Site icon Vistara News

New Year 2024: ಹೊಸ ವರ್ಷದಲ್ಲಿ ಭಾರತ-ಚೀನಾ ಯುದ್ಧ; ನಾಸ್ಟ್ರಾಡಾಮಸ್‌ ಭವಿಷ್ಯ ಏನು?

Nostradamus

Nostradamus Predictions For 2024: What Will Happen in New Year, Here Are The Key Points

ನವದೆಹಲಿ: ಭಾರತ ಸೇರಿ ಜಗತ್ತೇ ಹೊಸ ವರ್ಷವನ್ನು (New Year 2024) ಸಡಗರ-ಸಂಭ್ರಮದಿಂದ ಬರಮಾಡಿಕೊಳ್ಳಲು ಮುಂದಾಗಿದೆ. ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿ, ಹೊಸ ವರ್ಷದಲ್ಲಿ ಹೊಸ ಭರವಸೆಯೊಂದಿಗೆ ಜೀವನ ಸಾಗಿಸಲು, ರೆಸೊಲ್ಯೂಷನ್‌ಗಳ ಮೂಲಕ ಬದಲಾವಣೆ ತಂದುಕೊಳ್ಳಲು ಚಿಂತನೆ ನಡೆಯುತ್ತಿವೆ. ಮತ್ತೊಂದೆಡೆ, ಪಾರ್ಟಿ, ಸಂಗೀತ, ಮೋಜು ಮಸ್ತಿಗೆ ಸಿದ್ಧತೆಯೂ ಜೋರಾಗಿದೆ. ಇದರ ಬೆನ್ನಲ್ಲೇ, ಫ್ರಾನ್ಸ್‌ನ ಖ್ಯಾತ ಕಾಲಜ್ಞಾನಿ ನಾಸ್ಟ್ರಾಡಾಮಸ್‌ ಅವರು 2024ರಲ್ಲಿ (Nostradamus Predictions) ಸಂಭವಿಸುವ ಘಟನೆಗಳ ಕುರಿತು ನುಡಿದ ಭವಿಷ್ಯವಾಣಿ ಚರ್ಚೆಗೆ ಬಂದಿದೆ. ಹಾಗಾದರೆ, ಜಗತ್ತಿನಾದ್ಯಂತ 2024ರಲ್ಲಿ ಏನೆಲ್ಲ ಘಟಿಸಲಿವೆ?

ಪೋಪ್‌ ಫ್ರಾನ್ಸಿಸ್‌ ನಿಧನ

ಅಮೆರಿಕದ ಖ್ಯಾತ ಚರ್ಚ್‌ಗೆ ಹೊಸ ಪೋಪ್‌ ಬರಲಿದ್ದಾರೆ. ಹೊಸ ಪೋಪ್‌ ಚರ್ಚ್‌ಅನ್ನು ಮನ್ನಡೆಸಲಿದ್ದಾರೆ. ಈಗಿರುವ ಪೋಪ್‌ ಫ್ರಾನ್ಸಿಸ್‌ ಅವರು ನಿಧನರಾಗಲಿದ್ದಾರೆ ಎಂದು ನಾಸ್ಟ್ರಾಡಾಮಸ್‌ ಅವರು ಭವಿಷ್ಯ ನುಡಿದಿದ್ದಾರೆ. ಪೋಪ್‌ ಫ್ರಾನ್ಸಿಸ್‌ ಅವರಿಗೆ 87 ವರ್ಷ ವಯಸ್ಸಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ, ನಾಸ್ಟ್ರಾಡಾಮಸ್‌ ಭವಿಷ್ಯವಾಣಿಯು ಕ್ರೈಸ್ತರಲ್ಲಿ ಭಯ ಹೆಚ್ಚಿಸಿದೆ ಎಂದು ತಿಳಿದುಬಂದಿದೆ.

ಪ್ರಕೃತಿ ವಿಕೋಪ, ಹವಾಮಾನ ಬದಲಾವಣೆಗೆ ಜನ ತತ್ತರ

2024ರಲ್ಲಿ ಪ್ರಾಕೃತಿಕ ವಿಕೋಪಗಳು, ಹವಾಮಾನ ಬದಲಾವಣೆಯ ಪರಿಣಾಮಗಳು ಜಗತ್ತನ್ನು ಬಾಧಿಸಲಿವೆ ಎಂದು ನಾಸ್ಟ್ರಾಡಾಮಸ್‌ ಭವಿಷ್ಯವಾಣಿ ನುಡಿದಿದ್ದಾರೆ. ಜಗತ್ತಿನ ಹಲವೆಡೆ ಭಾರಿ ಮಳೆಯಿಂದ ಸಾವಿರಾರು ಜನ ಸಾವಿಗೀಡಾಗುತ್ತಾರೆ. ಹಾಗೆಯೇ, ಭೀಕರ ಬರದಿಂದ ನಾಗರಿಕರು ತತ್ತರಿಸಿಹೋಗುತ್ತಾರೆ ಎಂದು ಭವಿಷ್ಯವಾಣಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದ ಜತೆ ಚೀನಾ ನೌಕಾಯುದ್ಧ?

