಾರೆ. ವಿಶೇಷವಾಗಿ ದೀರ್ಘಕಾಲದವರೆಗೆ ನಿಯಮಿತವಾಗಿ ಇಂತಹ ಹೊಗೆಗೆ ಒಡ್ಡಿಕೊಳ್ಳುವವರು, ವಿಶೇಷವಾಗಿ ಸಕ್ರಿಯ ಧೂಮಪಾನಿಗಳ ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳು ಅಪಾಯಕ್ಕೆ ಗುರಿಯಾಗುವರು. ಸೆಕೆಂಡ್ ಹ್ಯಾಂಡ್ ಹೊಗೆ ಮನೆ, ಕೆಲಸದ ಸ್ಥಳ, ಸಾರ್ವಜನಿಕ ಸ್ಥಳಗಳಲ್ಲಿ ಸಮಸ್ಯೆ ಸೃಷ್ಟಿಸಬಹುದು. ಕಾರಿನೊಳಗೂ ನಿಮ್ಮ ಸಹ ಪ್ರಯಾಣಿಕರು ಸಿಗರೇಟು ಸೇದಿದರೆ ಆ ಹೊಗೆಯನ್ನು ನೀವೂ ಸಹ ಕುಡಿಯುತ್ತೀರಿ. ಇದೂ ಸಹ ಅಪಾಯಕ್ಕೆ ದಾರಿಯಾಗುತ್ತದೆ”.
ಸೆಕೆಂಡ್ ಹ್ಯಾಂಡ್ ಧೂಮಪಾನದ ಅಪಾಯಗಳೇನು?
-ಶೇ. 20-30ರಷ್ಟು ಧೂಮಪಾನ ಮಾಡದ ಜನರಲ್ಲಿ ಸೆಕೆಂಡ್ ಹ್ಯಾಂಡ್ ಹೊಗೆ ಶ್ವಾಸಕೋಶದ ಕ್ಯಾನ್ಸರ್ ಉಂಟುಮಾಡುತ್ತದೆ. ಸೆಕೆಂಡ್ ಹ್ಯಾಂಡ್ ಹೊಗೆ ಸೈನಸ್, ಗಂಟಲು, ಸ್ತನ ಮತ್ತು ಹೊಟ್ಟೆಯ ಕ್ಯಾನ್ಸರ್‌ಗೂ ಕಾರಣವಾಗುತ್ತದೆ.
-ಬಾಲ್ಯದಲ್ಲೇ ಕಾಡುವ ಕೆಲವು ಕ್ಯಾನ್ಸರ್‌ಗಳು, ಲಿಂಫೋಮಾ, ಲ್ಯುಕೇಮಿಯಾ ಮತ್ತು ಮೆದುಳಿನ ಗೆಡ್ಡೆಗಳಂತಹ ಸಮಸ್ಯೆಗಳು ಪರೋಕ್ಷ ಧೂಮಪಾನದ ಜೊತೆಗೆ ಸಂಬಂಧ ಹೊಂದಿವೆ.
-ಧೂಮಪಾನವು ಸೈನಸೈಟಿಸ್, ಶ್ವಾಸನಾಳದ ಆಸ್ತಮಾ, ಮರುಕಳಿಸುವ ಎದೆಯ ಸೋಂಕುಗಳು ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
-ಗರ್ಭಿಣಿಯರು ಧೂಮಪಾನ ಮಾಡುವುದರಿಂದ ಗರ್ಭದಲ್ಲಿರುವ ಶಿಶುವಿನ ಹಠಾತ್ ಮರಣದ (SIDS) ಅಪಾಯ ಹೆಚ್ಚಿದೆ. ಗರ್ಭಪಾತ ಅಥವಾ ಅಕಾಲಿಕ ಹೆರಿಗೆಯಂತಹ ಸಂದರ್ಭಗಳು ತಲೆದೋರಬಹುದು.
