ಪಟನಾ: ಸರ್ಕಾರದ ಹಣ ಕೊಳ್ಳೆ ಹೊಡೆಯಲು ಅಧಿಕಾರಿಗಳು ಏನೆಲ್ಲ ಮಾಡುತ್ತಾರೆ, ಎಂತಹ ಹೀನ ಕೃತ್ಯ ಎಸಗುತ್ತಾರೆ ಎಂಬುದಕ್ಕೆ ಬಿಹಾರದಲ್ಲಿ (Bihar) ಬಯಲಿಗೆ ಬಂದ ಅಕ್ರಮವೇ ಸಾಕ್ಷಿಯಾಗಿದೆ. ಹೌದು, ಬಿಹಾರದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ದಾಖಲೆಯಲ್ಲಿರುವ 5 ಲಕ್ಷ ವಿದ್ಯಾರ್ಥಿಗಳು (Students) ಶಾಲೆಯಲ್ಲಿ ಇಲ್ಲ. ವರ್ಷಕ್ಕೆ 300 ಕೋಟಿ ರೂ. ಲಪಟಾಯಿಸಲು ಅಧಿಕಾರಿಗಳು ಸೇರಿ ಹಲವರು ನಕಲಿ ದಾಖಲೆ ಸೃಷ್ಟಿಸಿದ್ದು, ಇದರಿಂದ ಸರ್ಕಾರಕ್ಕೆ ನಷ್ಟವಾಗಿದೆ.
ಬಿಹಾರದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಮಸ್ಯೆ ಸೇರಿ ಹಲವು ವಿಷಯಗಳ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ತನಿಖೆ, ವಿಚಾರಣೆ, ಪರಿಶೀಲನೆ ನಡೆಸಿದಾಗ ಅಧಿಕಾರಿಗಳ ಭ್ರಷ್ಟಾಚಾರದ ಮುಖ ಅನಾವರಣಗೊಂಡಿದೆ ಎಂದು ತಿಳಿದುಬಂದಿದೆ. ಸುಮಾರು 5 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದು, ಅವರಿಗೆ ವಾರ್ಷಿಕ 300 ಕೋಟಿ ರೂ. ಖರ್ಚಾಗುತ್ತಿದೆ ಎಂಬುದಾಗಿ ಬಿಲ್ ತೋರಿಸಿ, ಅಷ್ಟೂ ಹಣ ಲಪಟಾಯಿಸಿರುವ ಪ್ರಕರಣವು ತನಿಖೆ ಬಳಿಕ ಬೆಳಕಿಗೆ ಬಂದಿದೆ.
ಸರ್ಕಾರದ ಖಜಾನೆಗೆ ನೂರಾರು ಕೋಟಿ ರೂ. ನಷ್ಟ ಮಾಡಿರುವ ಪ್ರಕರಣ ಬಯಲಿಗೆ ಬರುತ್ತಲೇ ಸರ್ಕಾರದ ದಾಖಲೆಗಳಿಂದ 5 ಲಕ್ಷ ವಿದ್ಯಾರ್ಥಿಗಳ ಹೆಸರುಗಳನ್ನು ತೆರವುಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. “ಶಾಲೆಗಳಿಗೆ ದಿಢೀರ್ ಭೇಟಿ ನೀಡುವುದು, ದಾಖಲೆಗಳನ್ನು ಪರಿಶೀಲನೆ ಮಾಡುವುದು, ಮಕ್ಕಳ ಹಾಜರಾತಿ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿದಾಗ ಅಕ್ರಮ ನಡೆದಿರುವುದು ಬಯಲಾಗಿದೆ” ಎಂದು ಬಿಹಾರ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ ಕೆ.ಕೆ. ಪಾಠಕ್ ತಿಳಿಸಿದ್ದಾರೆ.
ಹಗರಣ ನಡೆದಿದ್ದು ಹೇಗೆ?
ಸರ್ಕಾರಿ ಶಾಲೆಗಳಲ್ಲಿ ಇಷ್ಟು ಮಕ್ಕಳು ಓದುತ್ತಿದ್ದಾರೆ ಎಂಬುದಾಗಿ ನಕಲಿ ದಾಖಲಾತಿ ಮಾಡಿಕೊಳ್ಳಲಾಗಿದೆ ಹಾಗೂ ಒಂದಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಹಾಜರಾಗದೆ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು, ಸರ್ಕಾರಿ ಶಾಲೆಗಳಲ್ಲಿ 5 ಲಕ್ಷ ಮಕ್ಕಳು ಓದುತ್ತಿದ್ದಾರೆ ಎಂಬುದಾಗಿ ವರದಿ ನೀಡಿ, ವರ್ಷಕ್ಕೆ 300 ಕೋಟಿ ರೂ. ನುಂಗಿ ನೀರು ಕುಡಿದಿದ್ದಾರೆ ಎಂದು ತಿಳಿದುಬಂದಿದೆ. ಬಿಹಾರ ಸರ್ಕಾರವು ಶಾಲಾ ಮಕ್ಕಳ ಏಳಿಗೆಗೆ ವರ್ಷಕ್ಕೆ 3 ಸಾವಿರ ಕೋಟಿ ರೂ. ಖರ್ಚು ಮಾಡುತ್ತದೆ.