ಲಡಾಕ್‌ ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ ಸಂಘರ್ಷಕ್ಕೆ ಇಳಿದಿರುವ ಚೀನಾ, 2024ರಲ್ಲಿ ಭಾರತದ ಸಾಗರ ಪ್ರದೇಶದಲ್ಲಿ ಬಿಕ್ಕಟ್ಟು ಸೃಷ್ಟಿಸಲಿದೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ. ಭಾರತದ ಸಾಗರ ಪ್ರದೇಶದಲ್ಲಿ ಚೀನಾ ಯುದ್ಧನೌಕೆಗಳನ್ನು ನಿಯೋಜಿಸುವುದರಿಂದ ನೌಕಾ ಯುದ್ಧ ನಡೆಯಲಿದೆ. ಹಾಗೆಯೇ, ಸಂಘರ್ಷದಲ್ಲಿ ಚೀನಾ ಸೋಲನುಭವಿಸಲಿದೆ ಎಂದು ಪ್ರಸ್ತಾಪಿಸಲಾಗಿದೆ. ಹಾಗೆಯೇ, ಕಿಂಗ್‌ ಚಾರ್ಲ್ಸ್‌ ಬದಲಿಗೆ ಪ್ರಿನ್ಸ್‌ ಹ್ಯಾರಿ ಅವರು ಬ್ರಿಟನ್‌ ಅರಸನಾಗಲಿದ್ದಾರೆ ಎಂದು ಕೂಡ ನಾಸ್ಟ್ರಾಡಾಮಸ್‌ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ನಿಜವಾಯಿತು ಸಚಿನ್​ ತೆಂಡೂಲ್ಕರ್​ ನುಡಿದ 11 ವರ್ಷಗಳ ಹಿಂದಿನ ಭವಿಷ್ಯ; ಏನದು?

ಯಾರಿವರು ನಾಸ್ಟ್ರಾಡಾಮಸ್‌

ನಾಸ್ಟ್ರಾಡಾಮಸ್‌ ಅವರು ಫ್ರಾನ್ಸ್‌ನ ಪ್ರಮುಖ ಕಾಲಜ್ಞಾನಿಯಾಗಿದ್ದಾರೆ. ಔಷಧ ವ್ಯಾಪಾರಿಯೂ ಆಗಿದ್ದ ಇವರ ಭವಿಷ್ಯವಾಣಿಗೆ ಜಗತ್ತೇ ಕಿವಿಯಾಗುತ್ತದೆ. 1566ರಲ್ಲಿ ನಿಧನರಾದ ನಾಸ್ಟ್ರಾಡಾಮಸ್‌ ಅವರು ಸಾವಿರಾರು ಭವಿಷ್ಯ ನುಡಿದಿದ್ದಾರೆ. ನಾಸ್ಟ್ರಾಡಾಮಸ್‌ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದು, ಇವರ ಭವಿಷ್ಯವಾಣಿಯು ಶೇ.70ರಷ್ಟು ನಿಜವಾಗಿವೆ ಎಂದು ಹೇಳಲಾಗುತ್ತದೆ. ಕೊರೊನಾ ಸಾಂಕ್ರಾಮಿಕವು ಜಗತ್ತನ್ನು ಬಾಧಿಸಲಿದೆ ಎಂದು ನಾಸ್ಟ್ರಾಡಾಮಸ್‌ ಅವರು ಮೊದಲೇ ಭವಿಷ್ಯ ನುಡಿದಿದ್ದರು ಎಂದೇ ನಂಬಲಾಗಿದೆ. ಅಡಾಲ್ಫ್‌ ಹಿಟ್ಲರನ ಅಟ್ಟಹಾಸ, ಕ್ವೀನ್‌ ಎಲಿಜಬೆತ್‌ ಸಾವು ಸೇರಿ ಹಲವು ಸಂಗತಿಗಳ ಕುರಿತು ನಾಸ್ಟ್ರಾಡಾಮಸ್‌ ನುಡಿದ ಭವಿಷ್ಯ ನಿಜವಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version