ನವದೆಹಲಿ: ಚೀನಾದಲ್ಲಿ ಒಮ್ಮಿಂದೊಮ್ಮೆಗೆ ಕೋವಿಡ್ (Covid-19) ಪ್ರಕರಣಗಳು ಹೆಚ್ಚುತ್ತಿರುವುದು, ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಚೀನಾದ ಈಗಿನ ಕೋವಿಡ್ ಉಲ್ಬಣ ಸ್ಥಿತಿಗೆ ಒಮಿಕ್ರಾನ್ ಬಿಎಫ್.7 (Omicron BF.7) ವೈರಸ್ ರೂಪಾಂತರ ಕಾರಣವಾಗಿದೆ. ಕೋವಿಡ್ ಪತ್ತೆಯಾದಾಗಿನಿಂದ ಅದರ ಅನೇಕ ರೂಪಾಂತರಗಳು ಗೋಚರಿಸಿವೆ. ಈ ಪೈಕಿ ಒಮಿಕ್ರಾನ್ ಮಾತ್ರ ಕಳೆದ ಒಂದು ವರ್ಷದಿಂದಲೂ ಸ್ಟ್ರಾಂಗ್ ಆಗಿಯೇ ಇದೆ. ಈ ವೇರಿಯಂಟ್ ಈಗ ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ.
ಒಮಿಕ್ರಾನ್ ಬಿಎಫ್.7 ವೈರಸ್ ಹೆಚ್ಚು ಪ್ರಸರಣದ ಸಾಮರ್ಥ್ಯವನ್ನುಹೊಂದಿದೆ. ಜತೆಗೆ, ಅತಿ ವೇಗವಾಗಿ ಸೋಂಕು ತಗಲುವಂತೆ ಮಾಡುತ್ತದೆ. ವರದಿಗಳ ಪ್ರಕಾರ, ಈ ರೂಪಾಂತರವು ಹೆಚ್ಚಾಗಿ ಮನುಷ್ಯರ ಎದೆಯ ಮೇಲ್ಭಾಗದ ಶ್ವಾಸೇಂದ್ರಿಯ ಮೇಲೆ ಪರಿಣಾಮ ಬೀರುತ್ತದೆ. ಕೋವಿಡ್ ರೋಗ ಲಕ್ಷಣಗಳನ್ನು ಈ ವೇರಿಯಂಟ್ ಕೊಡ ಹೊಂದಿದೆ. ಅಂದರೆ, ಜ್ವರ, ಕೆಮ್ಮು, ಮೂಗು ಸೋರುವುದು ಮತ್ತು ಗಂಟಲು ಕೆರತ ಇತ್ಯಾದಿ ಲಕ್ಷಣಗಳನ್ನು ಕಾಣಬಹುದು.
ಚೀನಾದಲ್ಲಿ ಏರುತ್ತಿರುವ ಸೋಂಕಿನ ಗತಿಯನ್ನು ಪರಿಶೀಲಿಸಿದರೆ, ಮುಂದಿನ ಕೆಲವು ತಿಂಗಳಲ್ಲಿ ಸುಮಾರು 10 ಲಕ್ಷ ಜನರು ಸಾವಿಗೀಡಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಅಧ್ಯಯನದ ಪ್ರಕಾರ, 85 ಪ್ರತಿಶತ ಜನಸಂಖ್ಯೆಯು ಲಸಿಕೆಯ ನಾಲ್ಕನೇ ಡೋಸ್ ಪಡೆದುಕೊಂಡರೆ ಸೋಂಕಿನ ಹೆಚ್ಚಳವು ನಿಧಾನವಾಗಬಹುದು. ಇದರಿಂದ 3ರಿಂದ 59 ವಯಸ್ಸಿನೊಳಗಿನ ಶೇ.95ರಷ್ಟು ಜನರಿಗೆ ಈ ಕೋವಿಡ್‌ನಿಂದ ಪಾರಾಗಬಹುದು ಎಂದು ಅಂದಾಜಿಸಲಾಗಿದೆ. 18ರಿಂದ 59 ಮತ್ತು 3 ರಿಂದ 59 ವರ್ಷ ವಯಸ್ಸಿನೊಳಗಿನ ಶೇ.95ರಷ್ಟು ಮಂದಿಗೆ ಬೂಸ್ಟರ್ ನೀಡಿದರೆ, ಆಗ ಪ್ರತಿ 10 ಲಕ್ಷ ಜನರಿಗೆ ಮರಣದ ಪ್ರಮಾಣವನ್ನು 305 ಹಾಗೂ 249ಕ್ಕೆ ತಗ್ಗಿಸಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Covid-19 | ಕೋವಿಡ್ ರೂಲ್ಸ್ ಫಾಲೋ ಮಾಡಿ, ಇಲ್ಲವೇ ಯಾತ್ರೆ ರದ್ದುಗೊಳಿಸಿ: ರಾಹುಲ್‌ಗೆ ಕೇಂದ್ರ ಸಚಿವ