Site icon Vistara News

Viral News: ಮಹಿಳೆಗೆ ನಿಗದಿತ ಸಮಯಕ್ಕೆ ಸ್ಕೂಟಿ ಡೆಲಿವರಿ ಮಾಡದ ಓಲಾಗೆ ಬಿತ್ತು 2.05 ಲಕ್ಷ ರೂ. ದಂಡ!

Ola Fined Rs 205 lakh

Ola Fined Rs 2.05 Lakh For Failing To Deliver E-Scooter To Customer

ಚೆನ್ನೈ: ಕೆಲವೊಂದು ಕಂಪನಿಗಳ ಕಸ್ಟಮರ್‌ ಕೇರ್‌ ಸಿಬ್ಬಂದಿ ಇರುವುದೇ ಹಾಗೆ. ಬಹುರಾಷ್ಟ್ರೀಯ ಕಂಪನಿಗಳಾಗಲಿ, ದೇಶೀಯ ಕಂಪನಿಗಳಾಗಲಿ, ಅವುಗಳ ಕಸ್ಟಮರ್‌ ಕೇರ್‌ ಸಿಬ್ಬಂದಿಯು ಗ್ರಾಹಕರ ಜತೆ ಸರಿಯಾಗಿ ವರ್ತಿಸುವುದಿಲ್ಲ. ಅವರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಚೆನ್ನೈನಲ್ಲಿ ಮಹಿಳೆಯೊಬ್ಬರಿಗೆ ನಿಗದಿತ ಸಮಯಕ್ಕೆ ಇ-ಸ್ಕೂಟರ್‌ ಡೆಲಿವರಿ ಮಾಡದ, ಸರಿಯಾಗಿ ಸ್ಪಂದಿಸದ, ಸರಿಯಾದ ನಿಯಮ ಪಾಲಿಸದ ಓಲಾ ಮೊಬಿಲಿಟಿ ಕಂಪನಿಗೆ 2.05 ಲಕ್ಷ ರೂಪಾಯಿ ದಂಡ (Viral News) ವಿಧಿಸಲಾಗಿದೆ.

ಹೌದು, ಕೆ ನಿಶಾ ಅವರು ಓಲಾ ಆಫರ್‌ ನೀಡಿದಾಗ ಇ-ಸ್ಕೂಟರ್‌ ಒಂದನ್ನು ಬುಕ್‌ ಮಾಡಿದ್ದರು. ಎಸ್‌ 1 ಮಾಡೆಲ್‌ ಸ್ಕೂಟರ್‌ ಬುಕ್‌ ಮಾಡಿದ್ದ ಅವರು 1.10 ಲಕ್ಷ ರೂಪಾಯಿ ಮೌಲ್ಯದ ಸ್ಕೂಟರ್‌ಗೆ 20 ಸಾವಿರ ರೂಪಾಯಿ ಅಡ್ವಾನ್ಸ್‌ ಕೂಡ ಪಾವತಿಸಿದ್ದರು. ಆದರೆ, ಸರಿಯಾದ ಸಮಯಕ್ಕೆ ಕಂಪನಿಯು ಸ್ಕೂಟರ್‌ ಡೆಲಿವರಿ ಮಾಡದ ಕಾರಣ, ಸಮಸ್ಯೆಗೆ ಸರಿಯಾಗಿ ಸ್ಪಂದಿಸದ ಕಾರಣ ಅವರು ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗಕ್ಕೆ (District Consumer Disputes Redressal Commission) ದೂರು ಸಲ್ಲಿಸಿದ್ದರು. ಈಗ ಆಯೋಗವು ದಂಡ ವಿಧಿಸಿದೆ.

