ಪುರಿ: ಒಡಿಶಾದ ಪುರಿಯಲ್ಲಿರುವ ಜಗನ್ನಾಥ (Puri Jgannath temple) ದೇವಸ್ಥಾನಕ್ಕೆ ಸೋಶಿಯಲ್ ಮೀಡಿಯಾ ತಾರೆ ಕಾಮಿಯಾ ಜಾನಿ (Kamiya Jani) ಭೇಟಿ ಕೊಟ್ಟಿರುವುದನ್ನು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಖಂಡಿಸಿದ್ದು, ʼಮಂದಿರವನ್ನು ಅಪವಿತ್ರಗೊಳಿಸಿರುವʼ ಆಕೆಯ ಬಂಧನಕ್ಕೆ ಆಗ್ರಹಿಸಿವೆ.
ಕಾಮಿಯಾ ಜಾನಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿದ್ದು, ʼಕರ್ಲಿ ಟೇಲ್ಸ್ʼ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಅವರು ಪುರಿ ಜಗನ್ನಾಥ ದೇವಸ್ಥಾನದ ಅಭಿವೃದ್ದಿಗಾಗಿ ಅಲ್ಲಿನ ಸರ್ಕಾರ ರೂಪಿಸಿರುವ ‘ಪರಿಕ್ರಮ’ ಎಂಬ ಯೋಜನೆಯಲ್ಲಿ ಪಾಲ್ಗೊಂಡಿದ್ದು, ದೇವಾಲಯಕ್ಕೆ ಭೇಟಿ ನೀಡಿ ಕಾರ್ಯಕ್ರಮ ಪ್ರಸಾರ ಮಾಡಿದ್ದಾರೆ. ಕಾರ್ಯಕ್ರಮದ ಮುಖ್ಯಸ್ಥರಾಗಿರುವ ಮಾಜಿ ಐಎಎಸ್ ಅಧಿಕಾರಿ, ಬಿಜೆಡಿ ನಾಯಕ ವಿ.ಕೆ ಪಾಂಡಿಯನ್ ಅವರ ಜೊತೆ ಪರಿಕ್ರಮ ಯೋಜನೆಯ ಕುರಿತು ಕಾಮಿಯಾ ಜಾನಿ ವಿಡಿಯೋ ಮಾಡಿದ್ದಾರೆ.
ಕಾಮಿಯಾ ಜಾನಿ ಈ ಹಿಂದೆ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಗೋಮಾಂಸ ಭಕ್ಷಣೆಯ ಕುರಿತು ವಿಡಿಯೋ ಮಾಡಿದ್ದರು. “ಗೋಮಾಂಸ ಪ್ರಚಾರಕಿ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ಕಾಮಿಯಾ ಜಾನಿ ಮತ್ತು ವಿ.ಕೆ ಪಾಂಡಿಯನ್ ವಿರುದ್ಧ ಕ್ರಮ ಕೈಗೊಳ್ಳುವಂತೆ” ಬಿಜೆಪಿ ಆಗ್ರಹಿಸಿದೆ.
“ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪರಂಪರೆಯಿಂದ ಸಮೃದ್ಧವಾಗಿರುವ ಪುರಿ ಮಂದಿರದ ಪಾವಿತ್ರ್ಯತೆಯನ್ನು ವಿಕೆ ಪಾಂಡಿಯನ್ ಅವಮಾನಿಸಿದ್ದಾರೆ. ಅವರು ಜಗನ್ನಾಥ ಮಂದಿರದ ಪೂಜ್ಯ ಆವರಣಕ್ಕೆ ಗೋಮಾಂಸ ಪ್ರಚಾರಕಿಯ ಪ್ರವೇಶಕ್ಕೆ ಅನುಮತಿಸಿದ್ದಾರೆ. ಇದರ ಹೊಣೆಗಾರರು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಒಡಿಶಾ ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಕಾಮಿಯಾ ಜಾನಿಯವರ ಯೂಟ್ಯೂಬ್ ಚಾನೆಲ್ 2.77 ಮಿಲಿಯನ್ ಚಂದಾರರನ್ನು ಹೊಂದಿದ್ದು, ರಾಜಕೀಯ ನಾಯಕರು ಮತ್ತು ಇತರ ಖ್ಯಾತನಾಮರ ಜೊತೆ ವಿಡಿಯೋ ಮಾಡಿದ್ದಾರೆ.
ಇದನ್ನೂ ಓದಿ: Dunki Twitter Review: ಕಾಮಿಡಿ ದೃಶ್ಯಗಳು ತಲೆನೋವಾಗಿತ್ತು, ಹಳೇ ಸೀರಿಯಲ್ ಥರ ಅಂದ್ರು ನೆಟ್ಟಿಗರು!