ನವ ದೆಹಲಿ: ನಮ್ಮ ದೇಶದ ಶೇಕಡ 40ರಷ್ಟು ಸಂಪತ್ತು ಇಲ್ಲಿನ ಶೇಕಡ 1ರಷ್ಟು ಶ್ರೀಮಂತರ ಬಳಿ ಇದೆ ಎಂದು ನೂತನ ಅಧ್ಯಯನ ತೋರಿಸಿದೆ. ವಿಶ್ವ ಆರ್ಥಿಕ ಫೋರಂನ ವಾರ್ಷಿಕ ಸಮಾವೇಶದಲ್ಲಿ ಈ ವರದಿಯನ್ನು ಸಾಮಾಜಿಕ ಹಕ್ಕುಗಳ ವೇದಿಕೆ Oxfam ಮಂಡಿಸಿದೆ.
ಬಡ, ಕೆಳಮಧ್ಯಮ ವರ್ಗದಲ್ಲಿರುವ ಶೇ.50ರಷ್ಟು ಜನರ ಬಳಿ ದೇಶದ ಒಟ್ಟಾರೆ ಶೇಕಡ 3ರಷ್ಟು ಸಂಪತ್ತು ಮಾತ್ರ ಇದೆ ಎಂದೂ ಈ ವರದಿ ತೋರಿಸಿದೆ. ದೇಶದ ಹತ್ತು ಅತಿ ಶ್ರೀಮಂತರ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಿದರೂ ಸಾಕು, ಅದು ಶಾಲೆ ತೊರೆದ ಮಕ್ಕಳನ್ನೆಲ್ಲ ಶಾಲೆಗೆ ಮರಳಿ ಕರೆತರಲು ಸಾಕಾದೀತು ಎಂದೂ ಅದು ಲೆಕ್ಕಾಚಾರ ಹಾಕಿದೆ.
ಈ ವರದಿಗೆ ʼಅತಿಶ್ರೀಮಂತರ ಉಳಿವುʼ (Survival of richest) ಎಂದು ಹೆಸರಿಡಲಾಗಿದ್ದು, ಇನ್ನೂ ಹಲವಾರು ಕುತೂಹಲಕಾರಿ ಅಂಕಿಅಂಶಗಳನ್ನು ಈ ವರದಿ ಮಂಡಿಸಿದೆ. ಅವು ಹೀಗಿವೆ:
- 2017ರಿಂದ 2021ರವರೆಗೆ ಬಿಲಿಯನೇರ್ ಗೌತಮ್ ಅದಾನಿ ಗಳಿಸಿದ ಸಂಪತ್ತಿನ ಮೇಲೆ ಸರಿಯಾದ ತೆರಿಗೆ ವಿಧಿಸಿದರೆ, ಅದು 1.79 ಲಕ್ಷ ಕೋಟಿಗಳಷ್ಟು ಆದಾಯವನ್ನು ಸರ್ಕಾರಕ್ಕೆ ತರಬಹುದು ಹಾಗೂ ಇದು ದೇಶದ 50 ಲಕ್ಷ ಪ್ರಾಥಮಿ ಶಾಲಾ ಶಿಕ್ಷಕರಿಗೆ ಒಂದು ವರ್ಷದ ವೇತನ ಕೊಡಲು ಸಾಕು!
- ದೇಶದ ಬಿಲಿಯನೇರ್ಗಳ ಒಟ್ಟಾರೆ ಆಸ್ತಿಯ ಮೇಲೆ ಒಂದು ಬಾರಿ ಶೇ.2ರಷ್ಟು ತೆರಿಗೆ ವಿಧಿಸಿದರೂ ಅದು 40,423 ಕೋಟಿ ರೂ. ತರಲಿದ್ದು, ಅಪೌಷ್ಟಿಕತೆಯಿಂದ ನರಳುತ್ತಿರುವ ದೇಶದ ಎಲ್ಲ ಮಕ್ಕಳಿಗೆ ಮುಂದಿನ ಮೂರು ವರ್ಷಗಳ ಕಾಲ ಪೌಷ್ಟಿಕ ಆಹಾರ ಒದಗಿಸಲು ಸಾಕು.
- ದೇಶದ ಹತ್ತು ಬಿಲಿಯನೇರ್ಗಳ ಆಸ್ತಿಯ ಮೇಲೆ ಒಂದು ಸಲಕ್ಕೆ ಶೇ.5 ತೆರಿಗೆ ವಿಧಿಸಿದರೂ, (1.37 ಲಕ್ಷ ಕೋಟಿ ರೂ.) ಅದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್ ಇಲಾಖೆಗಳ ಈ ವರ್ಷದ ಬಜೆಟ್ ಮೊತ್ತವನ್ನು ಮೀರುತ್ತದೆ. (89,250 ಕೋಟಿ ರೂ.)
