Site icon Vistara News

Operation Kaveri: ಸುಡಾನ್‌ನಲ್ಲಿನ ಭಾರತೀಯರ ಸ್ಥಳಾಂತರಕ್ಕೆ ‘ಆಪರೇಷನ್ ಕಾವೇರಿ’ ಶುರು, ಸಿದ್ದರಾಮಯ್ಯ ಧನ್ಯವಾದ

Operation Kaveri kicked of to rescue indians from battle-torn Sudan

ನವದೆಹಲಿ: ಸಂಘರ್ಷಪೀಡಿತ ಸುಡಾನ್‌ನಿಂದ (Sudan) ಭಾರತೀಯರನ್ನು (Indians) ವಾಪಸ್ ದೇಶಕ್ಕೆ ಕರೆ ತರುವ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಕಾರ್ಯಾಚರಣೆಗೆ ಆಪರೇಷನ್ ಕಾವೇರಿ (Operation Kaveri) ಎಂದು ಹೆಸರಿಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ. ಅವರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆ ತರಲಾಗುತ್ತದೆ ಎಂದು ಹೇಳಿದ್ದಾರೆ. ಈ ನಡುವೆ, ಸುಡಾನ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ತರಲು ಕೇಂದ್ರ ಸರ್ಕಾರ ಆರಂಭಿಸಿರುವ ಆಪರೇಷನ್ ಕಾವೇರಿ ಯಶಸ್ವಿಯಾಗಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಸುಡಾನ್‌ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಮರಳಿ ಕರೆತರಲು ಆಪರೇಷನ್ ಕಾವೇರಿ ಆರಂಭವಾಗಿದೆ. ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ. ಇನ್ನಷ್ಟು ಜನರು ತಲುಪುವ ಹಂತದಲ್ಲಿದ್ದಾರೆ. ನಮ್ಮ ಹಡಗುಗಳು ಮತ್ತು ವಿಮಾನಗಳು ಅವರನ್ನು ಮನೆಗೆ ಕರೆತರಲು ಸಜ್ಜಾಗಿವೆ. ಸುಡಾನ್‌ನಲ್ಲಿರುವ ನಮ್ಮ ಎಲ್ಲ ಸಹೋದರರಿಗೆ ಸಹಾಯ ಮಾಡಲು ಬದ್ಧರಾಗಿದ್ದೇವೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಜೆಡ್ಡಾದಲ್ಲಿ ಏರ್ ಫೋರ್ಸ್ ಸಿ-130ಜೆ ವಿಮಾನ ಸಜ್ಜಾಗಿದ್ದರೆ, ಐಎನ್ಎಸ್ ಸುಮೇಧ ಹಡಗು ಪೋರ್ಟ್ ಸುಡಾನ್ ತಲುಪಿದೆ ಎಂದು ಭಾರತವು ಭಾನುವಾರ ತಿಳಿಸಿತ್ತು.

ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಟ್ವೀಟ್

ನಾಗರಿಕರ ಸುರಕ್ಷಿತ ಸ್ಥಳಾಂತರದ ಮೊದಲ ಪ್ರಯತ್ನದಲ್ಲಿ ವಿವಿಧ ರಾಷ್ಟ್ರಗಳು ಸುಮಾರು 150ಕ್ಕೂ ಅಧಿಕ ಜನರು ಶನಿವಾರವೇ ಸೌದಿ ಅರೆಬಿಯಾವನ್ನು ತಲುಪಿದ್ದಾರೆ. ಈ ಪೈಕಿ ಸೌದಿಗಳು ಮಾತ್ರವಲ್ಲದೇ, ಭಾರತವು 12 ಇತರ ರಾಷ್ಟ್ರಗಳ ಜನರಿದ್ದಾರೆ. ಸೌದಿ ಅರೇಬಿಯಾದಿಂದ ಸ್ಥಳಾಂತರಿಸಲ್ಪಟ್ಟ ಮೂವರು ಭಾರತೀಯರು ಸೌದಿ ಅರೇಬಿಯಾದ ವಿಮಾನಯಾನ ಸಿಬ್ಬಂದಿಗಳಾಗಿದ್ದಾರೆ.

ಫ್ರಾನ್ಸ್ ಕೂಡ ಭಾರತವು ಸೇರಿದಂತೆ 28 ರಾಷ್ಟ್ರಗಳ 388 ಜನರನ್ನು ರಕ್ಷಿಸಿದೆ. ಕಳೆದ ರಾತ್ರಿ ಎರಡು ಸೇನಾ ವಿಮಾನಗಳು 388 ಜನರನ್ನು ರಕ್ಷಣೆ ಮಾಡಿವೆ ಎಂದು ಭಾರತದಲ್ಲಿರುವ ಫ್ರಾನ್ಸ್ ಧೂತಾವಾಸ ಕಚೇರಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Sudan crisis : ಸೇನಾಪಡೆ ಮತ್ತು ಅರೆ ಸೇನಾಪಡೆ ನಡುವಿನ ಕಾಳಗಕ್ಕೆ ತತ್ತರಿಸಿದ ಬಡ ಸುಡಾನ್, ಏನಿದರ ಹಿನ್ನೆಲೆ?

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರು, ಅಮೆರಿಕದ ಎಲ್ಲ ಸಿಬ್ಬಂದಿ ಮತ್ತು ಅವರ ಕುಟುಂಬಗಳನ್ನು ಸುಡಾನ್‌ನಿಂದ ಸ್ಥಳಾಂತರಿಸಲಾಗಿದೆ. ಹಾಗಾಗಿ, ಖಾರ್ಟೂಮ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 15ರಿಂದ ಸುಡಾನ್ ಸಂಘರ್ಷದಲ್ಲಿ ಬೇಯುತ್ತಿದೆ. ಸುಡಾನ್ ರಾಜಧಾನಿ ಖಾರ್ಟೂಮ್‌ ಸೇರಿದಂತೆ ದೇಶದ ವಿವಿಧೆಡೆ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಗುಂಡಿನ ಕಾಳಗ ಶುರುವಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಧನ್ಯವಾದ

ಯುದ್ಧಗ್ರಸ್ತ ಸುಡಾನ್‌ನಲ್ಲಿ ಕಷ್ಟದಲ್ಲಿ ಸಿಲುಕಿರುವ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದ ಬಂಧುಗಳನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಧನ್ಯವಾದಗಳು. ‘ಆಪರೇಷನ್ ಕಾವೇರಿ’ ಯಶಸ್ಸು ಕಾಣಲಿ, ನೊಂದ ಕುಟುಂಬಗಳು ಸುಖವಾಗಿ ಕರ್ನಾಟಕಕ್ಕೆ ಬರಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್‌ನಲ್ಲಿ ಏನಿದೆ?

Exit mobile version