ಬೆಂಗಳೂರು: ನಮ್ಮಲ್ಲಿ ಒಂದಿಷ್ಟು ಮಂದಿ ಚಹಾ ಪ್ರಿಯರಾದರೆ, ಒಂದಿಷ್ಟು ಮಂದಿ ಕಾಫಿ ಪ್ರಿಯರು. ಭಾರತದಲ್ಲಿ ಚಹಾಕ್ಕೆ ಇರುವಷ್ಟು ಅಭಿಮಾನಿಗಳು ಕಾಫಿಗೆ ದಕ್ಕದಿದ್ದರೂ, ಕಾಫಿಗೆ ಅದರದ್ದೇ ಆದ ಅಭಿಮಾನಿಗಳಿದ್ದಾರೆ. ಯಾರೆಷ್ಟೇ ಹೇಳಲಿ, ಆರೋಗ್ಯಕ್ಕೆ ಒಳ್ಳೆಯದಲ್ಲವೆನ್ನಲಿ, ಕಾಫಿ, ಚಹಾಗಳಂತಹ ಪೇಯಗಳನ್ನು ಅಷ್ಟು ಸುಲಭದಲ್ಲಿ ಬಿಡುವುದು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ಇತ್ತೀಚೆಗಷ್ಟೇ ಭಾರತದ ಮಸಾಲೆ ಚಹಾ ವಿಶ್ವದಾದ್ಯಂತ ಸುದ್ದಿ ಮಾಡಿದಂತೆ ಈಗ ಕಾಫಿಗೂ ಸುದ್ದಿಯಾಗುವ ಕಾಲ ಬಂದಿದೆ. ಕಾಫಿ ಪ್ರಿಯರಿಗೆ ಇದು ಸಿಹಿ ಸುದ್ದಿ. ಭಾರತದ ಅದರಲ್ಲೂ ದಕ್ಷಿಣ ಭಾರತದ ಫಿಲ್ಟರ್ ಕಾಫಿ (Filter Coffee) ಪ್ರಪಂಚದಲ್ಲೇ ಜನರು ಅತ್ಯಂತ ಇಷ್ಟಪಡುವ ಪೇಯಗಳ ಪೈಕಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಕಾಫಿಯಿಂದಲೇ ಬೆಳಗು
ದಕ್ಷಿಣ ಭಾರತದಲ್ಲಿ ಬಹುತೇಕರ ದಿನ ಆರಂಭವಾಗುವುದು ಕಾಫಿಯಿಂದಲೇ. ಒಂದು ಅಂದಾಜಿನ ಪ್ರಕಾರ ಪ್ರಪಂಚದಲ್ಲಿ 2.25 ಬಿಲಿಯನ್ ಕಪ್‌ಗಳಷ್ಟು ಕಾಫಿ ಪ್ರತಿನಿತ್ಯವೂ ಸೇವಿಸಲ್ಪಡುತ್ತದೆಯಂತೆ! ಇನ್ನೊಂದು ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ ಶೇ. 50ರಷ್ಟು ಮಂದಿ ದಿನಕ್ಕೆ ಒಮ್ಮೆಯಾದರೂ ಕಾಫಿ ಕುಡಿಯುತ್ತಾರಂತೆ. ಹಾಗಾಗಿ ಕಾಫಿ ಎಂಬ ಕೆಫಿನ್‌ಯುಕ್ತ ಡ್ರಿಂಕ್ ಅನ್ನು ನಾವೆಷ್ಟು ಪ್ರೀತಿಸುತ್ತೇವೆ ಎಂಬುದು ಜಗಜ್ಜಾಹೀರು.
ಟೇಸ್ಟ್ ಅಟ್ಲಾಸ್ ಆನ್‌ಲೈನ್‌ನಲ್ಲಿ ನಡೆಸುವ ಓಟಿಂಗ್‌ನಲ್ಲಿ ಪ್ರಪಂಚದ ಬಗೆಬಗೆಯ ಕಾಫಿಗಳು ಪಟ್ಟಿಯಲ್ಲಿದ್ದವು. ಅವುಗಳ ಪೈಕಿ ದಕ್ಷಿಣ ಭಾರತದ ಫಿಲ್ಟರ್ ಕಾಫಿಯೂ ಒಂದು. ಕ್ಯೂಬಾದ ಕೆಫೆ ಕ್ಯುಬಾನೋನ ಸಿಹಿಯಾದ ಎಸ್‌ಪ್ರೆಸೋ ಶಾಟ್ ಜಗತ್ತಿನ ಅತ್ಯಂತ ಫೇವರಿಟ್ ಕಾಫಿಯಾಗಿ ಹೊರಹೊಮ್ಮುವ ಮೂಲಕ ಮೊದಲ ಸ್ಥಾನ ಪಡೆದರೆ, ದಕ್ಷಿಣ ಭಾರತೀಯರ ಫಿಲ್ಟರ್ ಕಾಫಿ ಎರಡನೇ ಸ್ಥಾನ ಪಡೆದುಕೊಂಡಿದೆ. ಹಾಲು ಹಾಕಿದ ನೊರೆನೊರೆಯಾದ ಕಾಫಿಯನ್ನು ದಕ್ಷಿಣ ಭಾರತೀಯ ಬೆಳಗಿನ ಉಪಹಾರದ ಜತೆ ಸೇವಿಸುವುದೆಂದರೆ ಅದು ಸ್ವರ್ಗ ಎಂದು ಫಿಲ್ಟರ್ ಕಾಫಿ ಪ್ರಿಯರು ಇಲ್ಲಿ ಕಾಫಿಯನ್ನು ಕೊಂಡಾಡಿದ್ದಾರೆ.
