ಸ್ಥಳೀಯ ಸಂಸ್ಥೆಗಳ ಚುನಾವಣೆ ಇರಲಿ, ವಿಧಾನಸಭೆ ಚುನಾವಣೆ ಇರಲಿ ಅಥವಾ ಲೋಕಸಭೆ ಚುನಾವಣೆಯೇ ಇರಲಿ. ಹಲವು ತಿಂಗಳು, ಕೆಲವೊಮ್ಮೆ ಒಂದು ವರ್ಷ ಇರುವ ಮೊದಲೇ ಬಿಜೆಪಿಯು ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಅದರಲ್ಲೂ, 2024ರಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಕಮಲ ಪಾಳಯವು ಮತದಾರರನ್ನು ಸೆಳೆಯಲು ಒಂದೇ ಒಂದು ಸಣ್ಣ ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ. ಅಷ್ಟರಮಟ್ಟಿಗೆ ಬಿಜೆಪಿಯು ಚುನಾವಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಮುಂಬರುವ ಲೋಕಸಭೆ ಚುನಾವಣೆಯು ಬಿಜೆಪಿಗೆ ನಿರ್ಣಾಯಕವಾಗಿದೆ. ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಒಗ್ಗೂಡುತ್ತಿವೆ. ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ. ಹಾಗಾಗಿ, ಬಿಜೆಪಿಯು ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿ ತೆರಳಲು ಮುಂದಾಗುತ್ತಿದೆ. ಅದರಲ್ಲೂ, ಪ್ರಸಕ್ತ ವರ್ಷದಲ್ಲಿಯೇ 9 ರಾಜ್ಯಗಳ ವಿಧಾನಸಭೆ ಚುನಾವಣೆ ಇರುವುದರಿಂದ ಕಮಲ ಪಡೆಯು ಹತ್ತಾರು ಯೋಜನೆ, ರಣತಂತ್ರಗಳನ್ನು ರೂಪಿಸಿದೆ.
ಒಬಿಸಿ ಮತಬೇಟೆಗೆ ಯೋಜನೆ ಸಿದ್ಧ
ದೇಶದ ಬಹುತೇಕ ರಾಜ್ಯಗಳಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮತಗಳು ನಿರ್ಣಾಯಕವಾಗಿವೆ. ಇದರಿಂದಾಗಿ ಶೇ.50ರಷ್ಟು ಒಬಿಸಿ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಜನವರಿ ಹಾಗೂ ಫೆಬ್ರವರಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಒಬಿಸಿ ಮತ ಸೆಳೆಯಲು ಯೋಜನೆ ರೂಪಿಸಲಾಗುತ್ತದೆ. ಇದಕ್ಕಾಗಿ ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಹಲವು ಯೋಜನೆ ರೂಪಿಸಲಾಗುತ್ತದೆ. ಕರ್ನಾಟಕದಲ್ಲಿ ಈಗಾಗಲೇ ಪಂಚಮಸಾಲಿ ಲಿಂಗಾಯತರು ಹಾಗೂ ಒಕ್ಕಲಿಗರಿಗೆ ಮೀಸಲಾತಿ ಕೆಟಗರಿ ಬದಲಿಸಿದ್ದೇ ಸಾಕ್ಷಿಯಾಗಿದೆ.
ಗ್ರಾಮ ಗ್ರಾಮ, ಮನೆ ಮನೆ ಭೇಟಿ
ಸಾಮಾಜಿಕ ಜಾಲತಾಣಗಳ ಸದ್ಬಳಕೆ ಜತೆಗೆ ದೇಶದ ಬಹುತೇಕ ಗ್ರಾಮಗಳು ಹಾಗೂ ಮನೆಗಳಿಗೆ ಭೇಟಿ ನೀಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸುವ ತಂತ್ರ ಬಿಜೆಪಿಯದ್ದಾಗಿದೆ. “ಮಂಡಲ್ ಕಾರ್ಯಕರ್ತರಿಂದ ರಾಷ್ಟ್ರೀಯ ನಾಯಕರವರೆಗೆ, ಪ್ರತಿಯೊಬ್ಬರೂ ದೇಶದ ಗ್ರಾಮಗಳಿಗೆ, ಎಲ್ಲ ಮನೆಗಳಿಗೆ ಭೇಟಿ ನೀಡುವ ಮೂಲಕ, ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ” ಎಂದು ಬಿಜಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕೆ. ಲಕ್ಷ್ಮಣ್ ಮಾಹಿತಿ ನೀಡಿದ್ದಾರೆ.
