Site icon Vistara News

Odisha Assembly Result 2024: ಬಿಜೆಡಿ ಭದ್ರ ಕೋಟೆಗೆ ಬಿಜೆಪಿ ಗ್ರ್ಯಾಂಡ್‌ ಎಂಟ್ರಿ! ಹಳೇ ದೋಸ್ತಿಗೆ ಸಕತ್‌ ಠಕ್ಕರ್‌ ಕೊಟ್ಟ ಕೇಸರಿ ಬಣ

Odisha Assembly Result 2024

Odisha Assembly Result 2024

ಪಾಟ್ನಾ: ಒಡಿಶಾ(Odisha)ದಲ್ಲಿ ಬಿಜೆಪಿ ತನ್ನ ಹಳೆದ ದೋಸ್ತಿ ಬಿಜೆಡಿಗೆ ಭರ್ಜರಿ ಗುದ್ದು ನೀಡಿದೆ. ವಿಧಾನಸಭಾ ಚುನಾವಣಾ ಫಲಿತಾಂಶ(Odisha Assembly Result 2024)ಬಹುತೇಕ ಹೊರ ಬಿದ್ದಿದ್ದು, ಒಟ್ಟು 147 ಸ್ಥಾನಗಳಲ್ಲಿ 13 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇನ್ನು 67 ಕ್ಷೇತ್ರಗಳಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ(BJP) ಸ್ಪಷ್ಟ ಬಹುಮತ ಪಡೆಯುವ ಮೂಲಕ ಸರ್ಕಾರ ರಚಿಸುವುದು ಖಚಿತವಾಗಿದೆ. ಇನ್ನು 42ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಬಿಜೆಡಿ ಕೇವಲ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದಂತೆ ಕಾಂಗ್ರೆಸ್‌ 13 ಕ್ಷೇತ್ರಗಳಲ್ಲಿ ಗೆದ್ದಿದೆ.

ಇನ್ನು ಒಡಿಶಾದಲ್ಲಿ ಈ ಬಾರಿ ಚುನಾವಣಾ ಫಲಿತಾಂಶವು ಬಹುತೇಕ 2019ರ ರೀತಿಯಲ್ಲೇ ಇರಲಿದೆ ಎಂದೂ ಅಂದಾಜಿಸಲಾಗಿತ್ತು. ಎಕ್ಸಿಟ್‌ ಪೋಲ್‌ ರಿಸಲ್ಟ್‌ ಪ್ರಕಾರ ಬಿಜೆಡಿ ಈ ಬಾರಿ 62-80 ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್‌ 5 ರಿಂದ 8 ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲಿದೆ. ಇನ್ನು ಲೋಕಸಭಾ ಎಲೆಕ್ಷನ್‌ ರಿಸಲ್ಟ್‌ಗೆ ಬಂದರೆ ಬಿಜೆಪಿ ಒಡಿಶಾದಲ್ಲಿ 18-20 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಬಿಜೆಡಿ ಕೇವಲ 0-2 ಸ್ಥಾನ ಪಡೆದುಕೊಳ್ಳಲಿದೆ. ಇಲ್ಲಿ ಕಾಂಗ್ರೆಸ್‌ 0-1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ ಎಂದು ಅಂದಾಜಿಸಿತ್ತು ಇಂದಿನ ಈ ಫಲಿತಾಂಶ ಎಲ್ಲಾ ಎಕ್ಸಿಟ್‌ ಪೋಲ್‌ ಫಲಿತಾಂಶವನ್ನು ತಲೆಕೆಳಗಾಗಿಸಿವೆ.

