ಭುವನೇಶ್ವರ: ಲೋಕಸಭೆ ಚುನಾವಣೆ(Lok Sabha Election 2024)ಯಷ್ಟೇ ಈ ಬಾರಿ ಒಡಿಶಾ ವಿಧಾನಸಭೆ(Odisha Assembly Result 2024) ಚುನಾವಣೆಯೂ ದೇಶದ ಗಮನ ಸೆಳೆದಿತ್ತು. ನಿನ್ನೆ ಇಲ್ಲಿಯ ಫಲಿತಾಂಶ ಹೊರ ಬಿದ್ದಿದ್ದು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ 24 ವರ್ಷಗಳ ಸುದೀರ್ಘ ಆಡಳಿತ ಕೊನೆಗೊಂಡಿದ್ದು, ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಹೀಗಾಗಿ ಇಂದು ನವೀನ್ ಪಟ್ನಾಯಕ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಡಿ ಪಕ್ಷ ಮುಖ್ಯಸ್ಥರೂ ಆಗಿರುವ ನವೀನ್ ಪಟ್ನಾಯಕ್ ಇಂದು ಬೆಳಗ್ಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಘುಬರ್ ದಾಸ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇನ್ನು ಭಾರೀ ಬಹುಮತ ಪಡೆದಿರುವ ಬಿಜೆಪಿ ಈ ಬಾರಿ ಸರ್ಕಾರ ರಚಿಸಲಿದ್ದು, ಇದುವರೆಗೆ ಮುಖ್ಯಮಂತ್ರಿ ಯಾರೆಂಬುದು ಘೋಷಣೆ ಆಗಿಲ್ಲ. ಒಡಿಶಾದಲ್ಲಿ ಈ ಬಾರಿ ಬಿಜೆಪಿ ತನ್ನ ಹಳೆದ ದೋಸ್ತಿ ಬಿಜೆಡಿಗೆ ಭರ್ಜರಿ ಗುದ್ದು ನೀಡಿದ್ದು, ಒಟ್ಟು 147 ಸ್ಥಾನಗಳಲ್ಲಿ 78 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಡಿ ಕೇವಲ 51 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದಂತೆ ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಗೆದ್ದಿದೆ.
ಇನ್ನು ಒಡಿಶಾದಲ್ಲಿ ಈ ಬಾರಿ ಚುನಾವಣಾ ಫಲಿತಾಂಶವು ಬಹುತೇಕ 2019ರ ರೀತಿಯಲ್ಲೇ ಇರಲಿದೆ ಎಂದೂ ಅಂದಾಜಿಸಲಾಗಿತ್ತು. ಎಕ್ಸಿಟ್ ಪೋಲ್ ರಿಸಲ್ಟ್ ಪ್ರಕಾರ ಬಿಜೆಡಿ ಈ ಬಾರಿ 62-80 ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್ 5 ರಿಂದ 8 ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲಿದೆ. ಇನ್ನು ಲೋಕಸಭಾ ಎಲೆಕ್ಷನ್ ರಿಸಲ್ಟ್‌ಗೆ ಬಂದರೆ ಬಿಜೆಪಿ ಒಡಿಶಾದಲ್ಲಿ 18-20 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಬಿಜೆಡಿ ಕೇವಲ 0-2 ಸ್ಥಾನ ಪಡೆದುಕೊಳ್ಳಲಿದೆ. ಇಲ್ಲಿ ಕಾಂಗ್ರೆಸ್ 0-1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ ಎಂದು ಅಂದಾಜಿಸಿತ್ತು ಇಂದಿನ ಈ ಫಲಿತಾಂಶ ಎಲ್ಲಾ ಎಕ್ಸಿಟ್ ಪೋಲ್ ಫಲಿತಾಂಶವನ್ನು ತಲೆಕೆಳಗಾಗಿಸಿವೆ.
2019ರ ಚಿತ್ರಣ
2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜು ಜನತಾ ದಳಕ್ಕೆ 117, ಬಿಜೆಪಿಗೆ 23 ಮತ್ತು ಕಾಂಗ್ರೆಸ್‌ಗೆ 9 ಸ್ಥಾನ ಸಿಕ್ಕಿತ್ತು. 2000ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರು ಸತತ ಐದನೇ ಅವಧಿಗೆ ಮರು ಆಯ್ಕೆಯಾಗಿದ್ದರು.
ಬಿಜೆಡಿಯ ಮಾಜಿ ಮಿತ್ರ ಪಕ್ಷವಾದ ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದೆ. ಬಿಜೆಪಿಯು 2000 ಮತ್ತು 2009ರ ನಡುವೆ ಬಿಜೆಡಿಯೊಂದಿಗೆ ಅಧಿಕಾರವನ್ನು ಹಂಚಿಕೊಂಡಿತ್ತು. ಆ ಅವಧಿಯಲ್ಲಿ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿದ್ದವು. 2009ರ ಚುನಾವಣೆಗೂ ಮೊದಲು ಮೈತ್ರಿ ಮುರಿದು ಬಿದ್ದು, ಬಿಜೆಪಿ ರಾಜ್ಯದಲ್ಲಿ ಮೂರನೇ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಯಿತು.
ಇದನ್ನೂ ಓದಿ: Election Results 2024: ಸರ್ಕಾರ ರಚನೆಯ ಕಸರತ್ತು; ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ ನಿತೀಶ್ ಕುಮಾರ್, ತೇಜಸ್ವಿ ಯಾದವ್