Site icon Vistara News

Chandrayaan 3: ʼದಕ್ಷಿಣ ಏಷ್ಯಾದ ದೈತ್ಯ ದೇಶದಿಂದ ಚಂದ್ರನ ದಕ್ಷಿಣ ಧ್ರುವ ಚುಂಬನ…ʼ ಜಾಗತಿಕ ಮೀಡಿಯಾ ಪ್ರಶಂಸೆ

medias on chandrayaan 3

ಹೊಸದಿಲ್ಲಿ: ಚಂದ್ರಯಾನ 3ರ (Chandrayaan 3) ಅದ್ಭುತ ಯಶಸ್ಸು ಜಾಗತಿಕ ಮಾಧ್ಯಮಗಳನ್ನೂ ಆಕರ್ಷಿಸಿದೆ. ಅಮೆರಿಕದ ದಿ ನ್ಯೂಯಾರ್ಕ್‌ ಟೈಮ್ಸ್‌ (The New york Times) , ವಾಷಿಂಗ್ಟನ್‌ ಪೋಸ್ಟ್‌ (Washington Post)‌, ಯುಕೆಯ ಗಾರ್ಡಿಯನ್ (Guardian) ಮುಂತಾದ ಪತ್ರಿಕೆಗಳು ಭಾರತದ ಸಾಧನೆಯನ್ನು ಕೊಂಡಾಡಿವೆ.

”ದಕ್ಷಿಣ ಏಷ್ಯಾದ ರಾಜತಾಂತ್ರಿಕ ದೈತ್ಯನಾಗುವತ್ತ ಮಹತ್ವಾಕಾಂಕ್ಷೆಯ ಹೆಜ್ಜೆಗಳನ್ನು ಹಾಕುತ್ತಿರುವ ಹೊತ್ತಿನಲ್ಲಿ ಚಂದ್ರದ ದಕ್ಷಿಣ ಧ್ರುವದ ಮೇಲೆ ಕಾಲಿಟ್ಟಿರುವ ಚಂದ್ರಯಾನದ ಸಾಧನೆ ಭಾರತಕ್ಕೆ ಇನ್ನಷ್ಟು ಮಧುರವಾದುದು” ಎಂದು ನ್ಯೂಯಾರ್ಕ್‌ ಟೈಮ್ಸ್‌ (NYT) ಶ್ಲಾಘಿಸಿದೆ.

ʼIndia is on the Moon’ ಎಂಬ ಶೀರ್ಷಿಕೆಯ ವರದಿಯಲ್ಲಿ NYT, ಈ ಯಶಸ್ಸು ಭಾರತವನ್ನು ಮುಂದಿನ ಬಾಹ್ಯಾಕಾಶ ಅಧ್ಯಾಯಕ್ಕೆ ಕೊಂಡೊಯ್ಯಲಿದೆ ಎಂದಿದೆ. ಇತರ ರಾಷ್ಟ್ರಗಳಿಗಿಂತ ಕಡಿಮೆ ಆರ್ಥಿಕ ಸಂಪನ್ಮೂಲದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯದಲ್ಲಿ ಭಾರತ ಹೆಮ್ಮೆಯನ್ನು ಹೊಂದಿದೆ. ಇತರ ಹಲವು ಕ್ಷೇತ್ರಗಳಂತೆ ಬಾಹ್ಯಾಕಾಶ ಸಂಶೋಧನೆಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಂದೇಶ ಸ್ಪಷ್ಟವಾಗಿದೆ: ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವು ತನ್ನ ಜನರ ಮೂಲಭೂತ ಅಗತ್ಯಗಳನ್ನೂ ನಿರ್ವಹಿಸುವುದರೊಂದಿಗೆ ನಾಯಕತ್ವದ ಪಾತ್ರವನ್ನು ವಹಿಸಿದರೆ ಜಗತ್ತು ಉತ್ತಮ ಸ್ಥಳವಾಗಿರುತ್ತದೆ ಎಂದಿರುವ ನ್ಯೂಯಾರ್ಕ್‌ ಟೈಮ್ಸ್‌, ಜಾಗತಿಕ ವೇದಿಕೆಯ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುವುದರ ಮೂಲಕ ಮೂರನೇ ಸಲ ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆಯನ್ನು ಮೋದಿ ಖಚಿತಪಡಿಸಿಕೊಳ್ಳುತ್ತಿದ್ದಾರೆ ಎಂದೂ ಅದು ಸೇರಿಸಿದೆ.

