Site icon Vistara News

ಪಿಒಕೆ ನಮ್ಮದು ಎಂದಿದ್ದಕ್ಕೆ ಪಾಕ್ ಬಳೆ ತೊಟ್ಟಿಲ್ಲ ಎಂದ ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ!‌ ಇವರ ಬೆಂಬಲ ಯಾರಿಗೆ?

Farooq Abdullah

Pakistan not wearing bangles: Farooq Abdullah's reminder as Rajnath Singh says 'PoK will be merged with India'

ಶ್ರೀನಗರ: ಲೋಕಸಭೆ ಚುನಾವಣೆ (Lok Sabha Election 2024) ಹೊತ್ತಿನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರ (PoK) ಕುರಿತು ಮಹತ್ವದ ಚರ್ಚೆಯೊಂದು ಶುರುವಾಗಿದೆ. “ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತ ವಶಪಡಿಸಿಕೊಳ್ಳುವುದು, ಸೇನೆಯನ್ನು ನುಗ್ಗಿಸಿ ವಾಪಸ್‌ ಪಡೆಯುವುದು ಬೇಕಾಗಿಲ್ಲ. ಅಲ್ಲಿನ ಜನರೇ ಭಾರತದ ಜತೆ ವಿಲೀನವಾಗಲು ಬಯಸುತ್ತಿದ್ದಾರೆ” ಎಂಬುದಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಹೇಳಿದ್ದಾರೆ. ಇನ್ನು ಇದಕ್ಕೆ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ (Farooq Abdullah) ಪ್ರತಿಕ್ರಿಯಿಸಿದ್ದು, “ಭಾರತ ಆಕ್ರಮಣ ಮಾಡುವುದು ಬೇಕಾಗಿಲ್ಲ. ಪಾಕಿಸ್ತಾನವೇನೂ ಬಳೆ ತೊಟ್ಟಿಲ್ಲ” ಎಂದು ಹೇಳಿದ್ದಾರೆ. ಇದು ಈಗ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.

ರಾಜನಾಥ್‌ ಸಿಂಗ್‌ ಹೇಳಿದ್ದೇನು?

ಪಿಟಿಐಗೆ ಸಂದರ್ಶನ ನೀಡುವ ವೇಳೆ ರಾಜನಾಥ್‌ ಸಿಂಗ್‌ ಹೇಳಿಕೆ ನೀಡಿದ್ದರು. “ಪಿಒಕೆ ವಿಚಾರದಲ್ಲಿ ಭಾರತ ಏನೂ ಮಾಡಬೇಕಿಲ್ಲ. ಜಮ್ಮು-ಕಾಶ್ಮೀರದ ಪರಿಸ್ಥಿತಿ ಬದಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಜತೆಗೆ ಆರ್ಥಿಕ ಪ್ರಗತಿಯಾಗುತ್ತಿದೆ. ಇದರಿಂದಾಗಿ ನಾವು ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಬೇಕಿಲ್ಲ. ಪಿಒಕೆ ನಾಗರಿಕರೇ ಭಾರತದೊಂದಿಗೆ ವಿಲೀನವಾಗಲು ಬಯಸುತ್ತಿದ್ದಾರೆ. ಪಿಒಕೆ ಮೊದಲು ಕೂಡ ನಮ್ಮದಾಗಿತ್ತು. ಮುಂದೆಯೂ ನಮ್ಮದಾಗಿ ಇರಲಿದೆ. ಹಾಗಂತ, ಪಿಒಕೆಗೆ ಸೈನಿಕರನ್ನೇ ಕಳುಹಿಸಬೇಕಾಗಿಲ್ಲ. ಅಲ್ಲಿನ ಜನರೇ, ಭಾರತದೊಂದಿಗೆ ವಿಲೀನವಾಗಲು ಬಯಸುತ್ತಿದ್ದಾರೆ” ಎಂಬುದಾಗಿ ರಾಜನಾಥ್‌ ಸಿಂಗ್‌ ಹೇಳಿದ್ದರು.

ಫಾರೂಕ್‌ ಅಬ್ದುಲ್ಲಾ ಪ್ರತಿಕ್ರಿಯೆ ಏನು?

ಸುದ್ದಿಗೋಷ್ಠಿ ನಡೆಸಿದ ಜಮ್ಮು-ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ, ರಾಜನಾಥ್‌ ಸಿಂಗ್‌ ಹೇಳಿಕೆಗೆ ಪ್ರತಿಕ್ರಿಯಿಸಿದರು. “ದೇಶದ ರಕ್ಷಣಾ ಸಚಿವರು ಪಿಒಕೆ ಮೇಲೆ ದಾಳಿ ಮಾಡಿ ಎಂಬುದಾಗಿ ಹೇಳಿದರೆ, ಅದನ್ನು ತಡೆಯಲು ನಾವು ಯಾರು? ಆದರೆ, ಒಂದು ನೆನಪಿರಲಿ. ಪಾಕಿಸ್ತಾನವೇನೂ ಬಳೆ ತೊಟ್ಟುಕೊಂಡು ಕೂತಿಲ್ಲ. ಅವರ ಬಳಿಯೂ ಪರಮಾಣು ಬಾಂಬ್‌ಗಳಿವೆ. ಆ ಪರಮಾಣು ಬಾಂಬ್‌ಗಳು ನಮ್ಮ ಮೇಲೆ ಬಂದು ಬೀಳುತ್ತವೆ” ಎಂಬುದಾಗಿ ಫಾರೂಕ್‌ ಅಬ್ದುಲ್ಲಾ ಎಚ್ಚರಿಸಿದ್ದಾರೆ.

ಜೈಶಂಕರ್‌ ಕೂಡ ಮಹತ್ವದ ಹೇಳಿಕೆ

ಪಿಒಕೆ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಕೂಡ ಹೇಳಿಕೆ ನೀಡಿದ್ದಾರೆ. “ಪಿಒಕೆ ಭಾರತದ ಭಾಗವಾಗಿದೆ. ಪಿಒಕೆ ಭಾರತದ ಭಾಗ ಎಂಬುದಾಗಿ ಸಂಸತ್ತಿನಲ್ಲೂ ನಿರ್ಣಯ ತೆಗೆದುಕೊಳ್ಳಲಾಗಿದೆ. ಪಿಒಕೆ ಮೊದಲು ಕೂಡ ನಮ್ಮದಾಗಿತ್ತು. ಆದರೆ, ಅದನ್ನು ಅತಿಕ್ರಮಣ ಮಾಡಿಕೊಳ್ಳಲು ಕಾರಣರಾದವರು ಯಾರು? ಅದರ ಮೇಲೆ ಬೇರೆಯವರು ನಿಯಂತ್ರಣ ಸಾಧಿಸಲು ಯಾರು ಕಾರಣ” ಎಂಬುದಾಗಿ ಪರೋಕ್ಷವಾಗಿ ಕಾಂಗ್ರೆಸ್‌ಗೆ ಕುಟುಕಿದರು. ಇದಕ್ಕೂ ಮೊದಲು ಕೂಡ, ಅಮಿತ್‌ ಶಾ ಅವರು ಪಿಒಕೆ ನಮ್ಮದೇ ಎಂದು ಹೇಳಿದ್ದರು.

ಇದನ್ನೂ ಓದಿ: ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

Exit mobile version