ಏಪ್ರಿಲ್‌ನಿಂದ 10 ತಿಂಗಳು ಭರ್ಜರಿ ರಣತಂತ್ರ
ಪ್ರಸಕ್ತ ವರ್ಷ ಮೇ ತಿಂಗಳಿಂದ ವರ್ಷಾಂತ್ಯಕ್ಕೂ ಮೊದಲು ಕರ್ನಾಟಕ ಸೇರಿ 9 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಬಿಜೆಪಿಯು ಪ್ರಸಕ್ತ ವರ್ಷದ ಏಪ್ರಿಲ್‌ನಿಂದ 10 ತಿಂಗಳವರೆಗೆ ಸಾಲು ಸಾಲು ಕಾರ್ಯತಂತ್ರ ರೂಪಿಸಿದೆ. ಮನೆ ಮನೆ ಭೇಟಿ, ರ‍್ಯಾಲಿ, ಸಮಾವೇಶ, ಸಾಮಾಜಿಕ ಜಾಲತಾಣಗಳ ಬಳಕೆ ಸೇರಿ ವಿವಿಧ ರೀತಿಯಲ್ಲಿ ಪ್ರಚಾರ ಕಾರ್ಯ ಆರಂಭವಾಗುತ್ತದೆ. ರಾಷ್ಟ್ರೀಯ ಕಾರ್ಯಕಾರಿಣಿಗಳಲ್ಲಿ ಯೋಜನೆ ಅಂತಿಮವಾಗಲಿದೆ.
ಬಿ.ಎಲ್.ಸಂತೋಷ್ ಸೇರಿ ಪಂಚ ನಾಯಕರ ತಂಡ ರಚನೆ
ಮುಂಬರುವ ಲೋಕಸಭೆ ಚುನಾವಣೆಯ ಕಾರ್ಯತಂತ್ರದ ಉಸ್ತುವಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ವಹಿಸಿಕೊಂಡಿದ್ದು, ಇದಕ್ಕಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಒಳಗೊಂಡ ಐವರು ನಾಯಕರ ಉನ್ನತ ತಂಡ ರಚಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿ.ಎಲ್.ಸಂತೋಷ್ ಅವರು ತಂಡದಲ್ಲಿದ್ದಾರೆ. ಇವರಿಗೆ ಚುನಾವಣೆ ಕಾರ್ಯತಂತ್ರದ ಉಸ್ತುವಾರಿ ನೀಡಲಾಗಿದೆ.
ಪಕ್ಷ ಬಲವರ್ಧನೆಗೆ 3,500 ‘ವಿಸ್ತಾರಕ’ರ ಬಲ
ದೇಶದೆಲ್ಲೆಡೆ ವ್ಯಾಪಿಸಿರುವ ಬಿಜೆಪಿಯನ್ನು ಮತ್ತಷ್ಟು ಬಲಪಡಿಸಲು ಸುಮಾರು 3,000-3,500 ‘ವಿಸ್ತಾರಕ’ರ ಪಡೆಯನ್ನು ದೇಶಾದ್ಯಂತ ನಿಯೋಜಿಸಲು ಬಿಜೆಪಿ ತೀರ್ಮಾನಿಸಿದೆ. ಸಾಲು ಸಾಲು ವಿಧಾನಸಭೆ ಚುನಾವಣೆಗಳು ಹಾಗೂ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಬಿಜೆಪಿಯು ವಿಸ್ತಾರಕರನ್ನು ನಿಯೋಜಿಸಲಿದೆ. ವಿಸ್ತಾರಕರು ಗ್ರಾಮಗಳಿಗೆ ತೆರಳಿ ಪಕ್ಷವನ್ನು ಸ್ಥಳೀಯ ಮಟ್ಟದಲ್ಲಿ ಮತ್ತಷ್ಟು ಬಲಪಡಿಸಲು ಯಾವ ಯೋಜನೆಗಳನ್ನು ರೂಪಿಸಬೇಕು ಎಂಬುದರ ವಿಸ್ತೃತ ವರದಿ ತಯಾರಿಸುತ್ತದೆ ಎಂದು ತಿಳಿದುಬಂದಿದೆ.
ರಾಮಮಂದಿರ ಸೇರಿ ಪ್ರಮುಖ ವಿಷಯಗಳು ಮುನ್ನೆಲೆಗೆ
ಬಿಜೆಪಿಯು ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಸಿದ್ಧಾಂತ, ಚುನಾವಣೆ ವಿಷಯಗಳ ಪಾತ್ರ ಹೆಚ್ಚಾಗಿದೆ. ಹಾಗಾಗಿಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಜನವರಿಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ ಎಂದು ಘೋಷಿಸಿದ್ದಾರೆ. 2024ರ ವೇಳೆಗೆ ಮಾವೋವಾದವನ್ನು ನಿರ್ಮೂಲನೆ ಮಾಡುವ ಗುರಿ ಇದೆ ಎಂದು ಹೇಳಿದ್ದಾರೆ. ಇನ್ನು ಪಿಒಕೆ ವಶ, ಏಕರೂಪ ನಾಗರಿಕ ಸಂಹಿತೆ ಸೇರಿ ಹಲವು ವಿಷಯಗಳಿಗೆ ಬಿಜೆಪಿಯು ಹೆಚ್ಚಿನ ಆದ್ಯತೆ ನೀಡುತ್ತಿದೆ. ಆ ಮೂಲಕ ಸೈದ್ಧಾಂತಿಕವಾಗಿಯೂ ಚುನಾವಣೆಗೆ ಸಿದ್ಧವಾಗುತ್ತಿದೆ.
ಇದನ್ನೂ ಓದಿ | New Year 2023 | ಹೊಸ ವರ್ಷದಲ್ಲಿ ಯಾವ ರಾಜ್ಯಗಳಲ್ಲಿ ಚುನಾವಣೆ? ಹೇಗಿದೆ ಪಕ್ಷಗಳ ರಣತಂತ್ರ?