Site icon Vistara News

ಷೇರು ಪೇಟೆ ರಾಣಿ ಎಂದೇ ಹೆಸರಾದ NSE ಮಾಜಿ ಅಧ್ಯಕ್ಷೆ ಚಿತ್ರಾ ರಾಮಕೃಷ್ಣ ಇ.ಡಿಯಿಂದ ಬಂಧನ

Chitra Ramakrishna

ಮುಂಬಯಿ: ಷೇರು ಪೇಟೆ ರಾಣಿ ಎಂದೇ ಹೆಸರಾದ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ಮಾಜಿ ಅಧ್ಯಕ್ಷೆ ಚಿತ್ರಾ ರಾಮಕೃಷ್ಣ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿದೆ. ೨೦೦೯ ಮತ್ತು ೨೦೧೭ರ ನಡುವೆ ನಡೆದ ಅಕ್ರಮ ಫೋನ್‌ ಟ್ಯಾಪಿಂಗ್‌ ಹಾಗೂ ಎನ್‌ಎಸ್‌ಇ ಉದ್ಯೋಗಿಗಳದೇ ಫೋನ್‌ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ಲೇವಾದೇವಿ ಪ್ರಕರಣದಲ್ಲಿ ಈ ಬಂಧನ ನಡೆದಿದೆ.

ಚಿತ್ರಾ ರಾಮಕೃಷ್ಣ ಮತ್ತು ಸಹೋದ್ಯೋಗಿ ರವಿ ನಾರಾಯಣ್‌ ಅವರು ಮುಂಬಯಿಯ ಮಾಜಿ ಪೊಲೀಸ್‌ ಕಮೀಷನರ್‌ ಸಂಜಯ್‌ ಪಾಂಡೆ ಅವರ ನೆರವು ಪಡೆದು ಉದ್ಯೋಗಿಗಳ ಫೋನ್‌ ಕದ್ದಾಲಿಕೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ಸ್ವತಃ ಕೇಂದ್ರ ಗೃಹ ಸಚಿವಾಲಯವೇ ಸಿಬಿಐ ತನಿಖೆಗೆ ಆದೇಶಿಸಿತ್ತು. ಇದೀಗ ಜಾರಿ ನಿರ್ದೇಶನಾಲಯ ಈ ವಿಚಾರದಲ್ಲಿ ನಡೆದ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಸುತ್ತಿದೆ. ಅದರ ಭಾಗವಾಗಿ ಚಿತ್ರಾ ರಾಮಕೃಷ್ಣ ಅವರನ್ನು ಬಂಧಿಸಲಾಗಿದೆ. ಮಾಜಿ ಪೊಲೀಸ್‌ ಕಮಿಷನರ್‌ ಪಾಂಡೆ ಅವರು ಸ್ಥಾಪಿಸಿದ ಸಂಸ್ಥೆಯನ್ನು ಈ ಕದ್ದಾಲಿಕೆಗೆ ಬಳಸಲಾಗಿತ್ತು.

ಸಿಬಿಐ ಮತ್ತು ಇ.ಡಿ ದಾಖಲಿಸಿದ ಎರಡೂ ಪ್ರಕರಣಗಳಲ್ಲಿ ಸಂಜಯ್‌ ಪಾಂಡೇ, ಅವರ ಸಾರಥ್ಯದ ದಿಲ್ಲಿ ಮೂಲದ ಕಂಪನಿ, ಎನ್‌ಎಸ್‌ಇಯ ಮಾಜಿ ಎಂಡಿ ರವಿ ನಾರಾಯಣ ಮತ್ತು ಚಿತ್ರಾ ರಾಮಕೃಷ್ಣ ಅವರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಜತೆಗೆ ಕಾರ್ಯಕಾರಿ ಉಪಾಧ್ಯಕ್ಷ ರವಿ ವಾರಾಣಸಿ, ಮಹೇಶ್‌ ಹಲ್ದೀಪುರ ಮೊದಲಾದವರ ಹೆಸರೂ ಇದೆ.

