Site icon Vistara News

Onion Price: ಕೇಂದ್ರ ಸರ್ಕಾರದಿಂದಲೇ ಕಿಲೋ 25 ರೂ.ಗೆ ಈರುಳ್ಳಿ ಮಾರಾಟ; ಎಲ್ಲಿ ನೋಡಿ

Onion Price Rise

ಹೊಸದಿಲ್ಲಿ: ಕಳೆದೊಂದು ವಾರದಲ್ಲಿ ಈರುಳ್ಳಿ ಬೆಲೆ (Onion Price) ದುಪ್ಪಟ್ಟಾಗಿದ್ದು, ಕೆಜಿಗೆ 30-35 ರೂ.ನಿಂದ 60-90 ರೂ.ಗೆ ತಲುಪಿದೆ. ಇದೀಗ ಸರ್ಕಾರ ಈರುಳ್ಳಿಯನ್ನು ತನ್ನ ಬಫರ್ ಸ್ಟಾಕ್‌ನಿಂದ ಕೆಜಿಗೆ 25 ರೂಪಾಯಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಇದನ್ನು ಮಾಡಲು ಸರ್ಕಾರ 170ಕ್ಕೂ ಹೆಚ್ಚು ನಗರಗಳು ಮತ್ತು 685 ಕೇಂದ್ರಗಳಲ್ಲಿ ಈರುಳ್ಳಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಿದೆ.

ಈರುಳ್ಳಿ ಬೆಲೆಯನ್ನು (onion price) ನಿಯಂತ್ರಿಸಲು ಸರ್ಕಾರವು ತನ್ನ ಬಫರ್ ಸ್ಟಾಕ್‌ನಿಂದ ಈರುಳ್ಳಿಯನ್ನು ಬಿಡುಗಡೆ ಮಾಡುವುದು ಮತ್ತು ಆಮದು ಹೆಚ್ಚಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಬಫರ್ ಸ್ಟಾಕ್‌ನಿಂದ ಈರುಳ್ಳಿಯನ್ನು ದೇಶಾದ್ಯಂತದ ಪ್ರಮುಖ ಬಳಕೆ ಕೇಂದ್ರಗಳಲ್ಲಿ ಆಗಸ್ಟ್ ಎರಡನೇ ವಾರದಿಂದ ನಿರಂತರವಾಗಿ ವಿಲೇವಾರಿ ಮಾಡಲಾಗಿದೆ ಮತ್ತು NCCF ಮತ್ತು NAFED ನಿರ್ವಹಿಸುವ ಮೊಬೈಲ್ ವ್ಯಾನ್‌ಗಳ ಮೂಲಕ ಚಿಲ್ಲರೆ ಗ್ರಾಹಕರಿಗೆ ಕೆಜಿಗೆ 25 ರೂ.ಗೆ ಸರಬರಾಜು ಮಾಡಲಾಗುತ್ತಿದೆ.

ಬಫರ್‌ಗಾಗಿ ಈಗಾಗಲೇ 5 ಲಕ್ಷ ಟನ್‌ಗಳಷ್ಟು ಹೆಚ್ಚುವರಿಯಾಗಿ ಈರುಳ್ಳಿಯನ್ನು ಸಂಗ್ರಹಿಸುವುದಾಗಿ ಕೇಂದ್ರವು ಇತ್ತೀಚೆಗೆ ಘೋಷಿಸಿದೆ. 2023 ರಬಿ ಸೀಸನ್‌ ಈರುಳ್ಳಿಯ ಸಂಗ್ರಹಣೆಯ ಪ್ರಮಾಣವು ಕುಸಿಯುತ್ತಿರುವ ಕಾರಣ ಕೈಗೆಟುಕುವ ಬೆಲೆಯಲ್ಲಿ ದೇಶೀಯ ಗ್ರಾಹಕರಿಗೆ ಸಾಕಷ್ಟು ಈರುಳ್ಳಿ ಲಭ್ಯತೆಯನ್ನು ಕಾಪಾಡಿಕೊಳ್ಳಲು ಕನಿಷ್ಠ ರಫ್ತು ಬೆಲೆ (MEP) ವಿಧಿಸುವ ಕ್ರಮ ಸಹಾಯ ಮಾಡುತ್ತದೆ ಎಂದು ಶನಿವಾರ ಹೊರಡಿಸಿದ ಹೇಳಿಕೆ ತಿಳಿಸಿದೆ.

ಎಲ್ಲೆಲ್ಲಿ ಲಭ್ಯ?

ದೆಹಲಿ-ಎನ್‌ಸಿಆರ್, ಜೈಪುರ (22), ಲುಧಿಯಾನ (12), ವಾರಣಾಸಿ (10), ರೋಹ್ಟಕ್ (6), ಮತ್ತು ಶ್ರೀನಗರ (5) ನಲ್ಲಿ 71 ಸ್ಥಳಗಳಲ್ಲಿ ಮೊಬೈಲ್ ವ್ಯಾನ್‌ಗಳ ಮೂಲಕ ರಿಯಾಯಿತಿ ದರದಲ್ಲಿ ಈರುಳ್ಳಿ ಲಭ್ಯವಿದೆ. ಭೋಪಾಲ್, ಇಂದೋರ್, ಭುವನೇಶ್ವರ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಮೊಬೈಲ್ ವ್ಯಾನ್‌ಗಳ ಮೂಲಕ ರಿಯಾಯಿತಿ ದರದ ಈರುಳ್ಳಿಯ ಚಿಲ್ಲರೆ ಮಾರಾಟವೂ ನಡೆಯುತ್ತಿದೆ.