“ಬಾಹ್ಯಾಕಾಶದಲ್ಲಿ ಬೆಳೆಯುತ್ತಿರುವ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ದೇಶಕ್ಕೆ ವಿಜಯವಾಗಿದೆ. ಜಾಗತಿಕ ವೇದಿಕೆಯಲ್ಲಿ ದೇಶದ ಘನತೆಯ ಸಂಕೇತವಾಗಿ ಇಸ್ರೋವನ್ನು ನಿಲ್ಲಿಸಲು ಮೋದಿ ಪ್ರಯತ್ನಿಸಿದ್ದಾರೆ. ಭಾರತ ತನ್ನ ಬಾಹ್ಯಾಕಾಶ ಕಾರ್ಯಕ್ರಮವನ್ನು ತನ್ನ ಆರ್ಥಿಕತೆ ಮತ್ತು ಬೆಳೆಯುತ್ತಿರುವ ಟೆಕ್ ವಲಯವನ್ನು ಹೆಚ್ಚಿಸಲು ಒಂದು ಮಾರ್ಗವಾಗಿ ಬಳಸುತ್ತಿದೆ. ಬಾಹ್ಯಾಕಾಶ ವಲಯದಲ್ಲಿ ಮಹತ್ವಾಕಾಂಕ್ಷೆ ಹೊಂದಿರುವ ಮತ್ತು ಈಗಾಗಲೇ ಚಂದ್ರನ ಮೇಲೆ ಇಳಿದಿರುವ ಚೀನಾವನ್ನು ಮೀರಿಸಲು ಅದು ಪ್ರಯತ್ನಿಸಿದೆ. ಭಾರತವು ತನ್ನ ಮಿಲಿಟರಿ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಕೂಡ ಅಭಿವೃದ್ಧಿಪಡಿಸಿದೆ. 2019ರಲ್ಲಿ ಭಾರತ ಕ್ಷಿಪಣಿಯ ಮೂಲಕ ತನ್ನ ಉಪಗ್ರಹವನ್ನು ಧ್ವಂಸಗೊಳಿಸಿ, ಎದುರಾಳಿಗಳ ಬಾಹ್ಯಾಕಾಶ ಸ್ವತ್ತುಗಳನ್ನು ಕೆಡವಬಲ್ಲ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆʼʼ ಎಂದು ವಾಷಿಂಗ್ಟನ್‌ ಪೋಸ್ಟ್‌ ಮೆಚ್ಚಿಗೆ ಸೂಚಿಸಿದೆ.

ʼʼಚಂದ್ರನ ಮೇಲೆ ಅಪೊಲೊ ನೌಕೆಯ ಮೂಲಕ ಮನುಷ್ಯ ಇಳಿದು ಅರ್ಧ ಶತಮಾನ ಆಗಿದ್ದರೂ ಈಗಲೂ ಅಲ್ಲಿ ಇಳಿಯುವುದು ದೊಡ್ಡ ತಾಂತ್ರಿಕ ಸಾಧನೆ. ಭಾರತ ಚಂದ್ರನ ದಕ್ಷಿಣ ಧ್ರುವವನ್ನು ತನ್ನ ಗಮ್ಯಸ್ಥಾನವಾಗಿ ಆರಿಸಿಕೊಂಡು ಕಠಿಣ ಪರೀಕ್ಷೆಯನ್ನು ಉತ್ತರಿಸಿದೆ. ಇದು ಅದರ ಯಶಸ್ಸನ್ನು ಇನ್ನಷ್ಟು ಮಧುರಗೊಳಿಸಿದೆʼʼ ಎಂದು ಗಾರ್ಡಿಯನ್‌ ಶ್ಲಾಘಿಸಿದೆ.

”ಚಂದ್ರಯಾನದ ವೆಚ್ಚ ಕೇವಲ 75 ಮಿಲಿಯ ಡಾಲರ್‌. ಇದು ಗ್ರಾವಿಟಿ ಚಲನಚಿತ್ರದ ಬಜೆಟ್‌ಗಿಂತ ಕಡಿಮೆ (100 ಮಿಲಿಯ ಡಾಲರ್). ನಾಲ್ಕು ದಿನಗಳ ಹಿಂದೆ ರಷ್ಯಾ ವಿಫಲವಾದ ಸ್ಥಳದಲ್ಲಿ ಭಾರತ ಯಶಸ್ವಿಯಾಗಿದೆʼʼ ಎಂದು ಫ್ರೆಂಚ್ ದೈನಿಕ ಲೆ ಮಾಂಡೆ ಚಂದ್ರಯಾನವನ್ನು ಶ್ಲಾಘಿಸಿದೆ.

ಇದನ್ನೂ ಓದಿ: Chandrayaan 3: ‘ಇಸ್ರೋ ಸಾಧನೆ’ ಹೊಗಳಿದ ಚಂದ್ರಯಾನ 3 ಮಿಷನ್ ವ್ಯಂಗ್ಯ ಮಾಡಿದ್ದ ನಟ ಪ್ರಕಾಶ್ ರಾಜ್!

Exit mobile version