ಚೆನ್ನೈ: ಒಬ್ಬ ಅನ್ಯಧರ್ಮೀಯ ವ್ಯಕ್ತಿಗೆ ನಿರ್ದಿಷ್ಟ ಹಿಂದೂ ದೇವರಲ್ಲಿ ನಂಬಿಕೆ ಇದ್ದು, ಆತ ದೇವಸ್ಥಾನಕ್ಕೆ ಬಂದಿದ್ದರೆ, ಆತನ ಪ್ರವೇಶವನ್ನು ತಡೆಯಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ತಿರುವಟ್ಟಾರ್‌ನಲ್ಲಿರುವ ಅರುಲ್ಮಿಘು ಆದಿಕೇಶವ ಪೆರುಮಾಳ್ ತಿರುಕೋವಿಲ್‌ನ ಕುಂಭಾಭಿಷೇಕ ಉತ್ಸವದಲ್ಲಿ ಹಿಂದೂಯೇತರರು ಭಾಗವಹಿಸಲು ಅನುಮತಿ ನೀಡದಂತೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಪಿ ಎನ್ ಪ್ರಕಾಶ್ ಮತ್ತು ಆರ್ ಹೇಮಲತಾ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ಹೇಳಿದೆ. ಕ್ರೈಸ್ತ ಧರ್ಮಕ್ಕೆ ಸೇರಿದವರು ಎನ್ನಲಾದ ಸಚಿವರೊಬ್ಬರ ಹೆಸರನ್ನು ಕುಂಭಾಭಿಷೇಕ ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಸಿ ಸೋಮನ್ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಕೋರ್ಟ್ ಹೇಳಿದ್ದೇನು?
ಒಂದು ದೇವಸ್ಥಾನದಲ್ಲಿ ಕುಂಭಾಭಿಷೇಕದಂಥ ದೊಡ್ಡ ಕಾರ್ಯಕ್ರಮ ನಡೆಯುವಾಗ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಅವರಲ್ಲಿ ಪ್ರತಿಯೊಬ್ಬರ ಧಾರ್ಮಿಕ ಅಸ್ಮಿತೆಯನ್ನು ಪರಿಶೀಲಿಸಿ ಪ್ರವೇಶ ನೀಡುವುದು ದೇವಳದ ಅಧಿಕಾರಿಗಳಿಗೆ ಸಾಧ್ಯವೇ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಅನ್ಯ ಧರ್ಮೀಯ ವ್ಯಕ್ತಿಗೆ ಯಾವುದಾದರೂ ಹಿಂದೂ ದೇವರ ಮೇಲೆ ನಂಬಿಕೆ ಇದ್ದು, ಅವನು ದೇವಸ್ಥಾನಕ್ಕೆ ಬರುತ್ತಾನೆ ಎಂದಾದರೆ ಅವನನ್ನು ತಡೆಯುವುದು, ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸುವುದು ಸಾಧ್ಯವಿಲ್ಲ.
ಕ್ರಿಶ್ಚಿಯನ್ ಧರ್ಮದಲ್ಲಿ ಹುಟ್ಟಿದ ಕೆ.ಜೆ. ಯೇಸುದಾಸ್ ಅವರು ಹಿಂದೂ ದೇವರ ಬಗ್ಗೆ ಹಾಡಿದ ಭಕ್ತಿಗೀತೆಗಳನ್ನು ಯಾವುದೇ ತಕರಾರು, ಬೇಸರವಿಲ್ಲದೆ ದೇವಸ್ಥಾನಗಳಲ್ಲೂ ಹಾಕಲಾಗುತ್ತದೆ. ನಿಜವೆಂದರೆ, ನಾಗೋರ್ ದರ್ಗಾ, ವೆಲಕಣಿ ಚರ್ಚ್‌ಗಳಿಗೆ ಹೋಗಿ ಹಿಂದೂಗಳೂ ಪೂಜೆ ಮಾಡುತ್ತಾರೆ ಎಂದು ನ್ಯಾಯಾಲಯ ನೆನಪು ಮಾಡಿಕೊಂಡಿದೆ.
“ನಮ್ಮ ಅಭಿಪ್ರಾಯದಲ್ಲಿ, ದೇವಾಲಯದ ಕುಂಭಾಭಿಷೇಕದಂತಹ ಸಾರ್ವಜನಿಕ ಉತ್ಸವ ನಡೆದಾಗ, ದೇವಾಲಯದ ಪ್ರವೇಶ ಅನುಮತಿಸುವ ಉದ್ದೇಶದಿಂದ ಪ್ರತಿಯೊಬ್ಬ ಭಕ್ತನ ಧಾರ್ಮಿಕ ಗುರುತನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಅಸಾಧ್ಯವಾಗುತ್ತದೆ. ಮತ್ತೊಂದು ಧರ್ಮಕ್ಕೆ ಸೇರಿದ ವ್ಯಕ್ತಿ, ನಿರ್ದಿಷ್ಟ ಹಿಂದೂ ದೇವತೆಯಲ್ಲಿ ನಂಬಿಕೆಯನ್ನು ಹೊಂದಿದ್ದರೆ, ಅದನ್ನು ತಡೆಯಲು ಸಾಧ್ಯವಿಲ್ಲ ಅಥವಾ ದೇವಾಲಯದ ಪ್ರವೇಶವನ್ನು ನಿಷೇಧಿಸಲಾಗದು” ಎಂದು ತಿಳಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.
ಯಾಕೆ ಈ ತೀರ್ಪು ಪ್ರಮುಖ?
– ಮದ್ರಾಸ್ ಹೈಕೋರ್ಟ್‌ನ ಈ ತೀರ್ಪು ಇತ್ತೀಚೆಗೆ ನಡೆಯುತ್ತಿರುವ ಕೆಲವು ವಿದ್ಯಮಾನಗಳ ಹಿನ್ನೆಲೆಯಲ್ಲಿ ಮಹತ್ವವನ್ನು ಪಡೆದಿದೆ. ಹಿಂದೂ ದೇವಸ್ಥಾನಗಳ ಜಾತ್ರೆ ಸಂದರ್ಭದಲ್ಲಿ ಅನ್ಯ ಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂಬ ವಾದ ಜೋರಾಗಿ ನಡೆಯುತ್ತಿದೆ.
– -ಕೇರಳದ ಹಲವು ದೇವಾಲಯಗಳಲ್ಲಿ ಹಿಂದೂಯೇತರರಿಗೆ ಪ್ರವೇಶ ನಿರಾಕರಿಸಲಾಗುತ್ತದೆ ಮತ್ತು ಹಿಂದೂಗಳಲ್ಲದವರಿಗೆ ಪ್ರವೇಶ ಇಲ್ಲ ಎಂದು ಹೊರ ಭಾಗದಲ್ಲೇ ನಮೂದು ಮಾಡಲಾಗಿರುತ್ತದೆ.
ಇದನ್ನೂ ಓದಿ| ಮಾರಮ್ಮನ ಜಾತ್ರೆಗೆ ಮುಸ್ಲಿಮರ ಪಾನೀಯ: ಚಂದ್ರಾ ಲೇಔಟ್‌ನಲ್ಲಿ ಚಂದದ ಸೌಹಾರ್ದತೆ