ರಫ್ತು ನಿರ್ಬಂಧಗಳನ್ನು ಹೇರಿದ ನಂತರ ಪ್ರಮುಖ ಸರಬರಾಜು ರಾಜ್ಯವಾದ ಮಹಾರಾಷ್ಟ್ರದಲ್ಲಿ ಸಗಟು ಬೆಲೆಗಳು ಇಳಿಯಲು ಪ್ರಾರಂಭಿಸಿದಾಗಲೂ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕಿಲೋಗ್ರಾಂಗೆ ರೂ. 78ರಷ್ಟಿದ್ದ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಈರುಳ್ಳಿ ದುಬಾರಿಯಾಗುತ್ತಲೇ ಇತ್ತು. ಅಧಿಕೃತ ಅಂಕಿಅಂಶಗಳ ಪ್ರಕಾರ ಮಂಗಳವಾರ ಅಖಿಲ ಭಾರತ ಸರಾಸರಿ ಚಿಲ್ಲರೆ ಈರುಳ್ಳಿ ಬೆಲೆ ಕೆಜಿಗೆ 53.75 ರೂ.ಗೆ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಈರುಳ್ಳಿ ಬೆಲೆ ಅಕ್ಟೋಬರ್ 25ರಿಂದ ಏರಿಕೆಯಾಗಲು ಪ್ರಾರಂಭಿಸಿತು. ಆಗ ದರಗಳು ಕೆಜಿಗೆ 40 ರೂ. ಇತ್ತು. ಅಕ್ಟೋಬರ್ 29ರಂದು ಕೆಜಿಗೆ 80 ರೂ.ಗೆ ದ್ವಿಗುಣಗೊಂಡಿದೆ. ಅಕ್ಟೋಬರ್ 30ರಂದು ಪ್ರತಿ ಕೆಜಿಗೆ 78 ರೂ. ಕುಸಿದಿದೆ ಮತ್ತು ಮಂಗಳವಾರವೂ ಅದೇ ಮಟ್ಟದಲ್ಲಿತ್ತು. ಪ್ರಸ್ತುತ, ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಸರಾಸರಿ ಚಿಲ್ಲರೆ ಈರುಳ್ಳಿ ಬೆಲೆಗಳು ಅತ್ಯಧಿಕ ಮಟ್ಟದಲ್ಲಿವೆ.

ಹೆಚ್ಚಿನ ಬೆಲೆಗೆ ಕಾರಣಗಳು

ಅಧಿಕೃತ ಮೂಲಗಳ ಪ್ರಕಾರ, ಮಹಾರಾಷ್ಟ್ರದಲ್ಲಿ 15-20 ಲಕ್ಷ ಟನ್‌ಗಳಷ್ಟು ರಾಬಿ ಬೆಳೆ ದಾಸ್ತಾನು ಲಭ್ಯವಿದ್ದರೂ ಊಹಾಪೋಹಗಳಿಂದಾಗಿ ದೇಶದಾದ್ಯಂತ ಸಗಟು ಮತ್ತು ಚಿಲ್ಲರೆ ಎರಡೂ ಮಾರುಕಟ್ಟೆಗಳಲ್ಲಿ ಬೆಲೆಗಳು ಏರಿಕೆಯಾಗಿವೆ. ತಾಜಾ ಖಾರಿಫ್ ಉತ್ಪಾದನೆಯಲ್ಲಿನ ಕುಸಿತ ಮತ್ತು ಆಗಮನದಲ್ಲಿ ಎರಡು ವಾರಗಳ ವಿಳಂಬವು ಈರುಳ್ಳಿ ಬೆಲೆಯಲ್ಲಿ ಹಠಾತ್ ಏರಿಕೆಗೆ ಏಕೈಕ ಕಾರಣವಾದುದಲ್ಲ. ಆಂತರಿಕ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಹಳೆಯ ಬೆಳೆ ದಾಸ್ತಾನು ಇದೆ ಮತ್ತು ಸರ್ಕಾರವು 5 ಲಕ್ಷ ಟನ್ ಬಫರ್ ಸ್ಟಾಕ್ ಅನ್ನು ಸಹ ನಿರ್ವಹಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಆರ್ಥಿಕ ವರ್ಷದ ಅಕ್ಟೋಬರ್ 20ರವರೆಗೆ ದೇಶವು ಸುಮಾರು 15 ಲಕ್ಷ ಟನ್ ಈರುಳ್ಳಿ ರಫ್ತು ಮಾಡಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ 2022-23ರ ಆರ್ಥಿಕ ವರ್ಷದಲ್ಲಿ ಒಟ್ಟು ಈರುಳ್ಳಿ ರಫ್ತು 25 ಲಕ್ಷ ಟನ್‌ಗಳಷ್ಟಿತ್ತು. ಈರುಳ್ಳಿಯನ್ನು ಮೂರು ಋತುಗಳಲ್ಲಿ ಬೆಳೆಯಲಾಗುತ್ತದೆ- ಖಾರಿಫ್, ತಡವಾದ ಖಾರಿಫ್ ಮತ್ತು ರಬಿ.

ಇದನ್ನೂ ಓದಿ: Onion Price: ಈರುಳ್ಳಿ ಬೆಲೆ ಇದ್ದಕ್ಕಿದ್ದಂತೆ ಗಗನಕ್ಕೇರಿದ್ದೇಕೆ?

Exit mobile version