ಶ್ರೀನಗರ: ಭಾರತ- ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಆರ್‌ಎಸ್ ಪುರ ಸೆಕ್ಟರ್‌ನಲ್ಲಿ ಸೋಮವಾರ ರಾತ್ರಿ ಪಾಕಿಸ್ತಾನಿ ಒಳನುಸುಳುಕೋರನೊಬ್ಬನನ್ನು ಬಿಎಸ್‌ಎಫ್ ಗುಂಡಿಕ್ಕಿ ಸಾಯಿಸಿದೆ. ಭಾನುವಾರ ಮತ್ತು ಸೋಮವಾರ ನಡುವಿನ ರಾತ್ರಿ ೧೨.೧೦ರ ಹೊತ್ತಿಗೆ ಬಕಾರ್ ಪುರ ಗಡಿ ಪೋಸ್ಟ್‌ನ ಬಳಿ ಒಳನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಪ್ರಜೆಯನ್ನು ಬಿಎಸ್‌ಎಫ್ ೩೬ನೇ ಬೆಟಾಲಿಯನ್‌ನ ಜವಾನರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನುಸುಳುಕೋರ ಕಪ್ಪು ಬಣ್ಣದ ದಿರಸು ಧರಿಸಿದ್ದ ಎಂದು ತಿಳಿಸಿರುವ ಜವಾನರು, ಅವನಿಂದ ಯಾವುದೇ ವಸ್ತುಗಳು ಸಿಕ್ಕಿಲ್ಲ ಎಂದಿದ್ದಾರೆ.
ರಾತ್ರಿ ೧೨.೧೦ರ ಹೊತ್ತಿಗೆ ಬಿಎಸ್‌ಎಫ್ ಜವಾನರು ಕಾವಲು ಕಾಯುತ್ತಿದ್ದಾಗ ಬಕಾರ್‌ಪುರ್ ಔಟ್ ಪೋಸ್ಟ್ ಸಮೀಪ ವ್ಯಕ್ತಿಯೊಬ್ಬ ಪಾಕಿಸ್ತಾನ ಕಡೆಯಿಂದ ಗಡಿ ದಾಟುವ ಉದ್ದೇಶದಿಂದ ವೇಗವಾಗಿ ಬರುತ್ತಿರುವುದು ಕಂಡಿತು. ಅವನನ್ನು ತಡೆಯಲು ಯತ್ನಿಸಿದರೂ ಆತ ಅದಕ್ಕೆ ಗಮನ ಕೊಡದೆ ಮುನ್ನುಗ್ಗಿದ. ಆಗ ಬೇರೆ ದಾರಿಯಿಲ್ಲದೆ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದರು ಎಂದು ಬಿಎಸ್‌ಎಫ್ ವಿವರಣೆ ನೀಡಿದೆ. ಬಳಿಕ ಶವವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಯಾತ್ರೆ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ
ಜೂನ್ ೩೦ರಿಂದ ಅಮರನಾಥ ಯಾತ್ರೆ ಆರಂಭಗೊಳ್ಳುತ್ತಿರುವುದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಭದ್ರತಾ ಕಣ್ಗಾವಲು ಸಜ್ಜುಗೊಳಿಸಲಾಗಿದೆ. ಈ ನಡುವೆ, ದೋಡಾ ಜಿಲ್ಲೆಯಲ್ಲಿ ಒಬ್ಬ ಭಯೋತ್ಪಾದಕನನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದು, ಆತನಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋಟಿ ದೋಡಾದ ನಿವಾಸಿಯಾಗಿರುವ ಫರೀದ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ ಚೀನಾ ನಿರ್ಮಿತ ಪಿಸ್ತೂಲು, ಎರಡು ಮ್ಯಾಗಜಿನ್‌ಗಳು, ೧೪ ಕಾಟ್ರಿಜ್‌ಗಳು ಮತ್ತು ಒಂದು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಉದ್ದೇಶವೇನು?
ಫರೀದ್ ಅಹ್ಮದ್‌ನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಆತ ತಾನು ದೋಡಾದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲು ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಕಳೆದ ಮಾರ್ಚ್‌ನಲ್ಲಿ ತನಗೆ ಶಸ್ತ್ರಾಸ್ತ್ರ ಒದಗಿಸಲಾಗಿತ್ತು ಎಂದು ಆತ ಒಪ್ಪಿಕೊಂಡಿದ್ದಾನೆ. ಆತನಿಗೆ ಶಸ್ತ್ರಾಸ್ತ್ರ ಕೊಟ್ಟವರು ಯಾರು? ಅವರ ಉದ್ದೇಶವೇನು ಎಂಬ ಬಗ್ಗೆ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ| ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್; ಪಾಕಿಸ್ತಾನದ ಇಬ್ಬರು ಸೇರಿ 4 ಭಯೋತ್ಪಾದಕರ ಹತ್ಯೆ