- ದೇಶದಲ್ಲಿ ಒಬ್ಬ ಪುರುಷ ಉದ್ಯೋಗಿ ಗಳಿಸುವ 1 ರೂಪಾಯಿಗೆ ಪ್ರತಿಯಾಗಿ ಮಹಿಳಾ ಉದ್ಯೋಗಿಯು 63 ಪೈಸೆ ಮಾತ್ರ ಗಳಿಸುತ್ತಾಳೆ.
- ಪರಿಶಿಷ್ಟ ಜಾತಿಯ ಕಾರ್ಮಿಕರು ಮೇಲ್ವರ್ಗದ ಕಾರ್ಮಿಕರ ಶೇ.55ರಷ್ಟು, ಗ್ರಾಮೀಣ ಕಾರ್ಮಿಕರು ಪಟ್ಟಣ ಕಾರ್ಮಿಕರ ಶೇ.50ರಷ್ಟು ಮಾತ್ರ ಕೂಲಿಯನ್ನು ಗಳಿಸುತ್ತಾರೆ.
- ಕೊರೊನಾ ಸಾಂಕ್ರಾಮಿಕ ಶುರುವಾದ ಬಳಿಕ 2022ರ ನವೆಂಬರ್ವರೆಗೂ ಭಾರತದ ಬಿಲಿಯನೇರ್ಗಳ ಶ್ರೀಮಂತಿಕೆ ಶೇ.121ರಷ್ಟು ಅಥವಾ ಪ್ರತಿದಿನಕ್ಕೆ 3,068 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.
- ಆದರೆ ಹೆಚ್ಚಿನ ತೆರಿಗೆ ಬರುತ್ತಿರುವುದು ಈ ಬಿಲಿಯನೇರ್ಗಳಿಂದಲ್ಲ. 14.83 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹದ ಶೇ.64ರಷ್ಟು ಭಾಗ ಬಂದಿರುವುದು ತಳಮಟ್ಟದ ಶೇ.50 ಜನರಿಂದ. ಅತಿ ಕುಬೇರರಿಂದ ಬಂದಿರುವ ಜಿಎಸ್ಟಿಯ ಪ್ರಮಾಣ ಶೇ.3 ಮಾತ್ರ.
- 2020ರಲ್ಲಿ ಭಾರತದಲ್ಲಿ 102 ಬಿಲಿಯನೇರ್ಗಳಿದ್ದರೆ, 2022ರಲ್ಲಿ ಅದು 166ಕ್ಕೆ ಏರಿದೆ. ದೇಶದ 100 ಅತಿ ಶ್ರೀಮಂತರ ಸಂಪತ್ತಿನ ಪ್ರಮಾಣ 54.12 ಲಕ್ಷ ಕೋಟಿ ರೂ.ಗಳಾಗಿದೆ. ಇದು, ಇಡೀ ದೇಶದ ಬಜೆಟ್ ಅನ್ನು 18 ತಿಂಗಳ ಕಾಲ ನಿಭಾಯಿಸಬಲ್ಲುದಾಗಿದೆ.
ಕುಬೇರರ ಈ ಶ್ರೀಮಂತಿಕೆಗೆ ಈ ದೇಶದ ಬಡವರು, ಆದಿವಾಸಿಗಳು, ಮುಸ್ಲಿಮರು, ದಲಿತರು, ಮಹಿಳೆಯರು ಬೆಲೆ ತೆರುತ್ತಿದ್ದಾರೆ ಎಂದು ವರದಿ ಹೇಳಿದೆ. ಬಡವರು ಅನ್ಯಾಯಭರತವಾದ ತೆರಿಗೆ ತೆರುತ್ತಿದ್ದಾರೆ. ಅಗತ್ಯ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗಿದ್ದು, ಅವರು ಹೆಚ್ಚು ವೆಚ್ಚ ಮಾಡಬೇಕಾಗಿ ಬಂದಿದೆ. ಹೀಗಾಗಿ ಶ್ರೀಮಂತರ ಮೇಲೆ ವೆಲ್ತ್ ಟ್ಯಾಕ್ಸ್ ವಿಧಿಸಬೇಕಾದ ಸಮಯ ಈಗ ಬಂದಿದೆ. ವೆಲ್ತ್ ಟ್ಯಾಕ್ಸ್ ವಿಧಿಸಿದರೆ ಅದು ಕೆಳವರ್ಗಗಳ ಮೇಲೆ ಇಳಿಯುತ್ತದೆ ಎಂಬ ಮಿಥ್ ಅನ್ನು ಹಬ್ಬಿಸಲಾಗಿದೆ. ಅಸಮಾನತೆಯನ್ನು ನಿರ್ಮೂಲನ ಮಾಡಲು, ಸಂತೋಷಕರ ಸಮಾಜದ ನಿರ್ಮಾಣಕ್ಕಾಗಿ ಶ್ರೀಮಂತರಿಗೆ ತೆರಿಗೆ ವಿಧಿಸುವುದು ಅಗತ್ಯ ಎಂದು ವರದಿಯಲ್ಲಿ ತಿಳಿಸಲಾಗಿದೆ.