Site icon Vistara News

One Nation, One Election: ಯಂತ್ರಗಳ ಸಿದ್ಧತೆಗೆ ಒಂದು ವರ್ಷ ಸಮಯ ಬೇಕು: ಚುನಾವಣಾ ಆಯೋಗ

voting machine

ಹೊಸದಿಲ್ಲಿ: ಇಡೀ ದೇಶಕ್ಕೆ ಏಕಕಾಲದಲ್ಲಿ ಚುನಾವಣೆ ಮತದಾನ (One Nation, One Election) ನಡೆಸುವುದಿದ್ದರೆ ಇವಿಎಂ, ವಿವಿಪ್ಯಾಟ್‌ಗಳ ತಯಾರಿಗೆ ಕನಿಷ್ಠ ಒಂದು ವರ್ಷದ ʼಲೀಡ್ ಟೈಮ್ʼ ಬೇಕು ಎಂದು ಚುನಾವಣಾ ಆಯೋಗ (Election Commission) ಹೇಳಿದೆ.

ಕಾನೂನು ಆಯೋಗವು (Law commission) ಏಕಕಾಲದಲ್ಲಿ ಚುನಾವಣೆ (One Nation, One poll)ನಡೆಸುವ ಕುರಿತು ತನ್ನ ವರದಿಯನ್ನು ಅಂತಿಮಗೊಳಿಸುತ್ತಿದೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗವು (Election Commission) ಈ ವರ್ಷದ ಆರಂಭದಲ್ಲಿ ಕಾನೂನು ಸಮಿತಿಯ ಸದಸ್ಯರೊಂದಿಗೆ ನಡೆಸಿದ ಸಭೆಯಲ್ಲಿ ಲೀಡ್‌ ಟೈಮ್‌ನ ಅಗತ್ಯವನ್ನು ಒತ್ತಿಹೇಳಿದೆ ಎಂದು ತಿಳಿದುಬಂದಿದೆ. ಮತದಾನ ಯಂತ್ರಗಳ ತಯಾರಿಕೆಯಲ್ಲಿ ಉಂಟಾಗಿರುವ ತೀವ್ರ ಸವಾಲುಗಳನ್ನು ಉಲ್ಲೇಖಿಸಿರುವ ಅದು, ಅನುಷ್ಠಾನಕ್ಕೆ ಒಂದು ವರ್ಷದ ಮೊದಲು ಸಮಯ ಕೇಳಿದೆ.

ಕರ್ನಾಟಕ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ರಿತು ರಾಜ್ ಅವಸ್ತಿ ನೇತೃತ್ವದ ಕಾನೂನು ಆಯೋಗವು, ಸಂಸತ್ತಿಗೆ ಮತ್ತು ಎಲ್ಲಾ ರಾಜ್ಯಗಳ ಅಸೆಂಬ್ಲಿಗಳಿಗೆ ಒಟ್ಟಿಗೆ ಚುನಾವಣೆ ನಡೆಸುವ ಕಲ್ಪನೆಯನ್ನು ಬೆಂಬಲಿಸುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆಯೊಂದಿಗೆ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ನಡೆಸುವ ಮೂಲಕ ಈ ಪರಿಕಲ್ಪನೆಯನ್ನು ಜಾರಿಗೆ ತರಲು 2024ರಲ್ಲಿ ಟೈಮ್‌ಲೈನ್‌ಗಳನ್ನು ಸೂಚಿಸುವ ಸಾಧ್ಯತೆಯಿದೆ. ಮತ್ತು 2029ರಲ್ಲಿ ಪೂರ್ಣ ಪ್ರಮಾಣದಲ್ಲಿ ತರುವ ಸಾಧ್ಯತೆಯಿದೆ.

ಆದರೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳನ್ನು (electronic voting machine- EVM) ತಯಾರಿಸಲು ಅತ್ಯಗತ್ಯ ಅಂಶವಾಗಿರುವ ಸೆಮಿಕಂಡಕ್ಟರ್‌ಗಳು ಮತ್ತು ಚಿಪ್‌ಗಳ ಜಾಗತಿಕ ಕೊರತೆಯಿದೆ. ಮತ್ತು ʼಮತದಾರರ ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ʼ (VVPAT machine) ಯಂತ್ರಗಳು ಸಾಕಷ್ಟಿಲ್ಲ. ಈ ಕೊರತೆಯು 2024ರ ಲೋಕಸಭೆ ಚುನಾವಣೆಗೂ ಆಯೋಗವು ಹೆಚ್ಚುವರಿ ಮತ ಯಂತ್ರದ ಅಗತ್ಯತೆಗಳನ್ನು (ಸುಮಾರು 4 ಲಕ್ಷ) ಪೂರೈಸುವಲ್ಲಿ ಗಮನಾರ್ಹ ಸವಾಲುಗಳನ್ನು ಒಡ್ಡಿದೆ. ಇನ್ನು ಎಲ್ಲಾ ಚುನಾವಣೆಗಳನ್ನು ಒಟ್ಟಿಗೆ ನಡೆಸಲು ಬೇಕಾಗುವ ಹೆಚ್ಚುವರಿ ಸಂಖ್ಯೆಯ ಯಂತ್ರಗಳನ್ನು ಗಣನೆ ಮಾಡಬೇಕಿದೆ.

ಪ್ರಸ್ತುತ ಮತಯಂತ್ರಗಳ ಇಬ್ಬರು ಸರ್ಕಾರಿ ಉತ್ಪಾದಕರಿದ್ದಾರೆ. ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ (Bharat Electronic Ltd) ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್. ಈ ಸಂಸ್ಥೆಗಳ ಪ್ರಸ್ತುತ ಸಾಮರ್ಥ್ಯ, ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಮತದಾನ ಯಂತ್ರ ಉತ್ಪಾದನೆ ಹೆಚ್ಚಿಸಲು ಕನಿಷ್ಠ ಒಂದು ವರ್ಷದ ಸಮಯ ಬೇಕಾಗುತ್ತದೆ. ಇದಲ್ಲದೆ ಕೋವಿಡ್- 19 ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಸೆಮಿಕಂಡಕ್ಟರ್‌ಗಳ ಕೊರತೆಯು ಇವಿಎಂ ಉತ್ಪಾದನೆಯನ್ನು ಮತ್ತಷ್ಟು ಅಸ್ತವ್ಯಸ್ತಗೊಳಿಸಿದೆ.

ಸೆಮಿಕಂಡಕ್ಟರ್ (Semi conductor) ಕೊರತೆಗೆ ಸಂಬಂಧಿಸಿದ ಉತ್ಪಾದನಾ ಸವಾಲುಗಳ ಬಗ್ಗೆ ಇಸಿ ಕಳವಳ ವ್ಯಕ್ತಪಡಿಸಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯದ ಸಂಸದೀಯ ಸ್ಥಾಯಿ ಸಮಿತಿಗೆ ಸಲ್ಲಿಸಿದ ವರದಿಯಲ್ಲಿ ಚುನಾವಣಾ ಆಯೋಗವು, 2022-2023ರಲ್ಲಿ ಇವಿಎಂಗಳನ್ನು ಸಂಗ್ರಹಿಸಲು ಮೀಸಲಿಟ್ಟ ಬಜೆಟ್‌ನ 80 ಪ್ರತಿಶತಕ್ಕಿಂತ ಹೆಚ್ಚಿನದನ್ನು ಜನವರಿ 31ರವರೆಗೆ ಖರ್ಚು ಮಾಡಲು ಅಸಮರ್ಥ ಎಂದು ಹೇಳಿದೆ. ಚಿಪ್‌ಗಳ ಕೊರತೆಯು ಯಂತ್ರ ತಯಾರಿಕೆ ಪ್ರಕ್ರಿಯೆಯಲ್ಲಿ ವಿಳಂಬಕ್ಕೆ ಕಾರಣವಾಗಿದೆ. ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಕಾಪಾಡಿಕೊಳ್ಳಲು ಮತ್ತು ಸಾರ್ವಜನಿಕ ನಂಬಿಕೆಗೆ ಆಗಬಹುದಾದ ಹಾನಿಯ ಭಯದಿಂದಾಗಿ, ಖಾಸಗಿ ತಯಾರಕರನ್ನು ಬಳಸಿಕೊಳ್ಳಲು EC ದೃಢವಾಗಿ ವಿರೋಧಿಸುತ್ತಿದೆ.

