Site icon Vistara News

Odisha Train Accident : ಒಡಿಶಾ ರೈಲು ದುರಂತ ಸಂತ್ರಸ್ತರಿಗೆ ಕ್ಲೇಮ್‌ ಸೆಟ್ಲ್‌ಮೆಂಟ್‌ ಸರಳಗೊಳಿಸಿದ ಎಲ್‌ಐಸಿ

LIC OFFICE

#image_title

ನವ ದೆಹಲಿ: ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ಸಂಭವಿಸಿದ ಕೋರಮಂಡಲ ಎಕ್ಸ್‌ಪ್ರೆಸ್ ಸೇರಿದಂತೆ ಮೂರು ರೈಲುಗಳ ಅಪಘಾತದ ದುರಂತದಲ್ಲಿ ಸಂತ್ರಸ್ತರಾದವರಿಗೆ ವಿಮೆ ಪರಿಹಾರದ ಇತ್ಯರ್ಥ ಪ್ರಕ್ರಿಯೆಯನ್ನು ಎಲ್‌ಐಸಿ (LIC) ಸರಳಗೊಳಿಸಿದೆ. (Coromandel express accident) ಈ ಸಂಬಂಧ ಎಲ್‌ಐಸಿ ಚೇರ್ಮನ್‌ ಸಿದ್ಧಾರ್ಥ ಮೊಹಾಂತಿ ಹಲವಾರು ಕ್ರಮಗಳನ್ನು ಸಡಿಲಗೊಳಿಸಿರುವುದನ್ನು ಘೋಷಿಸಿದ್ದಾರೆ.

ವಿಪತ್ತುಗಳ ಸಂದರ್ಭ ಎಲ್‌ಐಸಿ ಈ ಹಿಂದೆಯೂ ತನ್ನ ಪಾಲಿಸಿಗಳ ಕ್ಲೇಮ್‌ ಸೆಟ್ಲ್‌ಮೆಂಟ್‌ ಹಾಗೂ ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆಯ ಕ್ಲೇಮ್‌ಗಳನ್ನು ಇತ್ಯರ್ಥ ಪ್ರಕ್ರಿಯೆಗಳನ್ನು ಸಡಿಲಗೊಳಿಸಿತ್ತು. ಇದೀಗ ಒಡಿಶಾ ರೈಲು ದುರಂತಕ್ಕೂ ಸ್ಪಂದಿಸಿದೆ. ರೈಲ್ವೆ ಇಲಾಖೆ, ಪೊಲೀಸ್‌ ಇಲಾಖೆ ಅಥವಾ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರ ಪ್ರಕಟಿಸಿದ ಸಾವು-ನೋವಿನ ಪ್ರಕಟಣೆಯನ್ನು ಸಾವಿನ ದೃಢೀಕರಣ ಪತ್ರ ಎಂದು ಪರಿಗಣಿಸಿ ಕ್ಲೇಮ್‌ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದೆ.

ಎಲ್‌ಐಸಿಯಿಂದ ಹೆಲ್ಪ್‌ ಡೆಸ್ಕ್:‌ ಎಲ್‌ಐಸಿ ರೈಲು ದುರಂತದಲ್ಲಿ ಸಂತ್ರಸ್ತರಾದವರಿಗೆ ನೆರವಾಗಲು ಸಹಾಯವಾಣಿ ಆರಂಭಿಸಿದೆ. 022-68276827 ಸಂಖ್ಯೆಗೆ ಕರೆ ಮಾಡಬಹುದು. ಕ್ಲೇಮ್‌ಗೆ ಸಂಬಂಧಿಸಿ ಪ್ರಶ್ನೆಗಳಿಗೆ ಉತ್ತರ ಪಡೆಯಬಹುದು ಎಂದು ಎಲ್‌ಐಸಿ ತಿಳಿಸಿದೆ. ಮೊಹಾಂತಿ ಅವರು ಒಡಿಶಾ ರೈಲು ದುರಂತದಲ್ಲಿ ಮಡಿದವರಿಗೆ ಕಂಬನಿ ಮಿಡಿದಿದ್ದಾರೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಎಲ್‌ಐಸಿ ತನ್ನಿಂದಾಗುವ ಎಲ್ಲ ಸಹಕಾರವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.

ಒಡಿಶಾದ ಬಾಲಾಸೋರ್​​ನಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ (Odisha Train Accident) ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆಯಾಗಿದೆ. 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೂರು ರೈಲುಗಳ ಮಧ್ಯೆಯ ಡಿಕ್ಕಿಯಿಂದ ಇಷ್ಟು ದೊಡ್ಡಮಟ್ಟದ ಅವಘಡ ಆಗಿದ್ದು, ಇತ್ತೀಚಿನ ವರ್ಷಗಳಲ್ಲೇ ಭೀಕರ ರೈಲು ಅಪಘಾತವಾಗಿದೆ. ಬೆಂಗಳೂರು-ಹೌರಾ ಸೂಪರ್​​ಫಾಸ್ಟ್​ ಎಕ್ಸ್​ಪ್ರೆಸ್​, ಶಾಲಿಮಾರ್​-ಚೆನ್ನೈ ಸೆಂಟ್ರಲ್​ ಕೋರಮಂಡಲ ಎಕ್ಸ್​​ಪ್ರೆಸ್​ ಮತ್ತು ಗೂಡ್ಸ್​ ರೈಲಿನ ಮಧ್ಯೆ ಅಪಘಾತವಾಗಿತ್ತು.

ಶಾಲಿಮಾರ್​-ಚೆನ್ನೈ ಸೆಂಟ್ರಲ್​ ಕೋರಮಂಡಲ ಎಕ್ಸ್​​ಪ್ರೆಸ್​​ ರೈಲು ಮತ್ತು ಒಂದು ಗೂಡ್ಸ್​ ರೈಲಿನ ಮಧ್ಯೆ ಬಾಲಾಸೋರ್​​ ಬಳಿ ಮೊದಲು ಡಿಕ್ಕಿಯಾಯಿತು. ಈ ಡಿಕ್ಕಿಯ ರಭಸಕ್ಕೆ ಕೋರಮಂಡಲ ರೈಲಿನ 10-12 ಬೋಗಿಗಳು ಕಳಚಿ ಅಕ್ಕ-ಪಕ್ಕದ ಹಳಿಗಳ ಮೇಲೆ ಉರುಳಿಬಿದ್ದವು. ಆದರೆ ಈ ಅಪಘಾತದ ಬಗ್ಗೆ ಗೊತ್ತಿಲ್ಲದೆ, ಪಕ್ಕದ ಹಳಿಯ ಮೇಲೆ ಬಂದ ಬೆಂಗಳೂರು-ಹೌರಾ ಸೂಪರ್​ಫಾಸ್ಟ್​ ರೈಲಿಗೂ ಅಪಾಯ ಕಾದಿತ್ತು. ಅದಾಗಲೇ ಹಳಿಯ ಮೇಲೆ ಬಿದ್ದಿದ್ದ ಕೋರಮಂಡಲ​ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದು, ಈ ರೈಲು ಕೂಡ ಅಪಘಾತಕ್ಕೀಡಾಗಿತ್ತು.

ಇದನ್ನೂ ಓದಿ: ಇದೆಂಥಾ ದುರ್ವಿಧಿ; ಒಡಿಶಾ ರೈಲು ದುರಂತದಲ್ಲಿ ಗಾಯಗೊಂಡವರನ್ನು ಸಾಗಿಸುತ್ತಿದ್ದ ಬಸ್‌ ಅಪಘಾತ

Exit mobile version