ಮಕ್ಕಳಿಗೂ ಉಂಟು ಅಪಾಯ…
ಪರೋಕ್ಷ ಧೂಮಪಾನಕ್ಕೆ ಒಳಗಾದ ಪೋಷಕರಲ್ಲಿ ಶ್ವಾಸಕೋಶದ ಸಮಸ್ಯೆಗಳು ಉಂಟಾಗಿದ್ದರೆ ಅವರ ಮಕ್ಕಳಿಗೆ ಬ್ರಾಂಕೈಟಿಸ್, ಅಸ್ತಮಾ, ನ್ಯುಮೋನಿಯಾದಂತಹ ಕಾಯಿಲೆಗಳು ತಗಲುವ ಸಂಭವ ಹೆಚ್ಚು. ಸೆಕೆಂಡ್ ಹ್ಯಾಂಡ್ ಹೊಗೆಯನ್ನು ಉಸಿರಾಡದ ಮಕ್ಕಳಿಗಿಂತ ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಂಡಿರುವ ಮಕ್ಕಳಲ್ಲಿ ಕಲಿಕೆಯ ಸಾಮರ್ಥ್ಯದಲ್ಲಿ ದುರ್ಬಲತೆ, ಮೆದುಳಿನ ಗೆಡ್ಡೆಗಳು ಮತ್ತು ನಡವಳಿಕೆಯ ಸಮಸ್ಯೆಗಳ ಅಪಾಯ ಹೆಚ್ಚಿರುತ್ತದೆ ಎಂದು ಅಧ್ಯಯನ ತಿಳಿಸುತ್ತದೆ.
ಸೆಕೆಂಡ್ ಹ್ಯಾಂಡ್ ಹೊಗೆಯ ಉಸಿರಾಟಕ್ಕೆ ಹೇಗೆ ಚಿಕಿತ್ಸೆ ನೀಡಬಹುದು?
“ಸೆಕೆಂಡ್ ಹ್ಯಾಂಡ್ ಹೊಗೆಯ ಉಸಿರಾಟಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ನೀವು ಧೂಮಪಾನಿಗಳಿಂದ ದೂರ ಸರಿಯುವುದೊಂದೇ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಇರುವ ದಾರಿ. ನಿಮ್ಮ ಮನೆ ಮತ್ತು ಕಚೇರಿಯನ್ನು ಹೊಗೆ ಮುಕ್ತ ವಲಯವಾಗಿ ಇರಿಸಿಕೊಳ್ಳಿ, ಸಹೋದ್ಯೋಗಿಗಳು ನಿಮ್ಮ ಕಾರಿನಲ್ಲಿ ಧೂಮಪಾನ ಮಾಡಲು ಬಿಡಬೇಡಿ” ಎಂದು ಆರೋಗ್ಯ ಪರಿಣತರು ಸಲಹೆ ನೀಡಿದ್ದಾರೆ.
ಪರೋಕ್ಷ ಧೂಮಪಾನದಿಂದ ನನ್ನನ್ನು ಮತ್ತು ನನ್ನ ಕುಟುಂಬವನ್ನು ನಾನು ಹೇಗೆ ರಕ್ಷಿಸಿಕೊಳ್ಳಬಹುದು?
ನಿಮ್ಮ ಕುಟುಂಬವನ್ನು ಸೆಕೆಂಡ್ ಹ್ಯಾಂಡ್ ಹೊಗೆಯಿಂದ ರಕ್ಷಿಸಲು ಉತ್ತಮ ಮಾರ್ಗವೆಂದರೆ, ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರ ಮೇಲ್ವಿಚಾರಣೆಯಲ್ಲಿ ವ್ಯಸನ ಮುಕ್ತಿಯ ಕಾರ್ಯಕ್ರಮಕ್ಕೆ ಸೇರಿಕೊಂಡು ತರಬೇತಿ ಪಡೆಯುವ ಮೂಲಕ ಮೂಲಕ ಧೂಮಪಾನವನ್ನು ತ್ಯಜಿಸುವುದು.
• ಸ್ಮೋಕ್‌ಫ್ರೀ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸಿ
• ಧೂಮಪಾನಕ್ಕೆ ಅನುಮತಿಸುವ ಒಳಾಂಗಣ, ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶಿಸುವುದನ್ನು ತಪ್ಪಿಸಿಕೊಳ್ಳಿ.
• ಸೆಕೆಂಡ್ ಹ್ಯಾಂಡ್ ಹೊಗೆಯಿಂದ ದೂರವಿರಲು ನಿಮ್ಮ ಮಕ್ಕಳಿಗೆ ಕಲಿಸಿ.
• ಕೆಲಸದ ಸ್ಥಳದಲ್ಲಿ ಧೂಮಪಾನ ರಹಿತ ನೀತಿಯನ್ನು ಅಳವಡಿಸಿ.
• ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ದಂಡ ವಿಧಿಸುವುದು.
ಇದನ್ನೂ ಓದಿ| No Tobacco Day: ಧೂಮಪಾನದಿಂದ ಲೈಂಗಿಕ ಸುಖಕ್ಕೆ ಹೊಗೆ!