ಲಖನೌ: ಉತ್ತರ ಪ್ರದೇಶದ ಅಲಿಗಢದಲ್ಲಿ ತಿರಂಗಾ ಯಾತ್ರೆಯ ವೇಳೆ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಲಾಗಿದೆ. ಇದರ ವಿಡಿಯೋಗಳು ಹೊರಬಿದ್ದ ನಂತರ ಹಲವಾರು ವಿದ್ಯಾರ್ಥಿಗಳ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ.
ಆಗಸ್ಟ್ 13ರಂದು, ಉತ್ತರ ಪ್ರದೇಶದ ಅಲಿಗಢದಲ್ಲಿ ಕಾಲೇಜೊಂದು ತಿರಂಗಾ ರ‍್ಯಾಲಿಯನ್ನು ಆಯೋಜಿಸಿತ್ತು. ಈ ಸಂದರ್ಭ ಕೆಲವು ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದರು. ಇದನ್ನು ನೋಡಿದ ಕೆಲವರು ಮೆರವಣಿಗೆಯ ವಿಡಿಯೋ ಸಮೇತ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರು. ಕಾಲೇಜು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ನಂತರ ದೂರುದಾರರು ವೀಡಿಯೊದೊಂದಿಗೆ ಪೊಲೀಸರನ್ನು ಸಂಪರ್ಕಿಸಿದರು. ಅದರ ಆಧಾರದ ಮೇಲೆ ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್ ಅಡಿ ದೂರು ದಾಖಲಿಸಲಾಗಿದೆ.
“ನಮ್ಮ ಕಾಲೇಜಿನಿಂದ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಇದ್ದಕ್ಕಿದ್ದಂತೆ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳು ಕೇಳಿಬಂದವು. ಕೂಡಲೇ ನಮ್ಮ ಶಿಕ್ಷಕರಿಗೆ ವಿಷಯ ತಿಳಿಸಿದ್ದೇವೆ. ಅವರು ಕಾಲೇಜಿನ ವಿದ್ಯಾರ್ಥಿಗಳೇ ಅಥವಾ ಹೊರಗಿನವರೇ ಎಂದು ನನಗೆ ತಿಳಿದಿಲ್ಲ” ಎಂದು ಕಾಲೇಜಿನ ವಿದ್ಯಾರ್ಥಿ ರಾಜನ್ ಕುಮಾರ್ ತಿಳಿಸಿದ್ದಾರೆ.
ʼನಾವು ನಮ್ಮದೇ ಅದ ತನಿಖೆಯನ್ನು ನಡೆಸಿದ್ದೇವೆ. ಯಾವುದೇ ವೀಡಿಯೋ ಪತ್ತೆಯಾಗಿಲ್ಲʼ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ರ‍್ಯಾಲಿಯಲ್ಲಿ ದೇಶಭಕ್ತಿಯ ಘೋಷಣೆಗಳ ಜೊತೆಗೆ ಕೆಲವು ಆಕ್ಷೇಪಾರ್ಹ ಘೋಷಣೆಗಳನ್ನು ಹೇಳಿದ ಬಗ್ಗೆ ವಿಡಿಯೋ ನೋಡಿದ ನಂತರ ಅರಿವಿಗೆ ಬಂದಿದೆ. ಪ್ರಾಂಶುಪಾಲರು ಮತ್ತು ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದುಅಲಿಗಢದ ಪೊಲೀಸ್ ವರಿಷ್ಠಾಧಿಕಾರಿ ಪಲಾಶ್ ಬನ್ಸಾಲ್ ಹೇಳಿದ್ದಾರೆ.
ಇದನ್ನೂ ಓದಿ: ಲಖನೌನ ನೂತನ ಲುಲು ಮಾಲ್‌ನಲ್ಲಿ ನಮಾಜ್‌ಗೆ ಅವಕಾಶ, ಹಿಂದೂ ಸಂಘಟನೆಗಳ ಆಕ್ಷೇಪ