ನವ ದೆಹಲಿ: ಕೆಲವು ದಿನಗಳ ಹಿಂದೆ ಟೊಮ್ಯಾಟೊ ಬೆಲೆ ಏರಿಕೆಯಾಗಿ ಗ್ರಾಹಕರ ಕೈ ಸುಟ್ಟಿತ್ತು. ಇದೀಗ ಈರುಳ್ಳಿ ಸರದಿ. ಈರುಳ್ಳಿ ಬೆಲೆ ಹೆಚ್ಚಾಗಿದ್ದು, ಖರೀದಿದಾರರ ಕಣ್ಣಲ್ಲಿ ನೀರು ತರಿಸುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಸರಾಸರಿ ಶೇ. 57ರಷ್ಟು ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಈರುಳ್ಳಿ ದರ 60ರಿಂದ 70 ರೂ.ಗೆ ಏರಿದೆ. ಇನ್ನೂ ಏರುವ ಲಕ್ಷಣ ಕಾಣಿಸುತ್ತಿದೆ.
ದರದ ನಾಗಾಲೋಟ
ಸದ್ಯ ಈರುಳ್ಳಿ ಬೆಲೆ ನಾಗಾಲೋಟದಲ್ಲಿ ಗಗನಮುಖಿಯಾಗುತ್ತಿದೆ. ಪೂರೈಕೆ ಕೊರತೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಈರುಳ್ಳಿ ಬೆಲೆ ಕೆಜಿಗೆ 65-80 ರೂ.ಗೆ ತಲುಪಿತ್ತು. ದೆಹಲಿ-ಎನ್ಸಿಆರ್ನಲ್ಲಿ ಸುಮಾರು 400 ಸಫಾಲ್ ಚಿಲ್ಲರೆ ಅಂಗಡಿಗಳನ್ನು ಹೊಂದಿರುವ ಮದರ್ ಡೈರಿ ಪ್ರತಿ ಕೆ.ಜಿ.ಗೆ 67 ರೂ.ಗೆ ಮಾರಾಟ ಮಾಡುತ್ತಿದೆ. ಇ-ಕಾಮರ್ಸ್ ಪೋರ್ಟಲ್ ಬಿಗ್ಬಾಸ್ಕಟ್ ಪ್ರತಿ ಕೆ.ಜಿ.ಗೆ 67 ರೂ.ಗೆ ಮಾರಾಟ ಮಾಡುತ್ತಿದೆ. ಒಟಿಪಿ ಪ್ರತಿ ಕೆ.ಜಿ.ಗೆ 70 ರೂ.ಗೆ ಸೇಲ್ ಮಾಡುತ್ತಿದೆ. ಸ್ಥಳೀಯ ಮಾರಾಟಗಾರರು ಈರುಳ್ಳಿಯನ್ನು ಪ್ರತಿ ಕೆ.ಜಿ.ಗೆ 80 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ.
“ನಾವು ಆಗಸ್ಟ್ ಮಧ್ಯದಿಂದ ಬಫರ್‌ನಿಂದ ಈರುಳ್ಳಿಯನ್ನು ತರಿಸುತ್ತಿದ್ದೇವೆ ಮತ್ತು ಬೆಲೆಗಳ ಮತ್ತಷ್ಟು ಏರಿಕೆಯನ್ನು ತಡೆಯಲು ಹಾಗೂ ಗ್ರಾಹಕರಿಗೆ ಪರಿಹಾರವನ್ನು ಒದಗಿಸಲು ನಾವು ಚಿಲ್ಲರೆ ಮಾರಾಟವನ್ನು ಹೆಚ್ಚಿಸುತ್ತಿದ್ದೇವೆ” ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ತೀವ್ರ ಬೆಲೆ ಏರಿಕೆ ಇರುವ ರಾಜ್ಯಗಳ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಿಗೆ ಬಫರ್‌ನಿಂದ ಈರುಳ್ಳಿಯನ್ನು ಪೂರೈಸಲಾಗುತ್ತಿದೆ. ಆಗಸ್ಟ್ ಮಧ್ಯ ಭಾಗದಿಂದ ಸುಮಾರು 1.7 ಲಕ್ಷ ಟನ್ ಈರುಳ್ಳಿಯನ್ನು ಬಫರ್‌ನಿಂದ 22 ರಾಜ್ಯಗಳಿಗೆ ತಲುಪಿಸಲಾಗಿದೆ.
