Site icon Vistara News

ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗೆ ಸ್ಪರ್ಧಿಸಿದ್ದೇನೆ: ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ

yashwanth sinha in karnataka

ಬೆಂಗಳೂರು: ದೇಶದಲ್ಲಿ ಇಂದು ಸಾಂವಿಧಾನಿಕ ಮೌಲ್ಯಗಳು ಆತಂಕದಲ್ಲಿವೆ. ಅವುಗಳ ರಕ್ಷಣೆಗಾಗಿಯೇ ನಾನು ರಾಷ್ಟ್ರಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ ಎಂದು ಮಾಜಿ ಕೇಂದ್ರ ಸಚಿವರು, ಮಾಜಿ ಬಿಜೆಪಿ ನಾಯಕರೂ ಆದ ಯಶವಂತ ಸಿನ್ಹಾ ಭಾನುವಾರ ತಿಳಿಸಿದರು.

ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಯಾಚಿಸಲು ದೇಶದ ವಿವಿಧ ರಾಜ್ಯಗಳ ಪ್ರವಾಸದಲ್ಲಿರುವ ಯಶವಂತ ಸಿನ್ಹಾ, ತೆಲಂಗಾಣ ಪ್ರವಾಸದ ನಂತರ ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನ್ಯಾಯಾಂಗ ಸಂವಿಧಾನಕ್ಕೆ ಮಾತ್ರವೇ ಉತ್ತರದಾಯಿಯಾಗಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಎನ್‌.ವಿ. ರಮಣ ಅವರು ತಿಳಿಸಿರುವುದು ಅತ್ಯಂತ ಸೂಕ್ತವಾಗಿದೆ. ಜೂನ್‌ 27ರಂದು ರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದಾಗಿನಿಂದಲೂ ನಾನೂ ಇದೇ ಮಾತನ್ನು ಹೇಳುತ್ತ ಬಂದಿದ್ದೇನೆ.

ಕಳೆದ ಎಂಟು ವರ್ಷದಿಂದಲೂ ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆಯ ಮೇಲೆ ನಿರಂತರ ಗಧಾಪ್ರಹಾರ ಮಾಡುತ್ತಲೇ ಇದ್ದಾರೆ. ವೈವಿದ್ಯಮಯ ಸಮಾಜವಾದ ಭಾರತವನ್ನು ಈ ಕೋಮುವಾದಿ ನಡೆಯು ವಿಭಜನೆ ಮಾಡುತ್ತಿದೆ. ನೂಪುರ್‌ ಶರ್ಮಾ ಹೇಳಿಕೆಯನ್ನು ಸುಪ್ರೀಂಕೋರ್ಟ್‌ ಖಂಡಿಸಿರುವುದು ಸರಿಯಾಗಿಯೇ ಇದೆ. ಆದರೆ ಬಿಜೆಪಿಯ ಟ್ರೋಲ್‌ಗಳು ಸುಪ್ರೀಂಕೋರ್ಟನ್ನೇ ಟೀಕಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ವಿರುದ್ಧ ಇ.ಡಿ., ಸಿಬಿಐ, ಚುನಾವಣಾ ಆಯೋಗ ಹಾಗೂ ರಾಜ್ಯಪಾಲರ ಕಚೇರಿಗಳನ್ನೂ ಶಸ್ತ್ರಗಳ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ. ಶಿವಸೇನೆ ಶಾಸಕರನ್ನು ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ ಹಾಗೂ ಅಸ್ಸಾಂಗೆ ಕಿಡ್ನಾಪ್‌ ಮಾಡಿ ಕರೆದೊಯ್ಯುವ ಮೂಲಕ ಶಿವಸೇನೆ, ಎನ್‌ಸಿಪಿ ಹಾಗೂ ಶಿವಸೇನೆ ಸರ್ಕಾರವನ್ನು ಕೆಡವಿದೆ. ಈಗಿನ ಕೇಂದ್ರ ಸರ್ಕಾರಕ್ಕೆ ಸಂವಿಧಾನದ ಒಕ್ಕೂಟ ವ್ಯವಸ್ಥೆ ಬಗ್ಗೆ ಯಾವುದೇ ನಂಬಿಕೆ ಇಲ್ಲ. ಕರ್ನಾಟಕದಲ್ಲಿಯೂ ತಮ್ಮ ಸೈದ್ಧಾಂತಿಕ ಅಜೆಂಡಾಕ್ಕೆ ಅನುಗುಣವಾಗಿ ಶಾಲಾ ಪಠ್ಯಪುಸ್ತಕಗಳಿಗೆ ಕೋಮುವಾದವನ್ನು ತುರುಕುತ್ತಿದೆ ಎಂದು ಟೀಕಿಸಿದರು.

