Site icon Vistara News

Modi Letter: ಸಾಮಾನ್ಯ ಎಲೆಕ್ಷನ್‌ ಅಲ್ಲ; ರಾಮನವಮಿ ದಿನವೇ ಎನ್‌ಡಿಎ ಅಭ್ಯರ್ಥಿಗಳಿಗೆ ಮೋದಿ ಪತ್ರ!

Modi Letter

Not ordinary election: PM Narendra Modi writes letter to NDA candidates ahead of Polls

ನವದೆಹಲಿ: ದೇಶದಲ್ಲಿ ಮಾರ್ಚ್‌ 19ರಂದು ಮೊದಲ ಹಂತದ ಮತದಾನ ನಡೆಯಲಿದೆ. ಆ ಮೂಲಕ ದೇಶದ ಬೃಹತ್‌ ಪ್ರಜಾಪ್ರಭುತ್ವ ಹಬ್ಬಕ್ಕೆ ಚುನಾವಣಾ ಆಯೋಗ, ಮತದಾರರು ಚಾಲನೆ ನೀಡಲಿದ್ದಾರೆ. ಇನ್ನು, ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಿಜೆಪಿ ನೇತೃತ್ವದ ಎಲ್ಲ ಎನ್‌ಡಿಎ ಅಭ್ಯರ್ಥಿಗಳಿಗೆ (NDA Candidates) ವೈಯಕ್ತಿಕವಾಗಿ ಪತ್ರ (Modi Letter) ಬರೆದಿದ್ದಾರೆ. “ಇದು ಸಾಮಾನ್ಯ ಎಲೆಕ್ಷನ್‌ ಅಲ್ಲ. ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ” ಎಂಬುದು ಸೇರಿ ಮೋದಿ ಅವರು ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.

“ಈ ಪತ್ರದ ಮೂಲಕ ನಾನು ನಿಮ್ಮ ಕ್ಷೇತ್ರದ ಜನರಿಗೆ ಇದು ಸಾಮಾನ್ಯವಾದ ಚುನಾವಣೆ ಅಲ್ಲ ಎಂಬುದನ್ನು ಹೇಳಲು ಬಯಸುತ್ತೇನೆ. ದೇಶಾದ್ಯಂತ ಕುಟುಂಬಗಳಲ್ಲಿ ಇರುವ ಹಿರಿಯರು 5-6 ದಶಕಗಳವರೆಗೆ ಕಾಂಗ್ರೆಸ್‌ ಆಡಳಿತವನ್ನು ನೋಡಿದ್ದಾರೆ. ಆದರೆ, ಕಳೆದ 10 ವರ್ಷಗಳಲ್ಲಿ ಸಮಾಜದ ಎಲ್ಲ ವರ್ಗಗಳ ಜನರ ಜೀವನ ಶೈಲಿಯು ಸುಧಾರಿಸಿದೆ. ತುಂಬ ಸಮಸ್ಯೆಗಳು ನಿವಾರಣೆಯಾಗಿವೆ. ಆದರೆ, ದೇಶದಲ್ಲಿ ಇನ್ನೂ ಹತ್ತಾರು ಸುಧಾರಣೆಗಳು ಆಗಲಿವೆ ಎಂಬುದನ್ನು, ನಿಮ್ಮ ಜೀವನಮಟ್ಟವು ಇನ್ನಷ್ಟು ಎತ್ತರಕ್ಕೆ ಹೋಗುತ್ತದೆ ಎಂಬ ಭರವಸೆ ನೀಡಲು ಬಯಸುತ್ತೇನೆ” ಎಂದು ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ಪ್ರಸಕ್ತ ಲೋಕಸಭೆ ಚುನಾವಣೆಯು ನಮ್ಮ ವರ್ತಮಾನವನ್ನು ಭವಿಷ್ಯದ ಜತೆ ಬೆಸೆಯುವ ಒಳ್ಳೆಯ ಅವಕಾಶವಾಗಿದೆ. ಬಿಜೆಪಿ ಪಡೆಯುವ ಪ್ರತಿಯೊಂದು ಮತವು ಕೂಡ ಸ್ಥಿರ ಸರ್ಕಾರ ರಚನೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, 2047ರ ವೇಳೆಗೆ ವಿಕಸಿತ ಭಾರತದ ಕಲ್ಪನೆ ಸಾಕಾರವಾಗಲು ಏಣಿಗೆಯಾಗುತ್ತದೆ. ಇದು ತುಂಬ ಮುಖ್ಯವಾದ ಸಮಯ. ನೀವು ಸೇರಿ ಎಲ್ಲ ಕಾರ್ಯಕರ್ತರು ನಿರ್ಣಾಯಕ ಕ್ಷಣದವರೆಗೆ ಪ್ರಚಾರ ಮಾಡಿ” ಎಂಬುದಾಗಿ ಪತ್ರದ ಮೂಲಕ ಮೋದಿ ಅವರು ಎನ್‌ಡಿಎ ಅಭ್ಯರ್ಥಿಗಳಿಗೆ ಕರೆ ನೀಡಿದ್ದಾರೆ.

“ದೇಶದ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆಯು ಪ್ರಾಮುಖ್ಯತೆ ಪಡೆದಿದೆ. ಆದರೆ, ಬೇಸಿಗೆಯಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ನೀವು ಹಾಗೂ ನಿಮ್ಮ ಸುತ್ತಲಿನವರ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ. ಮತದಾರರು ಕೂಡ ಬೆಳಗ್ಗೆಯೇ ಮತದಾನ ಕೇಂದ್ರಗಳಿಗೆ ತೆರಳಿ ಹಕ್ಕು ಚಲಾಯಿಸಿ ಎಂಬುದಾಗಿ ಮನವಿ ಮಾಡುತ್ತೇನೆ. ಇನ್ನು, ಎನ್‌ಡಿಎ ಅಭ್ಯರ್ಥಿಗಳು ಚಾಕಚಕ್ಯತೆಯಿಂದ ಪ್ರಚಾರ ಮಾಡಬೇಕು. ನನ್ನ ಅವಧಿಯಲ್ಲಿ ಜಾರಿಯಾದ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಹಾಗೆಯೇ, ಚುನಾವಣೆಯಲ್ಲಿ ನಿಮಗೆ ಗೆಲುವಾಗಲಿ ಎಂದು ಹರಸುತ್ತೇನೆ” ಎಂಬುದಾಗಿ ಮೋದಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Narendra Modi: ಪಾದರಕ್ಷೆ ಕಳಚಿಟ್ಟು ವಿಮಾನದಲ್ಲೇ ರಾಮನ ಸೂರ್ಯ ತಿಲಕ ವೀಕ್ಷಿಸಿದ ಪ್ರಧಾನಿ ಮೋದಿ

Exit mobile version