ನವ ದೆಹಲಿ: ಸರ್ಕಾರಿ ನೌಕರರ ಪಿಂಚಣಿ ವ್ಯವಸ್ಥೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ಹಲವಾರು ರಾಜ್ಯಗಳಲ್ಲಿ ಸರ್ಕಾರಿ ನೌಕರರು ನಡೆಸುತ್ತಿರುವ ಬೃಹತ್ ಪ್ರತಿಭಟನೆಗಳ ನಡುವೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಿಳಿಸಿದ್ದಾರೆ.
ಪಿಂಚಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಕೇಂದ್ರವು ಸಮಿತಿಯನ್ನು ರಚಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ತಿಳಿಸಿದ್ದಾರೆ. ಹಣಕಾಸು ವಿಧೇಯಕ-2023 ಅನ್ನು ಪರಿಗಣನೆಗಾಗಿ ಮಂಡಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ ಎಂದು ನುಡಿದರು.
ಈ ಪಿಂಚಣಿ ಸಮಸ್ಯೆಯನ್ನು ಪರಿಶೀಲಿಸಲು ಹಣಕಾಸು ಕಾರ್ಯದರ್ಶಿ ಅಡಿಯಲ್ಲಿ ಸಮಿತಿಯನ್ನು ಸ್ಥಾಪಿಸಲು ನಾನು ಪ್ರಸ್ತಾಪಿಸುತ್ತೇನೆ. ಹಣಕಾಸಿನ ಶಿಸ್ತನ್ನು ಉಳಿಸಿಕೊಂಡು, ಶ್ರೀಸಾಮಾನ್ಯರ ರಕ್ಷಣೆಗಾಗಿ ಅಗತ್ಯ ವಿಧಾನವನ್ನು ವಿಕಸನಗೊಳಿಸಬೇಕಿದೆ. ಈ ವಿಧಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಕಡೆಯೂ ಅಳವಡಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.
2004ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು (OPS) ಸ್ಥಗಿತಗೊಳಿಸಿ ನೂತನ ಪಿಂಚಣಿ ಯೋಜನೆಯನ್ನು (NPS)ಪರಿಚಯಿಸಿತು. ಹಳೆಯ ವಿಧಾನದಲ್ಲಿ, ಪಿಂಚಣಿಯು ನೌಕರನ ಕೊನೆಯ ಸಂಬಳದ ಶೇಕಡಾ 50ರಷ್ಟಿತ್ತು ಮತ್ತು ಸಂಪೂರ್ಣ ಮೊತ್ತವನ್ನು ಸರ್ಕಾರವು ಪಾವತಿಸುತ್ತಿತ್ತು. ಎನ್‌ಪಿಎಸ್‌ನಲ್ಲಿ ಇದು ನೌಕರರ ಕೊಡುಗೆ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಇಲ್ಲಿ ಸರ್ಕಾರಿ ನೌಕರರು ತಮ್ಮ ಸಂಬಳದ 10 ಪ್ರತಿಶತವನ್ನು ನಿವೃತ್ತಿ ನಿಧಿಗೆ ನೀಡಬೇಕಾಗುತ್ತದೆ. ಪಿಂಚಣಿ ನಿಧಿಗೆ ಸರ್ಕಾರ ಶೇಕಡಾ 14ರವರೆಗೆ ನೀಡುತ್ತದೆ.
ಇತ್ತೀಚಿನ ತಿಂಗಳುಗಳಲ್ಲಿ, ಹೊಸ ಪಿಂಚಣಿ ಯೋಜನೆಯನ್ನು ವಿರೋಧಿಸಿ ಹಲವಾರು ರಾಜ್ಯಗಳು ಸರ್ಕಾರಿ ನೌಕರರ ಪ್ರತಿಭಟನೆಗಳನ್ನು ಕಂಡಿವೆ ಮತ್ತು OPSಗೆ ಹಿಂತಿರುಗುವಂತೆ ಒತ್ತಾಯಿಸಿವೆ. ಐದು ಬಿಜೆಪಿಯೇತರ ರಾಜ್ಯಗಳಾದ ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳು ಹಳೆಯ ಪಿಂಚಣಿ ಯೋಜನೆಗೆ ಹಿಂತಿರುಗುವ ನಿರ್ಧಾರವನ್ನು ಕೇಂದ್ರಕ್ಕೆ ತಿಳಿಸಿವೆ.
ಇದನ್ನೂ ಓದಿ: OPS vs NPS : ಎನ್‌ಪಿಎಸ್ vs ಒಪಿಎಸ್, ಅಂತಿಮವಾಗಿ ಯಾವುದು ಬೆಸ್ಟ್