2024 ಮತ್ತು 2029ರಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆದರೆ ಅದಕ್ಕೆ ಅಗತ್ಯವಿರುವ ಹೆಚ್ಚುವರಿ ಸಂಖ್ಯೆಯ EVM ಮತ್ತು VVPAT ಯಂತ್ರಗಳ ಕುರಿತು ECಯು ಕಾನೂನು ಆಯೋಗಕ್ಕೆ ಅಂದಾಜುಗಳನ್ನು ಒದಗಿಸಿದೆ. ಮತದಾನ ಯಂತ್ರವು ಮೂಲಭೂತವಾಗಿ ಮೂರು ಭಾಗಗಳನ್ನು ಒಳಗೊಂಡಿದೆ: ನಿಯಂತ್ರಣ ಘಟಕ, ಮತಪತ್ರ ಘಟಕ, ಮತ್ತು VVPAT. 2024ಕ್ಕೆ, ಹೆಚ್ಚುವರಿ 11.49 ಲಕ್ಷ ನಿಯಂತ್ರಣ ಘಟಕಗಳು, 15.97 ಲಕ್ಷ ಬ್ಯಾಲೆಟ್ ಯೂನಿಟ್‌ಗಳು ಮತ್ತು 12.37 ಲಕ್ಷ VVPATಗಳು ಅಗತ್ಯವಿವೆ. ಇವೆಲ್ಲವುಗಳ ಒಟ್ಟಾರೆ ಹೆಚ್ಚುವರಿ ವೆಚ್ಚ ಸುಮಾರು 5,200 ಕೋಟಿ ರೂ.

2029ರಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆಯಬೇಕಾದರೆ, ಚುನಾವಣಾ ಆಯೋಗಕ್ಕೆ ಒಟ್ಟು 53.76 ಲಕ್ಷ ಬ್ಯಾಲೆಟ್ ಯೂನಿಟ್‌ಗಳು, 38.67 ಲಕ್ಷ ಕಂಟ್ರೋಲ್ ಯೂನಿಟ್‌ಗಳು ಮತ್ತು 41.65 ಲಕ್ಷ ವಿವಿಪ್ಯಾಟ್‌ಗಳು ಬೇಕಾಗುತ್ತವೆ. ನಿರೀಕ್ಷಿತ ಕೊರತೆಯು 26.55 ಲಕ್ಷ ಬ್ಯಾಲೆಟ್ ಯೂನಿಟ್‌ಗಳು, 17.78 ಲಕ್ಷ ಕಂಟ್ರೋಲ್ ಯೂನಿಟ್‌ಗಳು ಮತ್ತು 17.79 ಲಕ್ಷ ವಿವಿಪ್ಯಾಟ್‌ಗಳು. ಇದಕ್ಕಾಗಿ ಸರ್ಕಾರ ಸುಮಾರು 8,000 ಕೋಟಿ ರೂಪಾಯಿಗಳನ್ನು ವಿನಿಯೋಗಿಸಬೇಕಾಗಿದೆ. ಹೆಚ್ಚುತ್ತಿರುವ ಮತದಾರರ ಸಂಖ್ಯೆ ಮತ್ತು ಮತದಾನ ಕೇಂದ್ರಗಳಿಂದಾಗಿ VVPATಗಳಿಗೆ ಬೇಡಿಕೆ ಹೆಚ್ಚುತ್ತಿದೆ. ವಿವಿಪ್ಯಾಟ್‌ಗಳ ಬೇಡಿಕೆ 2024ರಲ್ಲಿ 11.8 ಲಕ್ಷ ಹಾಗೂ 2029ರಲ್ಲಿ 13.57 ಲಕ್ಷಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: One Nation, One Election: ʼಏಕಕಾಲ ಚುನಾವಣೆʼಗೆ ಕೋವಿಂದ್‌ ನೇತೃತ್ವದಲ್ಲಿ ಸಮಿತಿ ರಚನೆ, ಮತ್ತೊಂದು ಹೆಜ್ಜೆ ಮುಂದಿಟ್ಟ ಮೋದಿ ಸರ್ಕಾರ

Exit mobile version