ಬೆಂಗಳೂರು: ಭಾರತೀಯ ಉಪಖಂಡದ ಮುಂಗಾರು ಮಾರುತಗಳು ವಿಶ್ವದಲ್ಲೇ ಅತ್ಯಂತ ಪ್ರಮುಖ ಮುಂಗಾರುಗಳಲ್ಲಿ ಒಂದಾಗಿದೆ. ಇದು ಭಾರತ ಮತ್ತು ಸುತ್ತುಮುತ್ತಲಿನ ಭೂಭಾಗವನ್ನು ಆವರಿಸಿದೆ. (Monsoon Forecast 2023) ತೇವಾಂಶ ಭರಿತ ಹವಾಮಾನದ ತಿಂಗಳುಗಳಲ್ಲಿ ಉಪಖಂಡದ ಈಶಾನ್ಯ ವಲಯದಲ್ಲಿ ಶುರುವಾಗುವ ಭಾರತೀಯ ಮಾನ್ಸೂನ್, ವರ್ಷದ ಬೇಸಿಗೆಯ ಅವಧಿಯಲ್ಲಿ ದಿಕ್ಕನ್ನು ಬದಲಿಸಿ ನೈಋತ್ಯ ವಲಯದಿಂದ ಬೀಸುತ್ತದೆ. ಹಾಗೂ ಜೂನ್ ಮತ್ತು ಜುಲೈನಲ್ಲಿ ಭಾರತದಲ್ಲಿ ಮಳೆಗಾಲ ಶುರುವಾಗುತ್ತದೆ.
ಭೂಗೋಲದಲ್ಲಿ ಭಾರತದ ಸಮೀಪವಿರುವ ಸಮಭಾಜಕ ಪ್ರದೇಶದಲ್ಲಿ ಮೇಲ್ಮೈ ಮೇಲೆ ಬಹುತೇಕ ವರ್ಷ ಪೂರ್ತಿ ಪಶ್ಚಿಮ ದಿಕ್ಕಿನಿಂದ ಗಾಳಿ ಬೀಸುತ್ತಿರುತ್ತದೆ. ಮಾರ್ಚ್ ಅಂತ್ಯದ ವೇಳೆಗೆ ಅಧಿಕ ತಾಪಮಾನದ ಸನ್ನಿವೇಶ ಸಮಭಾಜಕ ವಲಯದದಲ್ಲಿ ಸೃಷ್ಟಿಯಾಗುತ್ತದೆ. ಮತ್ತು ವಾತಾವರಣದಲ್ಲಿ ಬದಲಾವಣೆ ಸನ್ನಿಹಿತವಾಗುತ್ತದೆ. ಮೋಡಗಳು ಕವಿಯಲು ಶುರುವಾಗುತ್ತದೆ. ಈಗ ನಾವು ನೈಋತ್ಯ ಮುಂಗಾರು ಮಳೆಯನ್ನು ಭಾರತೀಯ ಹವಾಮಾನ ಇಲಾಖೆ ಹೇಗೆ ನಿರ್ಧರಿಸುತ್ತದೆ ಎಂಬುದನ್ನು ನೋಡೋಣ.
ಮುಂಗಾರು ಮಳೆಯ ನಾನಾ ವಿಧಗಳೇನು?
ಹವಾಮಾನ ಇಲಾಖೆಯ ಪ್ರಕಾರ ಮುಂಗಾರಿನಲ್ಲಿ ಹಲವು ವಿಧಗಳಿವೆ. ಅವುಗಳೆಂದರೆ ದುರ್ಬಲ ಮುಂಗಾರು, (Weak monsoon) ಸಾಮಾನ್ಯ ಮುಂಗಾರು ( Normal monsoon)̧ ಸಕ್ರಿಯ ಮುಂಗಾರು (Active monsoon) , ಚುರುಕಿನ ಮುಂಗಾರು ( Vigorous monsoon) ಸುಪ್ತ ಮುಂಗಾರು (Subdued Monsoon) ಎಂಬ ವಿಧಗಳನ್ನು ಇಲಾಖೆ ಗುರುತಿಸಿದೆ. ಹಾಗಾದರೆ ಈ ವಿಭಾಗಗಳೇನು? ಇಲ್ಲಿದೆ ವಿವರ.
