ನವದೆಹಲಿ: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅರ್ನಿಯಾ ಸೆಕ್ಟರ್‌ನಲ್ಲಿರುವ ಭಾರತೀಯ ಗಡಿ ಪೋಸ್ಟ್‌ನಲ್ಲಿ ಪಾಕಿಸ್ತಾನದ ರೇಂಜರ್‌ಗಳು (Pakistan Rangers) ಗುಂಡಿನ ದಾಳಿ (Pakistan Firing) ನಡೆಸಿದ್ದರಿಂದ ಗಡಿ ಭದ್ರತಾ ಪಡೆಯ (Border Security Force – BSF) ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಪಾಕಿಸ್ತಾನವು ಕದನ ವಿರಾಮವನ್ನು (Ceasefire) ಉಲ್ಲಂಘಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.
ಐಸಿಸಿ ವರ್ಲ್ಡ್ ಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡವು ಭಾರತೀಯ ತಂಡ ಎದುರು ಹೀನಾಯ ಸೋತ ಬೆನ್ನಲ್ಲೇ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಂಗಳವಾರ ರಾತ್ರಿ 10.20 ಸುಮಾರಿಗೆ ಗಡಿಯಲ್ಲಿ ಗುಂಡಿನ ಮೊರೆತ ಕೇಳಿ ಬಂದಿದೆ. ಈ ವೇಳೆ ಗಾಯಗೊಂಡ ಇಬ್ಬರು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . “ಪಾಕಿಸ್ತಾನ ಸೇನೆ ಗುಂಡು ಹಾರಿಸಿದಾಗ ಗಡಿ ಭದ್ರತಾ ಪಡೆಯ ಇಬ್ಬರು ಸೈನಿಕರು ವಿದ್ಯುತ್ ದೀಪಗಳನ್ನು ಹೊತ್ತಿಸುತ್ತಿದ್ದರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆಯ ಗುಂಡಿನ ದಾಳಿಗೆ, ಭಾರತೀಯ ಯೋಧರು ಕೂಡ ತಕ್ಕ ಉತ್ತರ ನೀಡಿದ್ದಾರೆ. ಪಾಕಿಸ್ತಾನದ ಇಕ್ಬಾಲ್ ಮತ್ತು ಖನ್ನೂರ್ ಪೋಸ್ಟ್‌ಗಳ ಮೇಲೆ ನಮ್ಮ ಯೋಧರು ಗುಂಡಿನ ಮಳೆಗರಿದಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ Explainer | ಪಾಕಿಸ್ತಾನದ ಡ್ರೋನ್ ಉರುಳಿಸಲಿದೆ ಭಾರತೀಯ ಸೇನೆಯ ಗಿಡುಗ, ಹೇಗಿದರ ಆಪರೇಷನ್?
ಅಂತಾರಾಷ್ಟ್ರೀಯ ಗಡಿಯಾದ ವಿಕ್ರಮ್ ಬಿಒಪಿ ಬಳಿ ಈ ಘಟನೆ ನಡೆದಿದೆ. ಗಾಯಗೊಂಡ ಇಬ್ಬರು ಯೋಧರು ಗಡಿಯಿಂದ 60 ಮೀಟರ್ ಹಾಗೂ ಬಾರ್ಡರ್ ಔಟ್ ಪೋಸ್ಟ್ ವಿಕ್ರಮ್‌ನಿಂದ 1500 ಮೀಟರ್ ದೂರದಲ್ಲಿ ವಿದ್ಯುತ್ ದೀಪಗಳನ್ನು ಬೆಳಗುತ್ತಿದ್ದರು. ಆಗ ಪಾಕಿಸ್ತಾನ ಕಡೆಯಿಂದ ದಾಳಿ ಆರಂಭವಾಯಿತು ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಸೇನೆಗಳು 2021 ಫೆಬ್ರವರಿ 25ರಂದು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿವೆ. ಪಾಕಿಸ್ತಾನದ ಕಡೆಯಿಂದ ಹಲವಾರು ಕದನ ವಿರಾಮ ಉಲ್ಲಂಘನೆಗಳ ನಂತರ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಎರಡೂ ರಾಷ್ಟ್ರಗಳು ಕದನ ವಿರಾಮವನ್ನು ಜಾರಿಗೊಳಿಸುವುದಾಗಿ ಘೋಷಿಸಿದವು. ಕದನ ವಿರಾಮವು ಎಲ್‌ಒಸಿ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಜನರಿಗೆ ಭಾರೀ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೆ, ಈಗ ಮತ್ತೆ ಪಾಕಿಸ್ತಾನ ತನ್ನ ಹಳೇ ಚಾಳಿಗೆ ಮರಳಿದೆ.