Site icon Vistara News

Formers MPs: ಚುನಾವಣೆಯಲ್ಲಿ ಸೋತರೂ ಸರ್ಕಾರಿ ಬಂಗಲೆ ಬಿಡದ 200 ಮಾಜಿ ಸಂಸದರು; ನೋಟಿಸ್‌ ಜಾರಿ

Former MPs

Over 200 former Lok Sabha MPs get eviction notices to vacate official bungalows in Delhi: Report

ನವದೆಹಲಿ: ಕಳೆದ ಲೋಕಸಭೆ ಚುನಾವಣೆ (Lok Sabha Election 2024) ಸೋಲು ಸೇರಿ ಹಲವು ಕಾರಣಗಳಿಂದಾಗಿ ಮಾಜಿಗಳಾಗಿರುವ ಸಂಸದರಿಗೆ (Formers MPs) ಸರ್ಕಾರಿ ಬಂಗಲೆಗಳನ್ನು ತೊರೆಯಲು ಮನಸ್ಸೇ ಬರುತ್ತಿಲ್ಲ. ಹೌದು, ಲುಟಿಯೆನ್ಸ್‌ ದೆಹಲಿಯಲ್ಲಿರುವ (Lutyens’ Delhi) ಬಂಗಲೆಗಳನ್ನು ತೊರೆಯುವಂತೆ ಸುಮಾರು 200ಕ್ಕೂ ಅಧಿಕ ಲೋಕಸಭೆ ಮಾಜಿ ಸಂಸದರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಶೀಘ್ರದಲ್ಲೇ ಬಂಗಲೆಗಳನ್ನು ತೊರೆಯಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

“ಮಾಜಿ ಸಂಸದರಾದರೂ ಇದುವರೆಗೆ ಬಂಗಲೆಗಳನ್ನು ಖಾಲಿ ಮಾಡಿಲ್ಲ. ಹಾಗಾಗಿ, ಇದುವರೆಗೆ 200ಕ್ಕೂ ಅಧಿಕ ಮಾಜಿ ಸಂಸದರಿಗೆ ಎವಿಕ್ಷನ್‌ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಹಾಗೆಯೇ, ಇನ್ನೂ ಹೆಚ್ಚಿನ ಸಂಸದರು ಬಂಗಲೆಗಳನ್ನು ಖಾಲಿ ಮಾಡಿಲ್ಲ. ಅವರಿಗೂ ನೋಟಿಸ್‌ಗಳನ್ನು ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ” ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿವೆ. ಮಾಜಿ ಸಂಸದರು ಬಂಗಲೆಗಳನ್ನು ಖಾಲಿ ಮಾಡದ ಕಾರಣ ನೂತನ ಸಂಸದರಿಗೆ ವಸತಿ ವ್ಯವಸ್ಥೆ ಮಾಡಲು ಕಷ್ಟವಾಗುತ್ತಿದೆ ಎಂದು ತಿಳಿದುಬಂದಿದೆ.

ಬಲವಂತದ ತೆರವಿಗೂ ಸಜ್ಜು

ಬಂಗಲೆ ತೊರೆಯುವಂತೆ ನೋಟಿಸ್‌ ಜಾರಿಗೊಳಿಸಿದರೂ ಮಾಜಿ ಸಂಸದರು ಮನೆಗಳನ್ನು ಖಾಲಿ ಮಾಡದಿದ್ದರೆ, ಬಲವಂತವಾಗಿ ಅಲ್ಲಿಂದ ತೆರವುಗೊಳಿಸಲು ಕೂಡ ಸಚಿವಾಲಯವು ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ನೂತನ ಸಂಸದರಿಗೆ ಮನೆಗಳನ್ನು ಹಂಚಿಕೆ ಮಾಡಲು ಆಗದ ಕಾರಣ, ಮಾಜಿ ಸಂಸದರು ಬಂಗಲೆಗಳನ್ನು ಖಾಲಿ ಮಾಡದಿದ್ದರೆ, ಅಧಿಕಾರಿಗಳನ್ನು ಕಳುಹಿಸಿ, ಬಂಗಲೆಗಳಲ್ಲಿರುವ ಪೀಠೋಪಕರಣಗಳನ್ನು ಹೊರಗೆ ಹಾಕಿ, ಬಲವಂತವಾಗಿ ಮಾಜಿ ಸಂಸದರನ್ನು ತೆರವುಗೊಳಿಸಲು ಚಿಂತನೆ ನಡೆದಿದೆ ಎಂದು ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.

ನಿಯಮಗಳ ಪ್ರಕಾರ, ಯಾವುದೇ ಲೋಕಸಭೆ ಸದಸ್ಯರು, ತಮ್ಮ ಸ್ಥಾನ ಕಳೆದುಕೊಂಡ ನಂತರದ ಒಂದು ತಿಂಗಳೊಳಗೆ ಸರ್ಕಾರದ ಬಂಗಲೆಯನ್ನು ತೊರೆಯಬೇಕು ಎಂಬ ನಿಯಮವಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತವರು, ಚುನಾವಣೆ ವೇಳೆ ಟಿಕೆಟ್‌ ಸಿಗದವರು ಈಗ ಮಾಜಿಗಳಾಗಿದ್ದಾರೆ. ಲೋಕಸಭೆ ಸಚಿವಾಲಯವು ಸಂಸದರಿಗೆ ಬಂಗಲೆಗಳನ್ನು ವಿನಿಯೋಗ ಮಾಡುತ್ತದೆ. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಕೇಂದ್ರ ಸಚಿವರಿಗೆ ಲುಟಿಯೆನ್ಸ್‌ ದೆಹಲಿಯಲ್ಲಿ ಬಂಗಲೆಗಳನ್ನು ಹಂಚಿಕೆ ಮಾಡುತ್ತದೆ.

ಇದನ್ನೂ ಓದಿ: Amitabh Bachchan: ಹರಾಜಿಗಿದೆ ಅಮಿತಾಭ್ ಭವ್ಯ ಬಂಗಲೆ; ದರ ಎಷ್ಟು ನೋಡಿ!

Exit mobile version