ಟಾಪ್ ಟೆನ್ ಪಟ್ಟಿಯಲ್ಲಿ ಯಾವ ದೇಶಗಳಿವೆ?
ಗ್ರೀಕ್ ಎಸ್‌ಪ್ರೆಸೋ ಫ್ರೆಡೋ ಹಾಗೂ ಫ್ರೆಡೋ ಕ್ಯಾಪಚಿನೋನ ನೊರೆಯಾದ ಹಾಗೂ ವಿಪ್ ಮಾಡಿದ ಕಾಫಿಗಳೆರಡು ಮೂರನೇ ಹಾಗೂ ನಾಲ್ಕನೇ ಸ್ಥಾನ ಗಳಿಸಿಕೊಂಡರೆ, ಐದನೇ ಸ್ಥಾನದಲ್ಲಿ ಸ್ಪಾನಿಶ್ ಕೆಫೆ ಬೋಂಬೋಮ್ ಇದೆ. ಈ ಕಾಫಿಯಲ್ಲಿ ಎರಡು ಬಗೆಯ ಲೇಯರ್‌ಗಳಿದ್ದು, ಈ ಲೇಯರ್‌ಗಳಲ್ಲಿ ಎಸ್‌ಪ್ರೆಸೋ ಹಾಗೂ ಕಂಡೆನ್ಸ್‌ಡ್ ಮಿಲ್ಕ್ ಪ್ರತ್ಯೇಕವಾಗಿ ಇರುತ್ತವೆ.
ಟಾಪ್ ಟೆನ್ ಪಟ್ಟಿಯಲ್ಲಿ ಇಟಲಿಯ ಕ್ಯಾಪಚಿನೋ, ಟರ್ಕಿಶ್ ಕಾಫಿ, ಇಟಲಿಯ ರಿಸ್ಟೆಟೋ, ಗ್ರೀಸ್‌ನ ಪ್ರೆಪ್ಪೆ ಕಾಫಿ, ವಿಯೆಟ್ನಾಂನ ವಿಯೆಟ್ನಾಮೀಸ್ ಕಾಫಿ ಇವೆ. ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಹೆಸರುಗಳನ್ನು ಗಮನಿಸಿದರೆ, ಪ್ರಪಂಚದಾದ್ಯಂತ ಬಹುತೇಕರು ಬ್ಲ್ಯಾಕ್ ಕಾಫಿಗಿಂತಲೂ ಹಾಲು ಹಾಕಿದ ಕಾಫಿಯನ್ನೇ ಇಷ್ಟಪಡುತ್ತಾರೆ ಎಂದು ಸಾಬೀತಾಗುತ್ತದೆ.
ಫಿಲ್ಟರ್ ಕಾಫಿಯ ವೈಶಿಷ್ಟ್ಯ
ದಕ್ಷಿಣ ಭಾರತದ ಫಿಲ್ಟರ್ ಕಾಫಿಗೆ ಹಲವು ಹೆಸರುಗಳಿವೆ. ಡಿಗ್ರಿ ಕಾಫಿ, ಮೀಟರ್ ಕಾಫಿ, ಮೈಸೂರು ಕಾಫಿ ಹಾಗೂ ಮದ್ರಾಸ್ ಕಾಫಿ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಸ್ಟೇನ್‌ಲೆಸ್ ಸ್ಟೀಲ್‌ನಿಂದ ತಯಾರಿಸಿದ ಫಿಲ್ಟರ್ ಯಂತ್ರವನ್ನು ಬಳಸಿ ಕಾಫಿ ತಯಾರಿಸಲಾಗುತ್ತದೆ. ಕಾಫಿ ಯಂತ್ರದಲ್ಲಿ ಎರಡು ವಿಭಾಗಗಳು ಇರುತ್ತವೆ. ಮೇಲ್ಭಾಗದಲ್ಲಿ ರಂಧ್ರ ಇದ್ದರೆ, ಕೆಳ ಭಾಗದಲ್ಲಿ ಕಾಫಿ ಸಂಗ್ರಹಿಸುವ ವಿಭಾಗ ಇರುತ್ತದೆ. ಕುದಿಸಿದ ಕಾಫಿಯು ನಿಧಾನವಾಗಿ ತೊಟ್ಟಿಕ್ಕುತ್ತದೆ. ಬಳಿಕ ಅದನ್ನು ಕಾಫಿಯಾಗಿ ಬಳಸಲಾಗುತ್ತದೆ.
ಇದನ್ನೂ ಓದಿ: Indian Coffee: ದಕ್ಷಿಣ ಭಾರತದ ಫಿಲ್ಟರ್ ಕಾಫಿ ವಿಶ್ವದಲ್ಲೇ ಟಾಪ್ 2; ಫಸ್ಟ್ ಯಾವುದು?