Site icon Vistara News

SCO Meet: ಪ್ರಧಾನಿ ಮೋದಿಯನ್ನು ಕಟುಕ ಎಂದಿದ್ದ ಪಾಕಿಸ್ತಾನ ಸಚಿವ ಭಾರತಕ್ಕೆ ಬರಲಿದ್ದಾರೆ; ಗೋವಾಕ್ಕೆ ಭೇಟಿ

Pakistan Minister Bilawal Bhutto will attend SCO Meet Held in Goa

#image_title

ಪ್ರಸಕ್ತ ವರ್ಷದ ಶಾಂಘೈ ಸಹಕಾರ ಸಂಘಟನೆ ಶೃಂಗದ (SCO Meet) ಆತಿಥ್ಯವನ್ನು ವಹಿಸಿಕೊಂಡಿರುವ ಭಾರತ, ಈ ಶೃಂಗದ ಪೂರ್ವಭಾವಿಯಾಗಿ ಹಲವು ಸಭೆ-ಸಮಾವೇಶವನ್ನು ಆಯೋಜಿಸುತ್ತಿದೆ. ಅದರ ಒಂದು ಭಾಗವಾಗಿ ಮೇ 4 ಮತ್ತು ರಂದು ಗೋವಾದಲ್ಲಿ ವಿದೇಶಾಂಗ ಇಲಾಖೆ ಸಚಿವರ ಸಭೆಯನ್ನು ಹಮ್ಮಿಕೊಂಡಿದೆ. ಈ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಕೂಡ ಪಾಲ್ಗೊಳ್ಳುವುದು ಖಚಿತವಾಗಿದೆ. ಪಾಕ್​ನಿಂದ ಆಗಮಿಸುವ ನಿಯೋಗದ ನೇತೃತ್ವವನ್ನು ಇವರೇ ವಹಿಸಿಕೊಳ್ಳಲಿದ್ದಾರೆ.ಈ ಮೂಲಕ 12 ವರ್ಷಗಳ ನಂತರ ಪಾಕಿಸ್ತಾನದ ವಿದೇಶಾಂಗ ಸಚಿವರೊಬ್ಬರು ಭಾರತಕ್ಕೆ ಬಂದಂತಾಗುತ್ತದೆ.

ಶಾಂಘೈ ಸಹಕಾರ ಸಂಘಟನೆಯ ವ್ಯಾಪ್ತಿಯಲ್ಲಿ ಭಾರತ, ಚೀನಾ, ತಜಿಕಿಸ್ತಾನ್​, ರಷ್ಯಾ, ಉಜ್ಬೇಕಿಸ್ತಾನ್​, ಕಜಾಕಿಸ್ತಾನ್​, ಕಿರ್ಗಿಸ್ತಾನ್​, ಪಾಕಿಸ್ತಾನ ದೇಶಗಳು ಸೇರುತ್ತವೆ. ಕಳೆದ ವರ್ಷ ಉಜ್ಬೇಕಿಸ್ತಾನ್​ದಲ್ಲಿ ಶೃಂಗಸಭೆ ನಡೆದಿತ್ತು. ಈ ಸಲ ಭಾರತ ಅಧ್ಯಕ್ಷತೆ ವಹಿಸಲಿದೆ. ಶಾಂಘೈ ಶೃಂಗಸಭೆಯ ಆತಿಥ್ಯ ವಹಿಸುವ ರಾಷ್ಟ್ರ, ಅದರ ಪೂರ್ವಭಾವಿಯಾಗಿ ಯಾವುದೇ ಸಭೆ ನಡೆಸಿದರೂ, ಈ ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಎಲ್ಲ ದೇಶಗಳಿಗೂ ಆಮಂತ್ರಣ ನೀಡಲೇಬೇಕು. ಅದರಂತೆ ಮೇ ತಿಂಗಳಲ್ಲಿ ನಡೆಯಲಿರುವ ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಗೆ ಪಾಕಿಸ್ತಾನ ಸೇರಿ ಉಳಿದೆಲ್ಲ ದೇಶಗಳಿಗೆ ಭಾರತ ಜನವರಿಯಲ್ಲಿಯೇ ಆಮಂತ್ರಣ ನೀಡಿತ್ತು. ಆದರೆ ಪಾಕಿಸ್ತಾನದ ಸಚಿವರು ಭಾರತಕ್ಕೆ ಬರುವುದು ಅನುಮಾನವಾಗಿತ್ತು.

ಮೋದಿ ಕಟುಕ ಎಂದಿದ್ದ ಬಿಲಾವಲ್​ ಭುಟ್ಟೋ
ಇತ್ತೀಚೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವ ಬಿಲಾವಲ್​ ಭುಟ್ಟೋ, ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ಒಸಮಾ ಬಿನ್ ಲಾಡೆನ್​ ಸತ್ತಿದ್ದಾನೆ, ಆದರೆ ಗುಜರಾತ್​ ಜನರ ಪಾಲಿನ ಕಟುಕ ಬದುಕಿದ್ದಾನೆ. ಆತನೇ ಈಗ ಭಾರತದ ಪ್ರಧಾನಿಯಾಗಿದ್ದಾನೆ’ ಎಂದು ಹೇಳಿದ್ದರು. ಅದಕ್ಕೂ ಮುನ್ನ ವಿಶ್ವಸಂಸ್ಥೆ ಸಭೆಯಲ್ಲಿ ಮಾತನಾಡಿದ್ದ ಭಾರತ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಪಾಕಿಸ್ತಾನವರು ಉಗ್ರರ ಕೇಂದ್ರ ಎಂದು ವ್ಯಂಗ್ಯವಾಡಿದ್ದರು. ಅದಕ್ಕೆ ತಿರುಗೇಟು ಕೊಡಲು ಹೋಗಿ ಭುಟ್ಟೋ ವಿವಾದ ಸೃಷ್ಟಿಸಿದ್ದರು.

ಇದನ್ನೂ ಓದಿ: SCO Meet In Goa: 12 ವರ್ಷಗಳ ಬಳಿಕ ಭಾರತಕ್ಕೆ ಬರಲಿದ್ದಾರಾ ಪಾಕ್​ ವಿದೇಶಾಂಗ ಸಚಿವ?; ಪ್ರಧಾನಿ ಶೆಹಬಾಜ್​ ಶರೀಫ್​ ನಿಲುವೇನು?

ಬಿಲಾವಲ್ ಭುಟ್ಟೋ ಹೇಳಿಕೆಗೆ ಅಪಾರ ಖಂಡನೆ ವ್ಯಕ್ತವಾಗಿತ್ತು. ನಮ್ಮ ದೇಶದಲ್ಲಿ ಅನೇಕ ಕಡೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬಿಲಾವಲ್​ ಭುಟ್ಟೋ ಪ್ರತಿಕೃತಿ ದಹನ ಮಾಡಿದ್ದರು. ಹಾಗೇ, ದೆಹಲಿಯಲ್ಲಂತೂ ಕಾರ್ಯಕರ್ತರು ಪಾಕಿಸ್ತಾನ ರಾಯಭಾರಿ ಕಚೇರಿಯತ್ತ ವೀರಾವೇಶದಿಂದ ಮುನ್ನುಗ್ಗಿ, ಪ್ರತಿಭಟಿಸಿದ್ದರು. ಅವರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರೂ ಸಾಧ್ಯವಾಗಿರಲಿಲ್ಲ.

Exit mobile version