ನವ ದೆಹಲಿ : ಪ್ರತಿಪಕ್ಷಗಳು ದಿನ ಬೆಳಗಾಗುತ್ತಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi ) ಅವರನ್ನು ತೆಗಳುತ್ತಿರುವ ನಡುವೆಯೇ, ಪಾಕಿಸ್ತಾನದ ಪತ್ರಿಕೆಯೊಂದು ಮೋದಿಯ ಸಾಧನೆಯನ್ನು ಹೊಗಳಿ ಲೇಖನ ಬರೆದಿದೆ. ಅಲ್ಲಿನ ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ರಾಜಕೀಯ ವಿಶ್ಲೇಷಕರೊಬ್ಬರು ಮೋದಿ ಜಾರಿಗೆ ತಂದಿರುವ ಆರ್ಥಿಕ ನೀತಿಯಿಂದ ಉಂಟಾಗಿರುವ ಪ್ರಗತಿ ಹಾಗೂ ವಿದೇಶಗಳಲ್ಲಿ ಮೋದಿಯ ವರ್ಚಸ್ಸು ಹೆಚ್ಚುತ್ತಿರುವುದನ್ನು ಕೊಂಡಾಡಿದ್ದಾರೆ.
ಪಾಕಿಸ್ತಾನದ ಪ್ರಖ್ಯಾತ ರಾಜಕೀಯ, ಆರ್ಥಿಕ ಹಾಗೂ ಭದ್ರತಾ ವಿಶ್ಲೇಷಕರಾಗಿರುವ ಶೆಹಜಾದ್ ಚೌಧರಿ ಅವರು ಲೇಖನವನ್ನು ಬರೆದಿದ್ದು, ಮೋದಿ ಆಡಳಿತದಲ್ಲಿ ಭಾರತವು ಹೂಡಿಕೆದಾರರ ಪ್ರಶಸ್ತ ತಾಣವಾಗಿ ಮಾರ್ಪಟ್ಟಿದೆ ಎಂದು ಉಲ್ಲೇಖಿಸಿದ್ದಾರೆ. ಮುಂದುವರಿದ ಅವರು ಇದೊಂದು ಅವಿಸ್ಮರಣೀಯ ಸಾಧನೆ ಎಂಬುದಾಗಿಯೂ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರದ ಅಡಿಯಲ್ಲಿ ಭಾರತ ಮೂರು ಟ್ರಿಯಲಿಯನ್ ಆರ್ಥಿಕತೆಯ ಗುರಿಯನ್ನು ಸಾಧಿಸಿದೆ. ಜಿಡಿಪಿಯು ವೃದ್ಧಿಯಾಗುತ್ತಿದೆ. ಉತ್ತಮ ವಿದೇಶಾಂಗ ನೀತಿಗಳ ಮೂಲಕ ಮುಂದುವರಿದ ದೇಶಗಳಲ್ಲಿ ಪ್ರಭಾವ ಬೀರುತ್ತಿದೆ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.
ಭಾರತ ಕೃಷಿ ಉತ್ಪಾದನೆಯಲ್ಲಿ ದೊಡ್ಡ ಸಾಧನೆ ಮಾಡುತ್ತಿದೆ. ಅದೇ ರೀತಿ ಐಟಿ ಉದ್ಯಮದಲ್ಲೂ ಅಗಾಧ ಅಭಿವೃದ್ಧಿ ಹೊಂದಿದೆ. 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಎಕರೆಯೊಂದಕ್ಕೆ ಗರಿಷ್ಠ ಇಳುವರಿ ಹಾಗೂ ಸಂಪಾದನೆ ಪಡೆಯಲಾಗುತ್ತಿದೆ. ಇವೆಲ್ಲವೂ ಮೋದಿ ಸರಕಾರದ ಆರ್ಥಿಕ ಅಭಿವೃದ್ಧಿಯ ಪ್ರತೀಕಗಳು ಎಂಬದಾಗಿ ತಮ್ಮ ಲೇಖನದಲ್ಲಿ ದಾಖಲಿಸಿದ್ದಾರೆ.
ಪ್ರಧಾನಿ ಮೋದಿ ಅವರು ನವ ಭಾರತದ ಹೊಸ ಬ್ರಾಂಡ್ ಸೃಷ್ಟಿಸುತ್ತಿದ್ದಾರೆ. ಈ ಹಿಂದೆ ಯಾವ ನಾಯಕನೂ ಮಾಡದ ದೊಡ್ಡ ಸಾಧನೆ ಇದಾಗಿದೆ. ಪ್ರಮುಖವಾಗಿ ಭಾರತವು ತನ್ನ ಬೇಡಿಕೆಗೆ ಹಾಗೂ ಅಗತ್ಯಕ್ಕೆ ತಕ್ಕ ಹಾಗೆ ಬೆಳವಣಿಗೆ ಕಂಡಿದೆ ಎಂದು ಬರೆದಿದ್ದಾರೆ.
ಈ ಹಿಂದೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಮೋದಿ ಸರಕಾರದ ವಿದೇಶಾಂಗ ನೀತಿಯನ್ನು ಹೊಗಳಿ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ | ಕನ್ನಡದಲ್ಲೇ ಟ್ವೀಟ್ ಮಾಡಿ ಮಕರ ಸಂಕ್ರಾಂತಿ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ; ಪೊಂಗಲ್, ಮಾಗ್ ಬಿಹು ಹಬ್ಬಗಳಿಗೂ ವಿಶ್