ನಿಶಾ ಅವರು ಮೊದಲು ಸ್ಕೂಟರ್‌ ಬುಕ್‌ ಮಾಡಿ, ಅದಕ್ಕಾಗಿ ಅಡ್ವಾನ್ಸ್‌ ನೀಡಿದ್ದರು. ಫುಲ್‌ ಪೇಮೆಂಟ್‌ ಮಾಡಲು ಇಂತಹ ದಿನಾಂಕ ನಿಗದಿ ಮಾಡಲಾಗುತ್ತದೆ, ಅದಾದ ಬಳಿಕ ಡೆಲಿವರಿ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದು ಕಂಪನಿ ತಿಳಿಸಿತ್ತು. ಆದರೆ, ಯುಟರ್ನ್‌ ಹೊಡೆದ ಕಂಪನಿಯು ಎಲ್ಲ ಹಣ ನೀಡುವಂತೆ ಸೂಚಿಸಿತ್ತು. ಆದರೂ, ನಿಶಾ ಅವರು 2022ರ ಏಪ್ರಿಲ್‌ನಲ್ಲಿ ತಮ್ಮ ಉಳಿತಾಯ ಖಾತೆಯ ಹಣ ತೆಗೆದು ಫುಲ್‌ ಪೇಮೆಂಟ್‌ ಮಾಡಿದ್ದರು. ಇಷ್ಟಾದರೂ ಅವರಿಗೆ ನಿಗದಿತ ಸಮಯಕ್ಕೆ ಇ-ಸ್ಕೂಟರ್‌ ಡೆಲಿವರಿ ಆಗಿರಲಿಲ್ಲ.

ಇದನ್ನೂ ಓದಿ: Ola Electric: 2 ಕೋಟಿ ಲೀಟರ್ ಪೆಟ್ರೋಲ್ ಉಳಿತಾಯ ಮಾಡಿದ ಓಲಾ! ಹೇಗೆ ತಿಳಿದುಕೊಳ್ಳಬೇಕಾ?

ಫುಲ್‌ ಪೇಮೆಂಟ್‌ ಮಾಡಿದ ಬಳಿಕ ಕಂಪನಿಯು ಮತ್ತೊಂದು ವರಸೆ ಬದಲಾಯಿಸಿತು. ಎಸ್‌ 1 ಮಾಡೆಲ್‌ ಕಂಪನಿಯ ಉತ್ಪಾದನೆಯನ್ನೇ ನಿಲ್ಲಿಸಲಾಗಿದೆ. ಇದರ ಅಪ್‌ಡೇಟೆಡ್‌ ವರ್ಷನ್‌ ಬೇಕು ಎಂದರೆ ಹೆಚ್ಚುವರಿಯಾಗಿ 40 ಸಾವಿರ ರೂಪಾಯಿ ಪಾವತಿಸಬೇಕು ಎಂದು ಸೂಚಿಸಿತು. ಇದರಿಂದ ಗೊಂದಲಕ್ಕೀಡಾದ ನಿಶಾ ಅವರು ಓಲಾ ಕಸ್ಟಮರ್‌ ಕೇರ್‌ಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸಿಲ್ಲ. ಆರ್ಡರ್‌ ಕ್ಯಾನ್ಸಲ್‌ ಮಾಡಲು ಕೂಡ ಆಗಲಿಲ್ಲ. ಹಾಗಾಗಿ, ಅವರು ಆಯೋಗದ ಮೊರೆ ಹೋಗಿದ್ದರು. ಈಗ ಆಯೋಗವು, ಎರಡು ತಿಂಗಳಲ್ಲಿ ನಿಶಾ ಅವರಿಗೆ ಎಸ್‌ 1 ಪ್ರೊ ಸ್ಕೂಟರ್‌ ನೀಡಬೇಕು ಇಲ್ಲವೇ ಶೇ.9ರಷ್ಟು ಬಡ್ಡಿಯ ಹಣದೊಂದಿಗೆ ಅವರ ಪೂರ್ತಿ ಹಣ ಪಾವತಿಸಬೇಕು ಎಂದು ಸೂಚಿಸಿದೆ.

Exit mobile version