Site icon Vistara News

Darshanam Mogulaiah: 2 ವರ್ಷದ ಹಿಂದೆ ಪದ್ಮಶ್ರೀ ಪಡೆದ ಸಾಧಕ ಈಗ ಹೊಟ್ಟೆಪಾಡಿಗಾಗಿ ಕೂಲಿ ಕಾರ್ಮಿಕ!

Darshanam Mogulaiah

Padma Shri Awardee Darshanam Mogulaiah Now A Dailywager

ಹೈದರಾಬಾದ್: ಭಾರತದಲ್ಲಿ ಕಲಾವಿದರಿಗೆ, ಸಾಧಕರಿಗೆ ಒಂದೋ ಅತಿಯಾದ ಗೌರವ ಸಿಗುತ್ತದೆ. ಇಲ್ಲದಿದ್ದರೆ, ಅವರ ಜೀವನವೇ ಸಂಕಷ್ಟಕ್ಕೆ ಸಿಲುಕಿದರೂ ಅವರು ಮುಖ್ಯವಾಹಿನಿಯಲ್ಲಿ ಇರುವುದಿಲ್ಲ. ಅವರಿಗೆ ಸಹಾಯಹಸ್ತ ಚಾಚುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಎರಡು ವರ್ಷಗಳ ಹಿಂದಷ್ಟೇ ಪದ್ಮಶ್ರೀ ಪ್ರಶಸ್ತಿ (Padma Shri Award) ಪಡೆದ ತೆಲಂಗಾಣದ (Telangana) ಸಾಧಕ ದರ್ಶನಂ ಮೊಗುಳಯ್ಯ (Darshanam Mogulaiah) ಅವರು ಈಗ ಹೊಟ್ಟೆಪಾಡಿಗಾಗಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಈ ಫೋಟೊಗಳು ಹಾಗೂ ವಿಡಿಯೊಗಳು (Viral News) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಹೌದು, ಸಂಗೀತ ವಾದನವಾದ ಕಿನ್ನೇರವನ್ನು ನುಡಿಸುವಲ್ಲಿ, ಆ ವಾದನಕ್ಕೆ ರಾಷ್ಟ್ರೀಯ ಗೌರವ ಸಿಗುವಲ್ಲಿ ದರ್ಶನಂ ಮೊಗುಳಯ್ಯ ಅವರ ಪಾತ್ರ ನಿರ್ಣಾಯಕವಾಗಿದೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವು 2022ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಆಗ ರಾಷ್ಟ್ರಪತಿಯಾಗಿದ್ದ ರಾಮನಾಥ್‌ ಕೋವಿಂದ್‌ ಅವರು ದರ್ಶನಂ ಮೊಗುಳಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇದಾದ ಬಳಿಕ ಇವರು ಭಾರತದಾದ್ಯಂತ ಸುದ್ದಿಯಾಗಿದ್ದರು. ಜನರಿಂದಲೂ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿತ್ತು.

ಈಗ ದಿನಗೂಲಿ ಕಾರ್ಮಿಕ

ಪದ್ಮಶ್ರೀ ಪ್ರಶಸ್ತಿ ಪಡೆದ ದರ್ಶನಂ ಮೊಗುಳಯ್ಯ ಅವರು ಈಗ ಅಂದರೆ 73ನೇ ವಯಸ್ಸಿನಲ್ಲಿ ಹೈದರಾಬಾದ್ ಬಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬಕ್ಕೆ ಇವರೇ ಆಧಾರ ಸ್ತಂಭವಾಗಿದ್ದು, ಮೂರು ಹೊತ್ತಿನ ಊಟಕ್ಕಾಗಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ, ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಸಾಧಕ ಇಳಿ ವಯಸ್ಸಿನಲ್ಲಿ ಊಟಕ್ಕಾಗಿ ಕೂಲಿ ಕೆಲಸ ಮಾಡಬೇಕಾ ಎಂದು ಜನ ಪ್ರಶ್ನಿಸಿದ್ದಾರೆ.

ಸರ್ಕಾರ ಕೊಟ್ಟ ಕೋಟಿ ರೂ. ಏನಾಯ್ತು?

ದರ್ಶನಂ ಮೊಗುಳಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡುತ್ತಲೇ ತೆಲಂಗಾಣ ಸರ್ಕಾರವು ಅವರಿಗೆ ಒಂದು ಕೋಟಿ ರೂ. ಪ್ರೋತ್ಸಾಹ ಧನ ನೀಡಿತ್ತು. ಆಗ ಸಿಎಂ ಆಗಿದ್ದ ಕೆ.ಚಂದ್ರಶೇಖರ್‌ ರಾವ್‌ ಅವರು ಇವರಿಗೆ ಒಂದು ನಿವೇಶನವನ್ನೂ ಮಂಜೂರು ಮಾಡಿದ್ದರು. ಆದರೆ, ಸರ್ಕಾರ ಕೊಟ್ಟ ಪ್ರೋತ್ಸಾಹಧನದಲ್ಲಿ ಒಂದಷ್ಟು ಹಣವನ್ನು ಮಗಳ ಮದುವೆಗೆ ಖರ್ಚು ಮಾಡಿದ ಅವರು, ಉಳಿದ ಹಣವನ್ನು ಸಾಲ ತೀರಿಸಲು, ಕುಟುಂಬದ ತುರ್ತು ಸಂದರ್ಭಗಳಿಗೆ ಬಳಸಿದ್ದಾರೆ. ಹಾಗಾಗಿ, ಅವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ, ಇಂತಹ ಸಾಧಕನಿಗೆ ಸರ್ಕಾರವು ನೆರವು ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Lok Sabha Election: ತರಕಾರಿ ಮಾರಿ ಪದ್ಮಶ್ರೀ ಪುರಸ್ಕೃತ ಅಭ್ಯರ್ಥಿ ಚುನಾವಣೆ ಪ್ರಚಾರ! ಯಾರಿವರು?

Exit mobile version