2019ರ ಚಿತ್ರಣ

2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜು ಜನತಾ ದಳಕ್ಕೆ 117, ಬಿಜೆಪಿಗೆ 23 ಮತ್ತು ಕಾಂಗ್ರೆಸ್‌ಗೆ 9 ಸ್ಥಾನ ಸಿಕ್ಕಿತ್ತು. 2000ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರು ಸತತ ಐದನೇ ಅವಧಿಗೆ ಮರು ಆಯ್ಕೆಯಾಗಿದ್ದರು. 77 ವರ್ಷದ ಪಟ್ನಾಯಕ್‌ ಅವರು ಈ ಬಾರಿ ಬಿಜೆಪಿಯಿಂದ ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಿಜೆಡಿಯ ಮಾಜಿ ಮಿತ್ರ ಪಕ್ಷವಾದ ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದೆ. ಬಿಜೆಪಿಯು 2000 ಮತ್ತು 2009ರ ನಡುವೆ ಬಿಜೆಡಿಯೊಂದಿಗೆ ಅಧಿಕಾರವನ್ನು ಹಂಚಿಕೊಂಡಿತ್ತು. ಆ ಅವಧಿಯಲ್ಲಿ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿದ್ದವು. 2009ರ ಚುನಾವಣೆಗೂ ಮೊದಲು ಮೈತ್ರಿ ಮುರಿದು ಬಿದ್ದು, ಬಿಜೆಪಿ ರಾಜ್ಯದಲ್ಲಿ ಮೂರನೇ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಯಿತು.

ಎರಡೂವರೆ ದಶಕಗಳ ಬಿಜೆಡಿಯ ಅಧಿಕಾರ ಅಂತ್ಯ

2000 ಮಾರ್ಚ್​5 ರಿಂದ 2024ರ ವರೆಗೆ ಸತತ 24 ವರ್ಷಗಳ ಕಾಲ ಬಿಜು ಜನತಾದಳ ಅಧಿಕಾರದಲ್ಲಿತ್ತು. ನವೀನ್​ ಪಟ್ನಾಯಕ್​ ಸತತ 5 ಬಾರಿ ಸಿಎಂ ಆಗುವ ಮೂಲಕ ದಾಖಲೆ ಬರೆದಿದ್ದರು. ಇದೀಗ 2024ಕ್ಕೆ ಅವರ ಅಧಿಕಾರ ಅಂತ್ಯವಾಗಿದೆ. 2024ರ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ ನವೀನ್ ಪಟ್ನಾಯಕ್ ನೇತೃತ್ವದಲ್ಲಿ ಸ್ಪರ್ಧಿಸಿದರೆ, ಬಿಜೆಪಿ ಯಾವುದೇ ಪ್ರಾದೇಶಿಕ ನಾಯಕರ ನೇತೃತ್ವವಿಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ನೆಚ್ಚಿಕೊಂಡು ಈ ಚುನಾವಣೆಯಲ್ಲಿ ಸ್ಪರ್ಧಿಸಿತ್ತು.

ಇತಿಹಾಸ ಬರೆದ ಬಿಜೆಪಿ

ಒಡಿಶಾದಲ್ಲಿ ಹಿಂದಿನ 16 ವಿಧಾನಸಭೆಯಲ್ಲಿ ಬಿಜೆಪಿಯಾಗಲೀ ಅಥವಾ ಜನಸಂಘವಾಗಲೀ ಒಮ್ಮೆಯೂ ಅಧಿಕಾರ ಪಡೆಯುವಲ್ಲಿ ಯಶಸ್ವಿ ಆಗಿಲ್ಲ. ಈಗ 17ನೇ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಆ ರಾಜ್ಯದಲ್ಲಿ ಕೇಸರಿ ಬಾವುಟ ಹಾರಾಡುವಂತಾಗಿದೆ. ಇನ್ನು ನವೀನ್‌ ಪಟ್ನಾಯಕ್‌ ಅವರ ತಂದೆ ಬಿಜು ಪಟ್ನಾಯಕ್‌ ಕೂಡ ಮೂರು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ನವೀನ್‌ ಪಟ್ನಾಯಕ್‌ ಕೂಡ ಬರೋಬ್ಬರಿ 24 ವರ್ಷಗಳ ಕಾಲ ಸಿಎಂ ಆಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಒಂದು ವೇಳೆ ಅವರು ಈ ಬಾರಿ ಗೆದ್ದಿದ್ದರೆ ಅವರು ದೇಶದಲ್ಲೇ ಅತೀ ಸುದೀರ್ಘವಾಗಿ ಸಿಎಂ ಆಗಿ ಆಡಳಿತ ನಡೆಸಿದ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು.

ಇದನ್ನೂ ಓದಿ:Election results 2024: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಢವಢವ; ಮತ ಎಣಿಕೆಯಲ್ಲಿ ಪೈಪೋಟಿ ಒಡ್ಡಿದ ಇಂಡಿಯಾ ಬ್ಲಾಕ್

Exit mobile version