ನಾಲ್ಕು ದಿನಗಳ ವಿಚಾರಣೆಗೆ ಅವಕಾಶ
ಎನ್‌ಎಸ್‌ಇ ಅಕ್ರಮಗಳಿಗೆ ಸಂಬಂಧಿಸಿ ತನಿಖೆ ನಡೆಸಿದ್ದ ಸೆಬಿ ಕಳೆದ ತಿಂಗಳು ಒಂದು ವರದಿ ಸಲ್ಲಿಸಿತ್ತು. ಅದರಲ್ಲಿ, ಚಿತ್ರಾ ರಾಮಕೃಷ್ಣ ಮತ್ತು ಗ್ರೂಪ್‌ ಆಪರೇಟಿಂಗ್‌ ಆಫೀಸರ್‌ (ಜಿಒಒ) ಆನಂದ್‌ ಸುಬ್ರಹ್ಮಣ್ಯನ್‌ ಅವರು ಸೇರಿದಂತೆ ಇತರರಿಗೆ ಸಂಬಂಧಿಸಿದ ೧೮ ಕಂಪನಿಗಳು ಅಕ್ರಮದಲ್ಲಿ ಶಾಮೀಲಾಗಿವೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ೪೩.೮ ಕೋಟಿ ರೂ. ದಂಡವನ್ನೂ ವಿಧಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಚಿತ್ರಾ ರಾಮಕೃಷ್ಣ ಮತ್ತು ಇತರರನ್ನು ದಿಲ್ಲಿಯ ಕೋರ್ಟ್‌ ಒಂದಕ್ಕೆ ಹಾಜರುಪಡಿಸಲಾಗಿತ್ತು. ಅಲ್ಲಿ ಚಿತ್ರಾ ರಾಮಕೃಷ್ಣ ಮತ್ತು ಇತರರನ್ನು ನಾಲ್ಕು ದಿನಗಳ ವಿಚಾರಣೆಗಾಗಿ ಇ.ಡಿ. ವಶಕ್ಕೆ ಒಪ್ಪಿಸಲಾಯಿತು.

ಏನಿದು ವಂಚನೆ?
೨೦೧೫ರಲ್ಲಿ ಅಕ್ರಮಗಳ ಬಗ್ಗೆ ಗಮನ ಸೆಳೆಯುವ ವಿಷಲ್‌ ಬ್ಲೋವರ್‌ ಒಬ್ಬರು ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಕೆಲವೊಂದು ಬ್ರೋಕರ್‌ಗಳಿಗೆ ಮಾರುಕಟ್ಟೆ ತೆರೆಯುವ ಮೊದಲೇ ಎನ್‌ಎಸ್‌ಇ ಲಿಂಕ್‌ ಸಿಕ್ಕಿ ಬಿಡುತ್ತಿದೆ. ಅವರು ಬೇಗನೆ ವ್ಯವಹಾರ ಆರಂಭಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಎನ್‌ಎಸ್‌ಇ ಅಲ್ಲದ ಇನ್ನೊಂದು ಸಹ ಲೊಕೇಶನ್‌ನಿಂದ ಈ ಲಿಂಕ್‌ ಸಿಗುತ್ತಿದೆ ಎಂದು ಆರೋಪಿಸಿದ್ದರು. ಚಿತ್ರಾ ರಾಮಕೃಷ್ಣ ಅವರು ೨೦೧೩ರಲ್ಲಿ ಎನ್‌ಎಸ್‌ಇಯ ಎಂಡಿ ಮತ್ತು ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ನಂತರದ ಬೆಳವಣಿಗೆ ಎಂದು ಆರೋಪಿಸಲಾಗಿತ್ತು. ಇದರ ಬಗ್ಗೆ ತನಿಖೆ ನಡೆಸಿದಾಗ ಚಿತ್ರಾ ರಾಮಕೃಷ್ಣ ಮತ್ತು ಟೀಮ್‌ ನಡೆಸಿದ ಅಕ್ರಮಗಳು ಬಯಲಿಗೆ ಬಂದಿದ್ದವು.

Exit mobile version