ಚಿಲ್ಲರೆ ಮಾರುಕಟ್ಟೆಗೆ ಬಫರ್ ಈರುಳ್ಳಿಯನ್ನು ಎರಡು ಸಹಕಾರಿ ಸಂಸ್ಥೆಗಳಾದ ಎನ್‌ಸಿಸಿಎಫ್ (NCCF) ಮತ್ತು ಎನ್‌ಎಎಫ್‌ಇಡಿ (NAFED) ಪ್ರತಿ ಕೆ.ಜಿ.ಗೆ 25 ರೂ.ಗಳ ಸಬ್ಸಿಡಿ ದರದಲ್ಲಿ ಪೂರೈಸುತ್ತಿದೆ. ದೆಹಲಿಯಲ್ಲೂ ಬಫರ್ ಈರುಳ್ಳಿಯನ್ನು ಈ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಲೆ ಹೆಚ್ಚಳಕ್ಕೆ ಕಾರಣವೇನು?
ʼʼಹವಾಮಾನ ವೈಪರೀತ್ಯದ ಕಾರಣದಿಂದ ಖಾರಿಫ್ ಈರುಳ್ಳಿ ಬಿತ್ತನೆ ವಿಳಂಬವಾಗಿದ್ದು, ಕಡಿಮೆ ಕಡೆಗಳಲ್ಲಿ ಬಿತ್ತನೆ ಆಗಿದ್ದು ಮತ್ತು ಬೆಳೆ ತಡವಾಗಿ ಕೈ ಸೇರಿದ್ದು ಬೆಲೆ ಏರಿಕೆಗೆ ಮುಖ್ಯ ಕಾರಣ. ಖಾರಿಫ್ ಈರುಳ್ಳಿ ಈಗ ಮಾರುಕಟ್ಟೆಗೆ ಬರಲು ಪ್ರಾರಂಭಿಸಬೇಕಾಗಿತ್ತು. ಆದರೆ ಇನ್ನೂ ಬಂದಿಲ್ಲ. ಸಂಗ್ರಹಿಸಿದ ಈರುಳ್ಳಿ ಖಾಲಿಯಾಗುತ್ತಿರುವುದು ಬೆಲೆ ಹೆಚ್ಚಳಕ್ಕೆ ಇನ್ನೊಂದು ಕಾರಣʼʼ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2023-24ರ ಹಣಕಾಸು ವರ್ಷದಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯವು ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿ ಮೂಲಕ 5 ಲಕ್ಷ ಟನ್ ಈರುಳ್ಳಿ ದಾಸ್ತಾನು ಉಳಿಸಿಕೊಂಡಿದೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚುವರಿ 2 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸಲು ಯೋಜನೆ ರೂಪಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: Onion Price : ಈರುಳ್ಳಿ ಬೆಲೆ ಏರಿಕೆ ತಡೆಗೆ ಕೇಂದ್ರ ಸರ್ಕಾರದ ದಿಟ್ಟ ಹೆಜ್ಜೆ
ಬೆಲೆ ನಿಯಂತ್ರಣಕ್ಕೆ ಸರ್ಕಾರದಿಂದ ಕ್ರಮ
ಸರ್ಕಾರವು ಈ ವರ್ಷದ ಡಿಸೆಂಬರ್ 31ರ ವರೆಗೆ ಈರುಳ್ಳಿ ರಫ್ತಿನ ಮೇಲೆ ಪ್ರತಿ ಟನ್ಗೆ 66,730 ರೂ. (800 ಡಾಲರ್) ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ವಿಧಿಸಿದೆ. ಅಕ್ಟೋಬರ್ 29ರಂದು ಈ ನಿಯಮ ಜಾರಿಗೆ ಬಂದಿದೆ. ಬೆಂಗಳೂರು ಗುಲಾಬಿ ಮತ್ತು ಕೃಷ್ಣಪುರಂ ಈರುಳ್ಳಿ ಹೊರತುಪಡಿಸಿ ಎಲ್ಲ ರೀತಿಯ ಈರುಳ್ಳಿಗೆ ಎಂಇಪಿ ಜಾರಿಯಾಗಲಿದೆ. ಅಲ್ಲದೆ ಬಫರ್ಗಾಗಿ ಹೆಚ್ಚುವರಿ 2 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸುವುದಾಗಿ ಸರ್ಕಾರ ಘೋಷಿಸಿದೆ. “ಈರುಳ್ಳಿ ರಫ್ತು ಪ್ರಸ್ತುತ ಉಚಿತ. ಆದರೆ ಡಿಸೆಂಬರ್ 31, 2023ರ ವರೆಗೆ ಪ್ರತಿ ಟನ್ಗೆ 800 ಡಾಲರ್ ಎಫ್ಒಬಿ ಎಂಇಪಿ ವಿಧಿಸಲಾಗಿದೆʼʼ ಎಂದು ಮೂಲಗಳು ಹೇಳಿವೆ. ಕೆಲವು ಈರುಳ್ಳಿ ಸರಕುಗಳನ್ನು ಎಂಇಪಿ ಇಲ್ಲದೆ ರಫ್ತು ಮಾಡಲು ಅನುಮತಿಸಲಾಗುವುದು ಎಂದು ಅಧಿಸೂಚನೆ ತಿಳಿಸಿದೆ.