ದುರ್ಬಲ ಮುಂಗಾರು: ವಾಡಿಕೆಯ ಅರ್ಧಕ್ಕೂ ಕಡಿಮೆ ಮುಂಗಾರು ಮಳೆ ಬಿದ್ದರೆ ದುರ್ಬಲ ಮುಂಗಾರು ಎಂದು ಕರೆಯುತ್ತಾರೆ.
ಸಾಮಾನ್ಯ ಮುಂಗಾರು: ಮಳೆಯು ವಾಡಿಕೆಯ ಮುಂಗಾರಿನ ಅರ್ಧಕ್ಕಿಂತ, ಒಂದೂವರೆ ಪಟ್ಟು ಇದ್ದರೆ ಸಾಮಾನ್ಯ ಮುಂಗಾರು ಎನನಿಸುತ್ತದೆ.
ಸಕ್ರಿಯ ಮುಂಗಾರು: ಮಳೆಯು ವಾಡಿಕೆಯ ಮುಂಗಾರಿಗಿಂತ ಒಂದೂವರೆ ಪಟ್ಟು ಅಥವಾ 4 ಪಟ್ಟು ಹೆಚ್ಚಾಗಿದ್ದರೆ ಸಕ್ರಿಯ ಮುಂಗಾರು ಎನ್ನಿಸುತ್ತದೆ. ಹಾಗೂ ಕನಿಷ್ಠ ಎರಡು ತಾಣಗಳಲ್ಲಿ 5 ಸೆಂಟಿಮೀಟರ್‌ಗಿಂತ ಹೆಚ್ಚು ಮಳೆ ಬಿದ್ದಿರಬೇಕು. ಪಶ್ಚಿಮ ಕರಾವಳಿ ಅಥವಾ ಇತರ ಉಪ ವಲಯದಲ್ಲಿ ಎಲ್ಲಾದರೂ 3 ಸೆ.ಮೀ ಮಳೆ ಆಗಿರಬೇಕು.
ಚುರುಕಿನ ಮುಂಗಾರು: ವಾಡಿಕೆಗಿಂತ 4 ಪಟ್ಟಿಗೂ ಹೆಚ್ಚು ಮಳೆಯಾಗಿರಬೇಕು. ಕನಿಷ್ಠ ಎರಡು ಸ್ಥಳಗಳಲ್ಲಿ 5 ಸೆ.ಮೀಗಿಂತ ಹೆಚ್ಚು ಮಳೆಯಾಗಿರಬೇಕು. ಪಶ್ಚಿಮ ಕರಾವಳಿ ಅಥವಾ ಎಲ್ಲದರೂ ಉಪ ವಲಯದಲ್ಲಿ 3 ಸೆ.ಮೀ ಮಳೆಯಾಗಿರಬೇಕು.
ಚೆದುರಿದ ಮುಂಗಾರು: ನಿರ್ದಿಷ್ಟ ವಲಯದಲ್ಲಿ ಮಳೆಯು ಸತತ ಎರಡಕ್ಕೂ ಹೆಚ್ಚು ದಿನಗಳಲ್ಲಿ ಚೆದುರಿದ್ದರೆ, ಅಲ್ಲೊಂದು ಇಲ್ಲೊಂದು ಕಡೆ ಕ್ಷೀಣವಾಗಿ ಬಿದ್ದರೆ ಚೆದುರಿದ ಮುಂಗಾರು ಎನ್ನುತ್ತಾರೆ. ಮುಂಗಾರಿನ ವೇಳೆಯಲ್ಲಿ ಮುಂದಿನ 48 ಗಂಟೆಗಳಿಗೆ ಮಳೆ ದುರ್ಬಲವಾಗಿದೆ ಅಥವಾ ಒಣ ಹವೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದರೆ ಮುಂಗಾರು ಕ್ಷೀಣವಾಗಿದೆ ಎನ್ನಬಹುದು.
