ಹೊಸದಿಲ್ಲಿ: ʼಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಗುರುತುಪತ್ರʼ (One nation, One student ID) ಉಪಕ್ರಮವನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಶಾಲೆಗಳಿಗೆ ವಿಸ್ತರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ (National Education Policy 2020) ಕಲ್ಪಿಸಿದಂತೆ ಉನ್ನತ ಶಿಕ್ಷಣದೊಂದಿಗೆ ಸುಗಮ ಸಂಯೋಜನೆ ಸಾಧ್ಯವಾಗಲು ಕೇಂದ್ರ ಇದನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹೊಸ ಉಪಕ್ರಮದ ಅಡಿಯಲ್ಲಿ 12 ಅಂಕಿಯ ವಿಶಿಷ್ಟ IDಯೊಂದಿಗೆ ಸ್ವಯಂಚಾಲಿತ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ (APAAR) ಕಾರ್ಡ್ ಅನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ. ಕೇಂದ್ರವು ಉನ್ನತ ಶಿಕ್ಷಣದಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಿದೆ. ಇದೀಗ 2.2 ಕೋಟಿ ವಿದ್ಯಾರ್ಥಿಗಳಿಗೆ APAAR IDಗಳನ್ನು ನೀಡಲಾಗುತ್ತಿದೆ.
APAAR, ಆಧಾರ್ ದೃಢೀಕರಿಸಿದ ಐಡಿ ಆಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬ್ಯಾಂಕ್ ಆಫ್ ಕ್ರೆಡಿಟ್‌ಗೆ (ABC) ಇದು ಜೋಡಿಸಿಕೊಳ್ಳಲಿದೆ. ಇದು ಕ್ರೆಡಿಟ್‌ಗಳ ಡಿಜಿಟಲ್ ದಾಖಲಾತಿ. ಅಂಕಪಟ್ಟಿ ಗಳು, ಪ್ರಮಾಣಪತ್ರಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ವಿದ್ಯಾರ್ಥಿಗಳು ಸಂಗ್ರಹಿಸಬಹುದಾದ ಡಿಜಿಟಲ್ ಲಾಕರ್ ಡಿಜಿಲಾಕರ್ ಅನ್ನು ಪ್ರವೇಶಿಸಲು ಸಹ ಇದನ್ನು ಬಳಸಲಾಗುತ್ತದೆ. ಅಂತಿಮವಾಗಿ ಪೂರ್ವ ಪ್ರಾಥಮಿಕದಿಂದ PhDವರೆಗಿನ ವಿದ್ಯಾರ್ಥಿಗಳಿಗೆ APAAR ಜೀವಮಾನದ ID ಆಗಿರುತ್ತದೆ.
ಶಿಕ್ಷಣವು ರಾಜ್ಯಪಟ್ಟಿಯಲ್ಲಿರುವ ವಿಷಯ ಆಗಿರುವುದರಿಂದ, NEP 2020ರ ಅಡಿಯಲ್ಲಿ ರಾಜ್ಯಗಳು ಯಾವುದೇ ಉಪಕ್ರಮವನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿಲ್ಲ. ಶಾಲೆಗಳಲ್ಲಿ ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಐಡಿ ಉಪಕ್ರಮದ ಅನುಷ್ಠಾನದ ಕುರಿತು ವಿವಿಧ ರಾಜ್ಯ ಸರ್ಕಾರಗಳೊಂದಿಗೆ ಚರ್ಚೆಗಳು ಪ್ರಾರಂಭವಾಗಿವೆ ಎಂದು ಶಿಕ್ಷಣ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆಯ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ ಹೇಳಿದ್ದಾರೆ.
“ಇದು ವಿದ್ಯಾರ್ಥಿಗಳು, ಶಾಲೆಗಳು ಮತ್ತು ಸಂಪೂರ್ಣ ಶಿಕ್ಷಣ ವ್ಯವಸ್ಥೆಗೆ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಪತ್ತೆಹಚ್ಚಲು ಇದು ಅವರಿಗೆ ಸಹಾಯ ಮಾಡುತ್ತದೆ. ವರ್ಗಾವಣೆಯಾಗುವ ಉದ್ಯೋಗದಲ್ಲಿರುವ ಪೋಷಕರು ಇರುವ ವಿದ್ಯಾರ್ಥಿಗಳಿಗೆ ಇದು ಸಹಾಯ ಮಾಡುತ್ತದೆ. ಶಾಲಾ ವರ್ಷದ ಮಧ್ಯದಲ್ಲಿ ಪೋಷಕರಿಗೆ ವರ್ಗವಾದರೆ, ಬೇರೆ ಶಾಲೆಗೆ ಸೇರಿಸುವುದು ಮೊದಲು ಕಷ್ಟವಾಗುತ್ತಿತ್ತು. ಇನ್ನು ವಿಶಿಷ್ಟ IDಯ ಮೂಲಕ ಅದು ಸುಲಭವಾಗಲಿದೆ” ಎಂದಿದ್ದಾರೆ.
ಈ ವರ್ಷ ಕೇಂದ್ರ ಸರ್ಕಾರ ʼರಾಷ್ಟ್ರೀಯ ಕ್ರೆಡಿಟ್ʼ ಉಪಕ್ರಮವನ್ನು (NCrF) ಪರಿಚಯಿಸಿದೆ. ಅದರಲ್ಲಿ ಶಾಲೆ ಮತ್ತು ವೃತ್ತಿಪರ ಶಿಕ್ಷಣವನ್ನು ಸೇರಿಸಲಾಗಿದೆ. NCrF ಅಡಿಯಲ್ಲಿ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯಿಂದಲೇ ಕ್ರೆಡಿಟ್‌ಗಳನ್ನು ಗಳಿಸುತ್ತಾರೆ. ಅದನ್ನು ಅವರ ABC ಖಾತೆಗಳಲ್ಲಿ ಸಂಗ್ರಹಿಸಲಾಗುತ್ತದೆ.
ಇದನ್ನೂ ಓದಿ: ನಿಲ್ಲುತ್ತಿದೆ ಮಕ್ಕಳ ಹೃದಯ! ಹೆಚ್ಚಾಯ್ತು ಅಲ್ಪಾಯುಷ್ಯದ ಭಯ; ಹೃದಯಾಘಾತಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