ನವದೆಹಲಿ: ಕ್ಯಾಬ್ ಸೇವೆಗಳಲ್ಲಿ ಮುಂಚೂಣಿ ಸಂಸ್ಥೆಯಾಗಿರುವ ಓಲಾ ಕ್ಯಾಬ್ಸ್ (Ola Cabs) ಬ್ರಿಟನ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಭಾರತದ ವ್ಯವಹಾರದ ಮೇಲೆ ಗಮನ ಹರಿಸುವುದನ್ನು ಮುಂದುವರಿಸುವ ಉದ್ದೇಶದಿಂದ ಒಲಾದ ಮಾತೃ ಸಂಸ್ಥೆ ಎಎನ್ಐ ಟೆಕ್ನಾಲಜೀಸ್ ಮಂಗಳವಾರ ತಿಳಿಸಿದೆ. ಸಾಫ್ಟ್ ಬ್ಯಾಂಕ್ನಿಂದ ಫಂಡಿಂಗ್ ಹೊಂದಿರುವ ಈ ಕಂಪನಿಯು ಭಾರತದಲ್ಲಿ ತನ್ನ ಸೇವೆಗಳ ವಿಸ್ತರಣೆಯ ಅವಕಾಶವನ್ನು ಎದುರು ನೋಡುತ್ತಿದೆ .
ನಮ್ಮ ರೈಡ್-ಹೆಯ್ಲಿಂಗ್ ವ್ಯವಹಾರವು ವೇಗವಾಗಿ ಬೆಳೆಯುತ್ತಿದೆ. ಮತ್ತು ನಾವು ಭಾರತದಲ್ಲಿ ಲಾಭದಾಯಕ ಮತ್ತು ಈ ವಿಭಾಗದಲ್ಲಿ ಉತ್ತಮ ಸಂಸ್ಥೆಯಾಗಿ ಬೆಳೆದಿದ್ದೇವೆ. ಸಂಚಾರ ಕ್ಷೇತ್ರದ ಭವಿಷ್ಯವು ಎಲೆಕ್ಟ್ರಿಕ್ ವಾಹನಗಳ ಕಡೆ ವಾಲಿದೆ. ವೈಯಕ್ತಿಕ ಮತ್ತು ಸವಾರಿ-ಹೆಯ್ಲಿಂಗ್ ವ್ಯವಹಾರವನ್ನು ವಿಸ್ತರಿಸಲು ಭಾರತದಲ್ಲಿ ಅಪಾರ ಅವಕಾಶವಿದೆ ಎಂದು ಕಂಪನಿ ಹೇಳಿದೆ. ಮೂಲಗಳ ಪ್ರಕಾರ ಕಂಪನಿಯ ಭಾರತದ ಎಲೆಕ್ಟ್ರಿಕ್ ಕ್ಯಾಬ್ ವಹಿವಾಟಿನಲ್ಲಿ ಹೆಚ್ಚಿನ ಹೂಡಿಕೆ ಮಾಡಲಿದೆ.
ಭಾರತದಲ್ಲಿ ಉದ್ಯಮ ವಿಸ್ತರಣೆಯ ಸ್ಪಷ್ಟ ಗುರಿಯೊಂದಿಗೆ ನಾವು ನಮ್ಮ ಆದ್ಯತೆಗಳನ್ನು ಮರು ಮೌಲ್ಯಮಾಪನ ಮಾಡಿದ್ದೇವೆ. ಬ್ರಿಟನ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ನಮ್ಮ ಸಾಗರೋತ್ತರ ವ್ಯವಹಾರವನ್ನು ಅದರ ಪ್ರಸ್ತುತ ರೂಪದಲ್ಲಿ ಮುಚ್ಚಲು ನಿರ್ಧರಿಸಿದ್ದೇವೆ ಎಂದು ಓಲಾ ಮೊಬಿಲಿಟಿ ಹೇಳಿದೆ.
ಇದನ್ನೂ ಓದಿ: Paytm Payment Service : ಪೇಟಿಎಂ ಬ್ಯಾಂಕಿಂಗ್ ವಿಭಾಗದ ಸಿಇಒ ದಿಢೀರ್ ರಾಜೀನಾಮೆ
ಓಲಾ ಕಂಪನಿಯು 2018 ರಲ್ಲಿ ಹಂತ ಹಂತವಾಗಿ ಈ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತ್ತು. ಅಂತೆಯೇ ಎಎನ್ಐ ಟೆಕ್ನಾಲಜೀಸ್ 2023 ರ ಆರ್ಥಿಕ ವರ್ಷದಲ್ಲಿ ತನ್ನ ಒಟ್ಟು ನಷ್ಟವನ್ನು 772.25 ಕೋಟಿ ರೂ.ಗೆ ಇಳಿಸಿದೆ. ಕಂಪನಿಯು 2022 ರ ಹಣಕಾಸು ವರ್ಷದಲ್ಲಿ (ಎಫ್ವೈ) 1,522.33 ಕೋಟಿ ರೂ.ಗಳ ಏಕೀಕೃತ ನಷ್ಟವನ್ನು ದಾಖಲಿಸಿತ್ತು .
ಕಾರ್ಯಾಚರಣೆಗಳಿಂದ ಸಂಗ್ರವಾದ ಆದಾಯವು 2023ರ ಹಣಕಾಸು ವರ್ಷದಲ್ಲಿ ಸುಮಾರು ಶೇಕಡಾ 48 ರಷ್ಟು ಏರಿಕೆಯಾಗಿ 2,481.35 ಕೋಟಿ ರೂ.ಗೆ ತಲುಪಿದೆ ಎಂದು ಕಂಪನಿ ಹೇಳಿದೆ. ರೈಡ್-ಹೆಯ್ಲಿಂಗ್ ವ್ಯವಹಾರವನ್ನು ಒಳಗೊಂಡಿರುವ ಎಎನ್ಐ ಟೆಕ್ನಾಲಜೀಸ್, 2022ರ ಹಣಕಾಸು ವರ್ಷದಲ್ಲಿ 3,082.42 ಕೋಟಿ ರೂ.ಗಳ ನಷ್ಟಕ್ಕೆ ಹೋಲಿಸಿದರೆ 2023 ರ ಹಣಕಾಸು ವರ್ಷದಲ್ಲಿ 1,082.56 ಕೋಟಿ ರೂ.ಗೆ ನಷ್ಟವನ್ನು ದಾಖಲಿಸಿದೆ.
ನಾವು ವಹಿವಾಟಿನ ವಿಚಾರದಲ್ಲಿ ಸಾಕಷ್ಟು ಉತ್ಸುಕರಾಗಿದ್ದೇವೆ. 1 ಬಿಲಿಯನ್ ಭಾರತೀಯರಿಗೆ ಸೇವೆ ಸಲ್ಲಿಸುವ ನಮ್ಮ ಧ್ಯೇಯ ಹೊಂದಿದ್ದೇವೆ. ತಂತ್ರಜ್ಞಾನ- ಮೊದಲ ವ್ಯವಹಾರವಾಗಿ, ಹೊಸತನದೊಂದಿಗೆ ಮುನ್ನಡೆಸುವ ವಿಶ್ವಾಸವಿದೆ” ಎಂದು ಒಲಾ ಹೇಳಿದೆ.