ಕೆಳಮುಖವಾಗಿ ತ್ರಿಕೋನದ ಆಕಾರದಲ್ಲಿರುವ ಭಾರತೀಯ ಭೂಭಾಗದಲ್ಲಿ ಸೂರ್ಯನ ತಾಪ ಉತ್ತರಾಭಿಮುಖವಾಗಿ ಏರಿಕೆಯಾದಂತೆ ಹರಡುತ್ತದೆ. ಗಾಳಿಯ ಮೂಲಕ ಈ ತಾಪಮಾನ ಹರಡುತ್ತದೆ. ಇದರ ಪರಿಣಾಮ ಅರಬ್ಬಿ ಸಮುದ್ರದದಲ್ಲಿ ಆರಂಭಿಕ ಹಂತದ ಮಾನ್ಸೂನ್ ಚಟುವಟಿಕೆಗಳು ಸಕ್ರಿಯವಾಗುತ್ತದೆ. ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಮೋಡಗಳು ಅದ್ಭುತವಾಗಿ ದಟ್ಟೈಸಿ ಭಾರಿ ಮಳೆಯಾಗುತ್ತದೆ. ಆಗಸ್ಟ್ ವೇಳೆಗೆ ಸಾಮಾನ್ಯವಾಗಿ ಮಳೆ ತೀವ್ರವಾಗಿರುತ್ತದೆ. ಸೂರ್ಯನ ತಾಪ ಇಳಿಮುಖವಾಗಿರುತ್ತದೆ. ನೈಋತ್ಯ ಮಾರುತದ ಅಬ್ಬರ ಕ್ರಮೇಣ ವಾಯುವ್ಯ ಪ್ರದೇಶದಲ್ಲಿ ಕಡಿಮೆಯಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಒಣ, ತೇವಾಂಶ ರಹಿತ ಹವೆ ಪಶ್ಚಿಮದ ಭಾಗಗಳಲ್ಲಿ ಉಂಟಾಗುತ್ತದೆ. ಬಳಿಕ ವಾಯುವ್ಯ ಭಾರತದಲ್ಲಿ ಹರಡಿಕೊಳ್ಳುತ್ತದೆ. ಅಕ್ಟೋಬರ್‌ನಲ್ಲಿ ಮಾರುತಗಳು ಚದುರಿ ಹೋಗಿರುತ್ತವೆ. ಚಳಿಗಾಲದ ಹವಾಮಾನ ಆರಂಭವಾಗುತ್ತದೆ. ನವೆಂಬರ್‌ನಲ್ಲಿ ಪಂಜಾಬ್‌ನಲ್ಲಿ ಒಣ ಹವೆ ಇರುತ್ತದೆ. ಡಿಸೆಂಬರ್‌ನಲ್ಲಿ ಮಧ್ಯ ಭಾರತ, ಬಂಗಾಳ, ಅಸ್ಸಾಂನಲ್ಲಿ ಶುಷ್ಕ ಹವೆ ಇರುತ್ತದೆ. ಜನವರಿ-ಫೆಬ್ರವರಿಯಲ್ಲಿ ಉತ್ತರ ಡೆಕ್ಕನ್, ದಕ್ಷಿಣ ಡೆಕ್ಕನ್ ವಲಯದಲ್ಲಿ ಶುಷ್ಕ ಹವೆ ಮುಂದುವರಿಯುತ್ತದೆ.
ಇದನ್ನೂ ಓದಿ: Monsoon Home Care Tips : ಮಳೆಗಾಲದಲ್ಲಿ ಮನೆಯನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಹೇಗೆ?