Site icon Vistara News

Opposition Meet: ಬೆಂಗಳೂರಿನಲ್ಲಿ ಸೇರಲಿರುವ 24 ವಿಪಕ್ಷಗಳ ಮುಖಂಡರು, ಸೋನಿಯಾ ನೇತೃತ್ವದಲ್ಲಿ 2ನೇ ಸಭೆ

Sonia Gandhi

Congress will not attend Ram Mandir inauguration, calls it BJP-RSS event

ಬೆಂಗಳೂರು: ಬರಲಿರುವ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯನ್ನು ವಿರೋಧಿಸುವ ಪಕ್ಷಗಳನ್ನು ಒಗ್ಗೂಡಿಸಲು ಮುಂದಾಗಿರುವ ಕಾಂಗ್ರೆಸ್‌, ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಜುಲೈ 17-18ರಂದು ಬೆಂಗಳೂರಿನಲ್ಲಿ ಸಂಯುಕ್ತ ಒಕ್ಕೂಟದ ಎರಡನೇ ಸಭೆ (Opposition Meet) ನಡೆಯಲಿದ್ದು, 24 ಪಕ್ಷಗಳು ಭಾಗವಹಿಸಲಿವೆ.

ಎರಡು ದಿನ ನಡೆಯಲಿರುವ ವಿರೋಧ ಪಕ್ಷಗಳ ಎರಡನೇ ಸಭೆಗೆ ಆಗಮಿಸುವಂತೆ 24 ಪಕ್ಷಗಳಿಗೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಆಮಂತ್ರಣ ಕಳಿಸಿದ್ದಾರೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೂಡ ಇದರಲ್ಲಿ ಸೇರ್ಪಡೆಯಾಗಿದೆ. ಆಮ್ ಆದ್ಮಿ ಪಕ್ಷಕ್ಕೂ ಆಹ್ವಾನವನ್ನು ನೀಡಲಾಗಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಬೆಂಗಳೂರು ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ರಾಜ್ಯ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಕೂಡ ಇತ್ತೀಚೆಗೆ ಇದನ್ನು ತಿಳಿಸಿದ್ದರು.

ಪಟನಾದಲ್ಲಿ ನಡೆದ ಮೊದಲ ಸಭೆಯಲ್ಲಿ ಸುಮಾರು 17 ಪಕ್ಷಗಳು ಭಾಗವಹಿಸಿದ್ದವು. ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ), ಕೊಂಗು ದೇಸ ಮಕ್ಕಳ್ ಕಚ್ಚಿ (ಕೆಡಿಎಂಕೆ), ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಇಂಡಿಯನ್ ಯೂನಿಯನ್ ಸೇರಿದಂತೆ ಏಳು ಹೊಸ ಪಕ್ಷಗಳಿಗೆ ಈ ಬಾರಿ ಆಹ್ವಾನ ಕಳುಹಿಸಲಾಗಿದೆ. ಇದರಲ್ಲಿ ಮುಸ್ಲಿಂ ಲೀಗ್ (IUML), ಕೇರಳ ಕಾಂಗ್ರೆಸ್ (ಜೋಸೆಫ್) ಮತ್ತು ಕೇರಳ ಕಾಂಗ್ರೆಸ್ (ಮಣಿ) ಕೂಡ ಇವೆ. ಕೆಡಿಎಂಕೆ ಮತ್ತು ಎಂಡಿಎಂಕೆ ಈ ಹಿಂದೆ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಮಿತ್ರಪಕ್ಷಗಳಾಗಿದ್ದವು.

ಜೂನ್ 23ರಂದು ಪಟನಾದಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ, ಶರದ್ ಪವಾರ್ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರು ಭಾಗವಹಿಸಿದ್ದರು. ದೆಹಲಿ ಸುಗ್ರೀವಾಜ್ಞೆ ವಿಚಾರದಲ್ಲಿ ಕಾಂಗ್ರೆಸ್ ತಮ್ಮನ್ನು ಬೆಂಬಲಿಸದಿದ್ದರೆ ವಿಪಕ್ಷಗಳ ಒಕ್ಕೂಟದಿಂದ ಹೊರಬರುವುದಾಗಿ ಆಮ್ ಆದ್ಮಿ ಪಕ್ಷ ಹೇಳಿತ್ತು. ನಂತರ ಕಾಂಗ್ರೆಸ್‌, ಆಪ್‌ ಅಭಿಲಾಷೆಯಂತೆ ನಡೆದುಕೊಂಡಿದೆ.

ಮೊದಲ ಸಭೆಯ ಬಳಿಕ ಇನ್ನೂ ಹಲವು ರಾಜಕೀಯ ಬೆಳವಣಿಗೆಗಳು ಸಂಭವಿಸಿವೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಲ್ಲಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವೆ ಬಿರುಕು ಏರ್ಪಟ್ಟಿದೆ. ಇಬ್ಬರೂ ತಮ್ಮದೇ ನೈಜ ಎನ್‌ಸಿಪಿ ಎಂದು ಹೇಳಿಕೊಂಡಿದ್ದಾರೆ. ಪ್ರತಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಶರದ್ ಪವಾರ್ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. 1ನೇ ಸಭೆಯಲ್ಲಿ ಭಾಗವಹಿಸಿದ್ದ ಅಜಿತ್ ಪವಾರ್ ತಂಡದ ನಾಯಕ ಪ್ರಫುಲ್ ಪಟೇಲ್ ಅವರು ಈ ಸಭೆಯನ್ನು ನಂತರ ಲೇವಡಿ ಮಾಡಿದ್ದರು. ಇಲ್ಲಿರುವ ಎಲ್ಲಾ ಪಕ್ಷಗಳು ವಿಭಿನ್ನ ಅಜೆಂಡಾ ಹೊಂದಿವೆ, ಹೀಗಾಗಿ ಮೈತ್ರಿ ಅಸಾಧ್ಯ ಎಂದಿದ್ದರು. ಅತ್ತ ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಭಾರಿ ಜಯ ಸಾಧಿಸಿದೆ.

ಇದನ್ನೂ ಓದಿ: Opposition Meet: ಬಿಜೆಪಿ ವಿರುದ್ಧ ಒಂದಾದ ಪ್ರತಿಪಕ್ಷಗಳ ದಂಡು ಬೆಂಗಳೂರು ಕಡೆ; ಇಲ್ಲೇ ಮುಂದಿನ ಸಭೆ

Exit mobile version