ಭುವನೇಶ್ವರ: ಒಡಿಶಾದಲ್ಲಿ ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆದಿದೆ (Odisha Assembly Election). ಸದ್ಯ ಎಕ್ಸಿಟ್ ಪೋಲ್ ಫಲಿತಾಂಶ ಹೊರ ಬಿದ್ದಿದೆ. ಅದರ ಪ್ರಕಾರ ಈ ಬಾರಿ ಆಡಳಿತರೂಢ ಬಿಜು ಜನತಾ ದಳ (BJD) ಮತ್ತು ಬಿಜೆಪಿ (BJP) ನಡುವೆ ತೀವ್ರ ಹಣಾಹಣಿ ಇದೆ. 147 ಸದಸ್ಯರ ವಿಧಾನಸಭೆಯಲ್ಲಿ ಎರಡೂ ಪಕ್ಷಗಳಿಗೆ ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ 62-80 ಸ್ಥಾನಗಳನ್ನು ನೀಡಿದೆ.
2019ರಲ್ಲಿ ಬಿಜೆಪಿ ಶೇ. 32.49ರಷ್ಟು ಮತ ಪಡೆದುಕೊಂಡಿತ್ತು. ಸಮೀಕ್ಷೆ ಪ್ರಕಾರ ಈ ಬಾರಿ ಕಮಲ ಪಡೆಗೆ ಶೇ. 42ರಷ್ಟು ವೋಟು ಲಭಿಸಲಿದೆ. ಅಂದರೆ ವೋಟಿನ ಪ್ರಮಾಣ ಸುಮಾರು ಶೇ. 10ರಷ್ಟು ವೃದ್ಧಿಸಲಿದೆ. ಕಾಂಗ್ರೆಸ್ 5ರಿಂದ 8 ಸ್ಥಾನಗಳು ಮತ್ತು ಶೇ. 12ರಷ್ಟು ಮತಗಳೊಂದಿಗೆ ಮೂರನೇ ಸ್ಥಾನದಲ್ಲಿರಲಿದೆ ಎಂದು ಅಂಕಿಅಂಶಗಳು ಹೇಳಿದೆ.
. @BJP4India seems to be sweeping Odisha in Assembly election.#ExitPoll #OdishaAssembly #OdishaPolitics pic.twitter.com/i0aMgdIMn1
— School of Politics (@_PoliticsSchool) June 1, 2024
2019ರ ಚಿತ್ರಣ
2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜು ಜನತಾ ದಳಕ್ಕೆ 117, ಬಿಜೆಪಿಗೆ 23 ಮತ್ತು ಕಾಂಗ್ರೆಸ್‌ಗೆ 9 ಸ್ಥಾನ ಸಿಕ್ಕಿತ್ತು. 2000ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರು ಸತತ ಐದನೇ ಅವಧಿಗೆ ಮರು ಆಯ್ಕೆಯಾಗಿದ್ದರು. 77 ವರ್ಷದ ಪಟ್ನಾಯಕ್ ಅವರು ಈ ಬಾರಿ ಬಿಜೆಪಿಯಿಂದ ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಬಿಜೆಡಿಯ ಮಾಜಿ ಮಿತ್ರ ಪಕ್ಷವಾದ ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದೆ. ಬಿಜೆಪಿಯು 2000 ಮತ್ತು 2009ರ ನಡುವೆ ಬಿಜೆಡಿಯೊಂದಿಗೆ ಅಧಿಕಾರವನ್ನು ಹಂಚಿಕೊಂಡಿತ್ತು. ಆ ಅವಧಿಯಲ್ಲಿ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿದ್ದವು. 2009ರ ಚುನಾವಣೆಗೂ ಮೊದಲು ಮೈತ್ರಿ ಮುರಿದು ಬಿದ್ದು, ಬಿಜೆಪಿ ರಾಜ್ಯದಲ್ಲಿ ಮೂರನೇ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಯಿತು.
ನವೀನ್ ಪಟ್ನಾಯಕ್ ಅವರ ಉತ್ತರಾಧಿಕಾರಿಯಾಗಿ ವಿ.ಕೆ.ಪಾಂಡಿಯನ್ ಆಯ್ಕೆಯಾಗಬಹುದು ಎಂಬ ಮಾತು ಸದ್ಯ ಕೇಳಿ ಬರುತ್ತಿವೆ. ಒಂದು ವೇಳೆ ಬಿಜೆಡಿ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ ನವೀನ್ ಪಟ್ನಾಯಕ್ ಮುಖ್ಯಮಂತ್ರಿ ಸ್ಥಾನವನ್ನು ಪಾಂಡಿಯನ್‌ಗೆ ಬಿಟ್ಟು ಕೊಡುತ್ತಾರಾ ಎಂಬ ಚರ್ಚೆ ಕೂಡ ಜೋರಾಗಿದೆ.
ಒಡಿಶಾದಲ್ಲಿ ಈ ಬಾರಿ ಚುನಾವಣಾ ಫಲಿತಾಂಶವು ಬಹುತೇಕ 2019ರ ರೀತಿಯಲ್ಲೇ ಇರಲಿದೆ ಎಂದೂ ಅಂದಾಜಿಸಲಾಗುತ್ತಿದೆ. ಜತೆಗೆ ಬಿಜೆಪಿ ಮತಗಳಿಕೆಯನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ವಿಧಾನಸಭಾ ಸ್ಥಾನಗಳನ್ನು ಹೆಚ್ಚಿಸಬಹುದು ಎಂದೂ ವಿಶ್ಲೇಷಕರು ಹೇಳುತ್ತಿದ್ದಾರೆ.
ಒಡಿಶಾ ವಿಧಾನಸಭಾ ಚುನಾವಣೆಯನ್ನು ನಾಲ್ಕು ಹಂತಗಳಲ್ಲಿ ನಡೆಸಲಾಗಿತ್ತು. ಲೋಕಸಭಾ ಚುನಾವಣೆಯ ಫಲಿತಾಂಶದ ಜತೆಗೆ ಒಡಿಶಾ ವಿಧಾನಸಭಾ ಚುನಾವಣೆಯ ರಿಸಲ್ಟ್ ಹೊರ ಬೀಳಲಿದೆ. ಮೇ 13ರಿಂದ ಜೂನ್ 1ರ ವರೆಗೆ ನಾಲ್ಕು ಹಂತಗಳಲ್ಲಿ ನಡೆದ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ಒಡಿಶಾದ ಲೋಕಸಭಾ ಸೀಟುಗಳ ಪೈಕಿ ಬಿಜೆಪಿ ಬಹುತೇಕ ಕಡೆ ಜಯ ದಾಖಲಿಸಲಿದೆ ಎಂದು ಎಕ್ಸಿಟ್ ಪೋಲ್ ತಿಳಿಸಿದೆ. ಎನ್‌ಡಿಎ 15ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಊಹಿಸಲಾಗಿದೆ. ಇಲ್ಲಿ ಒಟ್ಟು 21 ಲೋಕಸಭಾ ಕ್ಷೇತ್ರಗಳಿವೆ.
ಇದನ್ನೂ ಓದಿ: Assembly Election Results 2024: ಸಿಕ್ಕಿಂ ಮತ್ತೆ ಎಸ್‌ಕೆಎಂ ತೆಕ್ಕೆಗೆ; 32 ಸ್ಥಾನಗಳ ಪೈಕಿ 31 ಕಡೆ ಗೆಲುವು