Site icon Vistara News

One Nation, One Election: ʼಏಕಕಾಲ ಚುನಾವಣೆʼಗೆ ಕೋವಿಂದ್‌ ನೇತೃತ್ವದಲ್ಲಿ ಸಮಿತಿ ರಚನೆ, ಮತ್ತೊಂದು ಹೆಜ್ಜೆ ಮುಂದಿಟ್ಟ ಮೋದಿ ಸರ್ಕಾರ

ramnath kovind

ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ (Ram Nath Kovind) ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ʼಒಂದು ರಾಷ್ಟ್ರ, ಒಂದು ಚುನಾವಣೆʼಯ (One Nation, One Election) ಕುರಿತು ಸಮಿತಿಯನ್ನು (central committee) ರಚಿಸಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವ ಕಾರ್ಯಸಾಧ್ಯತೆಯ ಕುರಿತು ಪರಿಶೀಲನೆ ನಡೆಸುವುದು ಸಮಿತಿಯ ಉದ್ದೇಶವಾಗಿದೆ.

ಸಮಿತಿಯು ಇದಕ್ಕೆ ಸಂಬಂಧಿಸಿದ ಎಲ್ಲರೊಂದಿಗೆ ಚರ್ಚೆ ನಡೆಸಲಿದೆ. ಇದೇ ವಿಶೇಷ ಅಧಿವೇಶನದಲ್ಲಿ (special parliament session) ಈ ಬಗ್ಗೆ ವಿಧೇಯಕವನ್ನು (one nation one election bill) ಮಂಡಿಸುವ ಕುರಿತು ಯೋಚಿಸಿಲ್ಲ ಎನ್ನಲಾಗಿದೆ. ಸಮಿತಿಯು ಕಾನೂನು ಮತ್ತು ರಾಜಕೀಯ ಅಭಿಪ್ರಾಯ ಪಡೆಯಲಿದೆ. ಇಬ್ಬರು ನಿವೃತ್ತ ನ್ಯಾಯಾಧೀಶರು ಸಹ ಸಮಿತಿಯ ಭಾಗವಾಗಿರುತ್ತಾರೆ. ಪ್ರಸ್ತಾವಿತ ಬದಲಾವಣೆಗಳು ಸಾಂವಿಧಾನಿಕ ತಿದ್ದುಪಡಿಯನ್ನು ಒಳಗೊಂಡಿರುವ ಕಾರಣ ನ್ಯಾಯಾಂಗ ತಜ್ಞತೆ ಪ್ರಮುಖ ಪಾತ್ರ ವಹಿಸಲಿದೆ.

ಸೆಪ್ಟೆಂಬರ್ 18ರಿಂದ 22ರವರೆಗೆ ಐದು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲು ಸರ್ಕಾರ ನಿರ್ಧರಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಘೋಷಿಸಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನವನ್ನು (17ನೇ ಲೋಕಸಭೆಯ 13ನೇ ಅಧಿವೇಶನ ಮತ್ತು ರಾಜ್ಯಸಭೆಯ 261ನೇ ಅಧಿವೇಶನ) ಸೆಪ್ಟೆಂಬರ್ 18ರಿಂದ 22ರವರೆಗೆ ಕರೆಯಲಾಗುತ್ತಿದೆ. ಸಂಸತ್ತಿನಲ್ಲಿ ಅಮೃತ ಕಾಲದ ಫಲಪ್ರದ ಚರ್ಚೆಗಳನ್ನು ನಡೆಸಲು ಎದುರು ನೋಡಲಾಗುತ್ತಿದೆ ಎಂದು ಜೋಶಿ ʼಎಕ್ಸ್’ (ಟ್ವಿಟರ್) ನಲ್ಲಿ ಹೇಳಿದ್ದರು.

ಪ್ರಸ್ತುತ ಅಧಿವೇಶನದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ, ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆ ನಡೆಯಬಹುದು ಎಂದು ಊಹಾಪೋಹ ಉಂಟಾಗಿತ್ತು. ವಿಪಕ್ಷಗಳು ಕುತೂಹಲ, ಆತಂಕದೊಂದಿಗೆ ಈ ಬೆಳವಣಿಗೆಯನ್ನು ವೀಕ್ಷಿಸುತ್ತಿವೆ.

ಅನಿರೀಕ್ಷಿತ ವಿಶೇಷ ಅಧಿವೇಶನದ ಘೋಷಣೆಯು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ವರ್ಷದ ಕೊನೆಯಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಿಗೆ ಪಕ್ಷಗಳು ತಯಾರಿ ನಡೆಸುತ್ತಿವೆ. ಸಾಂಪ್ರದಾಯಿಕವಾಗಿ ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ ಕೊನೆಯ ವಾರದಲ್ಲಿ ಪ್ರಾರಂಭವಾಗುತ್ತದೆ. ಜುಲೈ 20ರಂದು ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನ ಆಗಸ್ಟ್ 11ರಿಂದ 23 ದಿನಗಳ ಅವಧಿಯಲ್ಲಿ 17 ಕಲಾಪಗಳೊಂದಿಗೆ ನಡೆದಿತ್ತು.

ಇದನ್ನೂ ಓದಿ: One Nation, One Election | ಒಂದು ರಾಷ್ಟ್ರ, ಒಂದು ಚುನಾವಣೆಗೆ ಡಿಎಂಕೆ ವಿರೋಧ, ಬೆಂಬಲಿಸಿದ ಎಐಎಡಿಎಂಕೆ ವಿರುದ್ಧ ಟೀಕೆ

Exit mobile version