ನವ ದೆಹಲಿ: 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿರುವ ಭಾರತಕ್ಕೆ ಜಗತ್ತಿನ ಹಲವು ದೇಶಗಳು ಶುಭಾಶಯ ಕೋರಿವೆ. ಹಾಗೇ, ಪಾಕಿಸ್ತಾನದ ರಬಾಬ್ ವಾದಕನೊಬ್ಬ ತುಂಬ ವಿಶೇಷವಾಗಿ ಭಾರತಕ್ಕೆ ಸ್ವಾತಂತ್ರ್ಯೋತ್ಸವದ ಶುಭ ಕೋರಿದ್ದಾರೆ. ರಬಾಬ್ ಎಂದರೆ ವೀಣೆ ಮಾದರಿಯ ಒಂದು ಸಂಗೀತ ಉಪಕರಣ. ಅದರಲ್ಲಿ ಭಾರತದ ರಾಷ್ಟ್ರಗೀತೆ ಜನ ಗಣ ಮನವನ್ನು ಅತ್ಯಂತ ಸುಂದರವಾಗಿ ನುಡಿಸಿದ್ದು, ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಹಸಿರು ಇರುವ ಗುಡ್ಡಗಾಡು ಪ್ರದೇಶವೊಂದರಲ್ಲಿ ಕುಳಿತು ರಬಾಬ್ ನುಡಿಸಿದ ಈ ಕಲಾವಿದನ ಹೆಸರು ಸಿಯಾಲ್ ಖಾನ್. ಶುಭ್ರವಾದ ಬಿಳಿ ಬಟ್ಟೆ ಧರಿಸಿ, ಏಕಾಗ್ರತೆಯಿಂದ ಅವರು ರಬಾಬ್ನಲ್ಲಿ ಭಾರತದ ರಾಷ್ಟ್ರಗೀತೆ ಹೊರಹೊಮ್ಮಿಸಿದ್ದಾರೆ. ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಅವರು, ‘ಗಡಿಯಾಚೆಗಿನ ಎಲ್ಲರಿಗೂ ಇದು ನನ್ನ ಉಡುಗೋರೆ’ ಎಂದಿದ್ದಾರೆ. ಹಾಗೇ, ‘ಭಾರತಕ್ಕೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಶಾಂತಿ, ಸಹಿಷ್ಣುತೆ ಮತ್ತು ಭಾರತ-ಪಾಕಿಸ್ತಾನ ನಡುವಿನ ಉತ್ತಮ ಸಂಬಂಧ, ಸ್ನೇಹವನ್ನು ಆಶಿಸುತ್ತ, ನಾನು ರಾಷ್ಟ್ರಗೀತೆಯನ್ನು ನುಡಿಸಲು ಯತ್ನಿಸಿದ್ದೇನೆ’ ಎಂದೂ ಬರೆದುಕೊಂಡಿದ್ದಾರೆ. ಸಿಯಾಲ್ ಖಾನ್ ವಿಡಿಯೋವನ್ನು ಭಾರತೀಯರು ಅನೇಕರು ಮೆಚ್ಚಿಕೊಂಡಿದ್ದಾರೆ. ಪಾಕಿಸ್ತಾನದವರೂ ಕೆಲವರು ಇದೇ ವಿಡಿಯೋ ಶೇರ್ ಮಾಡಿಕೊಂಡು ಭಾರತಕ್ಕೆ ಸ್ವಾತಂತ್ರ್ಯೋತ್ಸವದ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: Viral Video: ಮೊಮ್ಮಗನೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಿದ ಮುಕೇಶ್ ಅಂಬಾನಿ, ನೀತಾ ಅಂಬಾನಿ