ಇದನ್ನೂ ಓದಿ | ನನ್ನ ಅಮ್ಮನ ಬಗ್ಗೆ ತಿಳಿದ್ರೆ ಎಲ್ಲರೂ ಬೆಂಬಲ ಕೊಡ್ತಾರೆ ಎಂದ ದ್ರೌಪದಿ ಮುರ್ಮು ಮಗಳು

ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿ(ದ್ರೌಪದಿ ಮುರ್ಮು) ಕುರಿತು ಸಂಪೂರ್ಣ ಗೌರವವಿದೆ ಎಂದ ಯಶವಂತ ಸಿನ್ಹಾ, ದೇಶದ ಜನರ ಮನಸ್ಸಿನಲ್ಲಿರುವ ಈ ಅಂಶಗಳ ಕುರಿತು ಖಾತ್ರಿ ನೀಡಬೇಕು ಎಂದು ಐದು ಅಂಶಗಳನ್ನು ಪಟ್ಟಿ ಮಾಡಿದರು.

1. ನಾನು ಚುನಾಯಿತನಾದರೆ ಕೇವಲ ಸಂವಿಧಾನಕ್ಕೆ ಉತ್ತರದಾಯಿ ಆಗುತ್ತೇನೆ. ಯಾವುದೇ ಭಯ ಅಥವಾ ಪಕ್ಷಪಾತ ಇಲ್ಲದೆ ನನ್ನ ವಿವೇಚನೆಯನ್ನು ಬಳಕೆ ಮಾಡುತ್ತೇನೆ. ಇಂತಹದ್ದೇ ಆಶ್ವಾಸನೆಯನ್ನು ಪ್ರತಿಸ್ಪರ್ಧಿ ನೀಡಲಿ.

2. ರಾಷ್ಟ್ರಪತಿ ಎಂದಿಗೂ ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕೆ ವಿನಃ ರಬ್ಬರ್‌ ಸ್ಟಾಂಪ್‌ ಆಗಬಾರದು. ಪ್ರತಿಸ್ಪರ್ಧಿ ಅಭ್ಯರ್ಥಿಯೂ ಇಂತಹದ್ದೇ ಆಶ್ವಾಸನೆ ನೀಡಲಿ.

3. ಕರ್ನಾಟಕ, ಮಧ್ಯಪ್ರದೇಶ, ಗೋವಾ, ಮಹಾರಾಷ್ಟ್ರ ಹಾಗೂ ಅನೇಕ ರಾಜ್ಯಗಳಲ್ಲಿ ಆಪರೇಷನ್‌ ಕಮಲದಂತಹ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳನ್ನು ನಡೆಸಲು ಸಹಾಯ ಮಾಡಿದರೆ ಅಂತಹ ಸಮಯದಲ್ಲಿ ಕೇಂದ್ರ ಸರ್ಕಾವನ್ನು ವಿರೋಧಿಸಲು ನಾನು ಹಿಂಜರಿಯುವುದಿಲ್ಲ. ಇಂತಹದ್ದೇ ಬದ್ಧತೆಯನ್ನು ಪ್ರತಿಸ್ಪರ್ಧಿ ತೋರಲಿ.

4. ಭಾರತದಲ್ಲಿ ಕೋಮು ಧೃವೀಕರಣದ ಪ್ರಯತ್ನ ನಡೆದಾಗ ಮುಕ್ತವಾಗಿ ಖಂಡಿಸುತ್ತೇನೆ. ಪ್ರತಿಸ್ಪರ್ಧಿಯೂ ಇಂತಹ ಘೋಷಣೆ ಮಾಡಲಿ.

5. ನಾನು ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಾಂವಿಧಾನಿಕವಾದ ಇತರೆ ಹಕ್ಕುಗಳನ್ನು ರಕ್ಷಣೆ ಮಾಡುತ್ತೇನೆ. ದೇಶದ್ರೋಹಿ ಕಾನೂನನ್ನು ತೆಗೆದುಹಾಕುತ್ತೇನೆ. ಪ್ರತಿಸ್ಪರ್ಧಿಯೂ ಇಂತಹದ್ದೇ ಘೋಷಣೆ ಮಾಡಲಿ. ನಾನು ಪ್ರಚಾರ ಸಭೆಗಳಲ್ಲಿ ಭಾಗವಹಿಸಲು ತೆರಳಿದ ಕಡೆಗಳಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ. ಪ್ರತಿಸ್ಪರ್ಧಿಯೂ ಹೀಗೆಯೇ ಮಾಡಲಿ ಎಂದು ಯಶವಂತ ಸಿನ್ಹಾ ಕೇಳಿದರು.

ಕಾಂಗ್ರೆಸ್‌ ಶಾಸಕಾಂಗ ಸಭೆ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಶವಂತ ಸಿನ್ಹಾ ಬೆಂಬಲ ಕೋರಿದರು

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಯಶವಂತ ಸಿನ್ಹಾ ಆಗಮಿಸಿ ಬೆಂಬಲ ಕೋರಿದರು. ಪ್ರತಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಹಿರಿಯ ಬರಹಗಾರ ಸುಧೀಂದ್ರ ಕುಲಕರ್ಣಿ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಈಶ್ವರ ಖಂಡ್ರೆ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ | ಬಿಜೆಪಿ ಕಾರ್ಯಕಾರಿಣಿಗೆ ಕೆಸಿಆರ್‌ ಕೌಂಟರ್‌; ಬಲ ಪ್ರದರ್ಶನಕ್ಕಾಗಿ ಯಶವಂತ್‌ ಸಿನ್ಹಾರನ್ನು ಕರೆಸಿದ ಸಿಎಂ

Exit mobile version