ವಾಷಿಂಗ್ಟನ್: ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನವು ತನ್ನ ಆಸ್ತಿಯನ್ನು, ಕಟ್ಟಡಗಳನ್ನು ಮಾರಾಟ ಮಾಡುವ ಹೀನ ಸ್ಥಿತಿಗೆ ಬಂದಿದೆ. ಇದಕ್ಕೆ ನಿದರ್ಶನ ಎಂಬಂತೆ, ಅಮೆರಿಕದಲ್ಲಿರುವ ರಾಯಭಾರ ಕಚೇರಿಗಳ ಆಸ್ತಿಗಳನ್ನು ಮಾರಾಟ ಮಾಡಲು (Pak Embassy For Sale) ಪಾಕಿಸ್ತಾನ ತೀರ್ಮಾನಿಸಿದೆ. ಅಲ್ಲದೆ, ಅಚ್ಚರಿ ಎಂಬಂತೆ, ಆಸ್ತಿ ಖರೀದಿಗೆ ಭಾರತದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಬಿಡ್ ಮಾಡಿದ್ದು, ಪಾಕ್ ರಾಯಭಾರ ಕಚೇರಿಯ ಆಸ್ತಿಗಳು ಭಾರತೀಯ ಉದ್ಯಮಿಯ ಪಾಲಾಗುವ ಸಾಧ್ಯತೆ ಇದೆ.
ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ರಾಯಭಾರ ಕಚೇರಿಯನ್ನು ಮಾರಾಟ ಮಾಡಲು ಪಾಕಿಸ್ತಾನ ಸರ್ಕಾರ ತೀರ್ಮಾನಿಸಿದೆ. ಇದು 1950ರಿಂದ 2000ನೇ ಇಸವಿವರೆಗೆ ರಕ್ಷಣಾ ವಿಭಾಗದ ನಿವಾಸವಾಗಿತ್ತು. ಆದರೆ, ಇದರಲ್ಲಿ ಕಾರ್ಯಚಟುವಟಿಕೆಗಳು ನಿಷ್ಕ್ರಿಯಗೊಂಡ ಕಾರಣ 2018ರಲ್ಲಿ ರಾಜತಾಂತ್ರಿಕ ಮಾನ್ಯತೆ ರದ್ದಾಗಿದೆ. ಹಾಗಾಗಿ, ಪಾಕಿಸ್ತಾನವು ತೆರಿಗೆ ಪಾವತಿಸಬೇಕಾಗಿದೆ. ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ತೊಂದರೆ ಅನುಭವಿಸುತ್ತಿರುವ ಪಾಕಿಸ್ತಾನಕ್ಕೆ ತೆರಿಗೆ ಪಾವತಿಯೂ ಕಷ್ಟವಾಗಿದೆ. ಹಾಗಾಗಿ, ಮಾರಾಟಕ್ಕೆ ಮುಂದಾಗಿದೆ.
ಖರೀದಿ ರೇಸ್‌ನಲ್ಲಿರುವವರು ಯಾರು?
ವಾಷಿಂಗ್ಟನ್‌ನಲ್ಲಿರುವ ರಾಯಭಾರ ಕಚೇರಿಯ ಖರೀದಿಗೆ ಇದುವರೆಗೆ ಮೂವರು ಬಿಡ್‌ದಾರರು ಮುಂದಾಗಿದ್ದಾರೆ. ಜಿವಿಶ್ ಗ್ರೂಪ್ (Jewish Group) ಒಂದು 56.25 ಕೋಟಿ ರೂ. (6.8 ದಶಲಕ್ಷ ಡಾಲರ್)ಗೆ ಬಿಡ್ ಮಾಡಿದೆ. ಇನ್ನು ಭಾರತ ಮೂಲದ ರಿಯಲ್ ಎಸ್ಟೇಟ್ ಗ್ರೂಪ್ (Indian Realty group) 41.41 ಕೋಟಿ ರೂ. (5 ದಶಲಕ್ಷ ಡಾಲರ್)ಗೆ ಬಿಡ್ ಮಾಡಿದೆ. ಮತ್ತೊಂದು ಗ್ರೂಪ್ 33.10 ಕೋಟಿ ರೂ. (4 ದಶಲಕ್ಷ ಡಾಲರ್)ಗೆ ಬಿಡ್ ಮಾಡಿದೆ. ಹಾಗಾಗಿ, ಪಾಕ್ ರಾಯಭಾರ ಕಚೇರಿ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಭಾರತದ ಬಿಡ್ಡರ್ ಇರುವುದು ಪಾಕಿಸ್ತಾನಕ್ಕೆ ತಲೆನೋವಾಗಿಯೂ ಪರಿಣಮಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | ಪಾಕಿಸ್ತಾನದ ಮತ್ತೊಂದು ಡ್ರೋನ್ಗೆ ಬಿಎಸ್ಎಫ್ ಗುಂಡೇಟು; ಇಂದು ಬೆಳಗ್ಗೆ ಪತ್ತೆಯಾಯ್ತು ಅವಶೇಷ